Site icon Vistara News

ಆಧಾರ್‌ ಜೆರಾಕ್ಸ್‌ ಪ್ರತಿ ಹಂಚಿಕೆ ಕುರಿತ ಎಚ್ಚರಿಕೆಯ ಸಲಹೆಯನ್ನು ದಿಢೀರ್ ಹಿಂಪಡೆದ ಕೇಂದ್ರ ಸರಕಾರ

adhar card

ಹೊಸದಿಲ್ಲಿ: ಆಧಾರ್‌ ಕಾರ್ಡ್‌ನ ಜೆರಾಕ್ಸ್‌ ಪ್ರತಿ ಅಥವಾ ಫೊಟೊಕಾಪಿಯನ್ನು ಖಾಸಗಿ ಹೋಟೆಲ್‌, ಥಿಯೇಟರ್‌ಗಳಲ್ಲಿ ಇತರರಿಗೆ ಹಂಚಿಕೊಳ್ಳದಂತೆ ಜನತೆಗೆ ಕಳೆದ ಶುಕ್ರವಾರ ಬಿಡುಗಡೆಗೊಳಿಸಿದ್ದ ಎಚ್ಚರಿಕೆಯ ಸಲಹೆಯನ್ನು ಕೇಂದ್ರ ಸರಕಾರ ಭಾನುವಾರ ಹಿಂತೆಗೆದುಕೊಂಡಿದೆ.

ಈ ಸಾರ್ವಜನಿಕ ಪ್ರಕಟಣೆಯನ್ನು ಜನತೆ ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆ ಇರುವುದರಿಂದ ಹಿಂತೆಗೆದುಕೊಳ್ಳಲಾಗಿದೆ. ಆಧಾರ್‌ ಕಾರ್ಡ್‌ ನ ಸಂಭವನೀಯ ದುರ್ಬಳಕೆ ತಡೆಗಟ್ಟಲು ಸಲಹೆ ನೀಡಲಾಗಿತ್ತು. ಆದರೆ ಆಧಾರ್‌ ಸುರಕ್ಷಿತವಾಗಿದ್ದು, ಬಳಕೆದಾರರ ಐಡೆಂಟಿಟಿ ಮತ್ತು ಖಾಸಗಿತನವನ್ನು ರಕ್ಷಿಸುತ್ತದೆ ಎಂದು ಹೊಸ ಪ್ರಕಟಣೆ ಸ್ಪಷ್ಟಪಡಿಸಿದೆ.

