ನವದೆಹಲಿ: ಕೇಂದ್ರ ಸರ್ಕಾರ ಜಿಎಸ್‌ಟಿ ಅನುಷ್ಠಾನದಲ್ಲಿ ರಾಜ್ಯಗಳಿಗೆ ಉಂಟಾಗುವ ನಷ್ಟ ಪರಿಹಾರ ನೀಡಲು ಸಂಗ್ರಹಿಸುತ್ತಿದ್ದ ಸೆಸ್‌ನ ಸೆಸ್‌ನ ಅವಧಿಯನ್ನು ೨೦೨೬ರ ಮಾರ್ಚ್ ತನಕ ವಿಸ್ತರಿಸಿದೆ.
ಈ ಸಂಬಂಧ ಹಣಕಾಸು ಸಚಿವಾಲಯವು ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸಿದೆ. ಇದರಿಂದಾಗಿ ರಾಜ್ಯಗಳಿಗೆ ನೀಡಲು ಬಾಕಿ ಇರುವ ೨೦೨೨ರ ಮೇ ಮತ್ತು ಜೂನ್ ಅವಧಿಯ ಪರಿಹಾರವನ್ನು ವಿತರಿಸಲು ಅನುಕೂಲವಾಗಲಿದೆ.
೨೦೨೧ರ ಸೆಪ್ಟೆಂಬರ್‌ನಲ್ಲಿ ನಡೆದ ಜಿಎಸ್‌ಟಿ ಮಂಡಳಿಯಲ್ಲಿ ಕೈಗೊಂಡಿದ್ದ ನಿರ್ಣಯದ ಅನುಸಾರ ಸೆಸ್ ಅವಧಿಯನ್ನು ವಿಸ್ತರಿಸಿ ಅಧಿಸೂಚನೆ ಪ್ರಕಟಿಸಲಾಗಿದೆ.
ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಕಾಯಿದೆ-೨೦೧೭ ಅಡಿಯಲ್ಲಿ ಜಿಎಸ್‌ಟಿ ಪರಿಹಾರ ಕುರಿತ ಸೆಸ್ ಅನ್ನು ಸಂಗ್ರಹಿಸಲಾಗುತ್ತದೆ.
ಸೆಸ್ ಸಂಗ್ರಹಣೆಯ ಅವಧಿ ೨೦೨೨ರ ಜೂನ್‌ಗೆ ಮುಕ್ತಾಯವಾಗಿತ್ತು. ಅದನ್ನು ಮತ್ತೆ ಸುಮಾರು ೪ ವರ್ಷಗಳಿಗೆ ವಿಸ್ತರಿಸಿದಂತಾಗಿದೆ. ಈ ಸೆಸ್ ಅನ್ನು ೨೮% ಜಿಎಸ್‌ಟಿ ದರ ಇರುವ ಉತ್ಪನ್ನಗಳ ಮೇಲೆ ವಿಧಿಸಲಾಗುತ್ತದೆ. ಅಂದರೆ ಐಷಾರಾಮಿ ಉತ್ಪನ್ನಗಳಿಗೆ ಅನ್ವಯಿಸುತ್ತದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭ ಸೆಸ್ ಸಂಗ್ರಹ ಕುಸಿದಿತ್ತು. ಹೀಗಾಗಿ ಜಿಎಸ್‌ಟಿ ಅನುಷ್ಠಾನದಲ್ಲಿ ಉಂಟಾಗುತ್ತಿದ್ದ ಕಂದಾಯ ನಷ್ಟವನ್ನು ಭರಿಸಲು ಸೆಸ್ ಸಾಕಾಗುತ್ತಿರಲಿಲ್ಲ.
ಜಿಎಸ್‌ಟಿ ಪರಿಹಾರ ಕುರಿತ ಸೆಸ್ ಅವಧಿ ವಿಸ್ತರಣೆಯ ಪರಿಣಾಮ ಆಟೊಮೇಟಿವ್ ಇತ್ಯಾದಿ ವಲಯದ ಮೇಲೆ ಪ್ರಭಾವ ಬೀರಲಿದೆ. ಜಿಡಿಪಿ ಮತ್ತು ಉದ್ಯೋಗ ಸೃಷ್ಟಿಗೆ ಸಹಕರಿಸುವ ಈ ವಲಯಕ್ಕೆ ಉತ್ತೇಜನ ನೀಡಬೇಕಾದ ಅಗತ್ಯ ಇದೆ ಎನ್ನುತ್ತಾರೆ ತೆರಿಗೆ ತಜ್ಞರು.