ಆಧಾರ್‌ ಕಾರ್ಡ್‌ ಅತ್ಯಂತ ಸುರಕ್ಷಿತ ಎಂದು ಯೂ ಟರ್ನ್‌ ತೆಗೆದುಕೊಂಡಿದೆ. UIDAI ಕಳೆದ ಶುಕ್ರವಾರ ನೀಡಿದ್ದ ಹೇಳಿಕೆಯಲ್ಲಿ, ಯುಐಡಿಎಯಿಂದ ಲೈಸೆನ್ಸ್‌ ಪಡೆದಿರುವ ಸಂಸ್ಥೆಗಳು ಮತ್ತು ಏಜೆನ್ಸಿಗಳು ಮಾತ್ರವೇ ವ್ಯಕ್ತಿಯ ಗುರುತಿನ ದೃಢೀಕರಣಕ್ಕೆ ಆಧಾರ್‌ ಬಳಸಬಹುದು. ಸಾರ್ವಜನಿಕರು ಇತರರಿಗೆ ಆಧಾರ್‌ನ ಫೊಟೊಕಾಪಿ (ಜೆರಾಕ್ಸ್‌ ಪ್ರತಿ) ನೀಡಿದರೆ ಅದು ದುರ್ಬಳಕೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸಬೇಕು. ಇತರರಿಗೆ ನೀಡದಿರುವುದು ಸೂಕ್ತ. ಒಂದು ವೇಳೆ ಇತರರಿಗೆ ಫೊಟೊಕಾಪಿ ನೀಡಬೇಕಿದ್ದರೂ, ಆಧಾರ್‌ ಕಾರ್ಡ್‌ನ ಕೇವಲ ಕೊನೆಯ 4 ಅಂಕಿಗಳನ್ನು ಮಾತ್ರ ತೋರಿಸಿ, ಉಳಿದದ್ದನ್ನು ಮರೆ ಮಾಚುವ ಮಾಸ್ಕ್ಡ್‌ ಕಾಪಿಯನ್ನು (Masked Aadhar) ನೀಡುವುದು ಸೂಕ್ತ. ಯುಐಡಿಎಐನ ವೆಬ್‌ಸೈಟ್‌ ನಿಂದ ಮಾಸ್ಕ್ಡ್‌ ಆಧಾರ್‌ ಕಾಪಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ವೆಬ್‌ ಸೈಟ್‌ನಲ್ಲಿ Do you want a masked Aadhar ಎಂಬ ಆಯ್ಕೆ ಇದ್ದು, ಅದರ ಮೂಲಕ ಡೌನ್‌ ಲೋಡ್‌ ಮಾಡಬಹುದು ಎಂದು ತಿಳಿಸಿತ್ತು. ಈ ಪ್ರಕಟಣೆ ಸಾರ್ವಜನಿಕ ವಲಯದಲ್ಲಿ ವಿವಾದ ಸೃಷ್ಟಿಸಿತ್ತು. ಆಧಾರ್‌ನ ಸುರಕ್ಷತೆ ಬಗ್ಗೆ ಊಹಾಪೋಹಗಳು ಉಂಟಾಗಿತ್ತು. ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಸಾರ್ವಜನಿಕ ಕಂಪ್ಯೂಟರ್‌, ಇಂಟರ್‌ನೆಟ್‌ ಕೆಫೆ, ಕಿಯೋಸ್ಕ್‌ಗಳಲ್ಲಿ ಇ-ಆಧಾರ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಾರದು. ಅಂಥ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್‌ ಮಾಡಿದ್ದರೆ, ಬಳಿಕ ಇ-ಆಧಾರ್‌ ಅನ್ನು ಆ ಕಂಪ್ಯೂಟರ್‌ನಿಂದ ಸಂಪೂರ್ಣವಾಗಿ ಡಿಲೀಟ್‌ ಮಾಡಬೇಕು ಎಂದು ಇಲಾಖೆ ಸಲಹೆ ನೀಡಿತ್ತು. ಆಧಾರ್‌ ಬಳಸಲು ಲೈಸೆನ್ಸ್‌ ಇಲ್ಲದ ಹೋಟೆಲ್‌, ಸಿನಿ ಮಂದಿರಗಳಲ್ಲಿ ಆಧಾರ್‌ನ ಫೊಟೊಕಾಪಿಯನ್ನು ಹಂಚಿಕೊಳ್ಳಬಾರದು ಎಂದು ಎಚ್ಚರಿಸಿತ್ತು. ಈ ಸಲಹೆಗಳು ಜಾಲತಾಣಗಳಲ್ಲಿ ಕೋಲಾಹಲ ಸೃಷ್ಟಿಸಿತು.

” ನಾನು ನೂರಾರು ಹೋಟೆಲ್‌ ಗಳಲ್ಲಿ ತಂಗಿದ್ದೇನೆ. ಅವುಗಳು ನನ್ನ ಆಧಾರ್‌ ನ ಜೆರಾಕ್ಸ್‌ ಪ್ರತಿ ತೆಗೆದಿವೆ. ಈಗ ಏನು ಮಾಡಲಿʼ ಎಂದು ಟ್ವಿಟಿಗರೊಬ್ಬರು ಪ್ರಶ್ನಿಸಿದರು.

ಸುಪ್ರೀಂಕೋರ್ಟ್‌ 2018ರಲ್ಲಿ ಆಧಾರ್‌ನ ಸಿಂಧುತ್ವವನ್ನು ಎತ್ತಿಹಿಡಿದಿತ್ತು. ಆದರೆ ಆಧಾರ್‌ ನಲ್ಲಿ ವ್ಯಕ್ತಿಯ ಖಾಸಗಿತನದ ಗೌಪ್ಯತೆ , ವೈಯಕ್ತಿಕ ವಿವರಗಳ ಸಂರಕ್ಷಣೆ ಕುರಿತ ಕಳವಳ ವ್ಯಕ್ತಪಡಿಸಿತ್ತು.

ಇದನ್ನೂ ಓದಿ:ಡಿಜಿ ಲಾಕರ್‌ ಈಗ ವಾಟ್ಸ್‌ ಆಪ್‌ನಲ್ಲಿ ಲಭ್ಯ, ದಾಖಲೆಗಳನ್ನು ಇಡಲು ಡಿಜಿಟಲ್‌ ಸೇವೆ

Exit mobile version