Site icon Vistara News

ಎಲ್ಲ ಖಾಸಗಿ ಪೆಟ್ರೋಲ್‌ ಬಂಕ್‌ಗಳು ಸ್ಟಾಕ್‌ ಇಟ್ಟುಕೊಳ್ಳುವಂತೆ ಸೂಚಿಸಿದ ಕೇಂದ್ರ ಸರ್ಕಾರ

petrol

ನವದೆಹಲಿ: ಗ್ರಾಹಕರಿಗೆ ಪೆಟ್ರೋಲ್-ಡೀಸೆಲ್‌ ಪೂರೈಕೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ, ಖಾಸಗಿ ವಲಯದ ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಸೂಕ್ತ ಪ್ರಮಾಣದ ತೈಲ ದಾಸ್ತಾನನ್ನು ಇಟ್ಟುಕೊಳ್ಳುವಂತೆ ಸಂಬಂಧಿಸಿದ ಕಂಪನಿಗಳಿಗೆ ಸರ್ಕಾರ ಸೂಚಿಸಿದೆ.

ಖಾಸಗಿ ವಲಯದ ರಿಲಯನ್ಸ್‌ ಇಂಡಸ್ಟ್ರೀಸ್‌, ಬಿಪಿ, ಶೆಲ್‌ ಮತ್ತು ರೋಸ್‌ನೆಫ್ಟ್‌ ಬೆಂಬಲಿತ ನಾಯರಾ ಎನರ್ಜಿಗೆ ಈ ಸಂಬಂಧ ಸೂಚಿಸಲಾಗಿದೆ.

ಸರ್ಕಾರ ಎಲ್ಲ ಪೆಟ್ರೋಲ್‌ ಬಂಕ್‌ ಸೇವೆಯನ್ನು ಸಾರ್ವತ್ರಿಕ ಸೇವಾ ಬದ್ಧತೆ ನಿಬಂಧನೆಗಳ (Universal service obligations-USO) ವ್ಯಾಪ್ತಿಯಲ್ಲಿ ಇಟ್ಟಿದೆ. ಹೀಗಾಗಿ ಯುಕ್ತ ದರದಲ್ಲಿ ಸಾರ್ವಜನಿಕ ಪೂರೈಕೆಗೆ ಕೊರತೆಯಾಗದಂತೆ ಸೂಕ್ತ ಪ್ರಮಾಣದಲ್ಲಿ ಇಂಧನದ ಸ್ಟಾಕ್‌ ಇಟ್ಟುಕೊಳ್ಳಬೇಕಾಗುತ್ತದೆ ಎಂದು ತೈಲ ಸಚಿವಾಲಯವು ತಿಳಿಸಿದೆ.

ಇದುವರೆಗೆ ಈ ಯುಎಸ್‌ಒ ಬದ್ಧತೆ ಹಿಂದುಳಿದ ಪ್ರದೇಶಗಳಲ್ಲಿರುವ ಪೆಟ್ರೋಲ್‌ ಬಂಕ್‌ಗಳಿಗೆ ಸೀಮಿತವಾಗಿತ್ತು. ಯುಎಸ್‌ಒ ಪ್ರಕಾರ, ನಿಗದಿತ ಕೆಲಸದ ಅವಧಿಯಲ್ಲಿ ಗ್ರಾಹಕರಿಗೆ ನಿಯೋಜಿತ ದರದಲ್ಲಿ ಪೆಟ್ರೋಲ್‌, ಡೀಸೆಲ್‌ ಅನ್ನು ಪೂರೈಸಬೇಕು. ಹಾಗೂ ಅದಕ್ಕೆ ಬೇಕಾದಷ್ಟು ಸ್ಟಾಕ್‌ ಇಟ್ಟುಕೊಳ್ಳಬೇಕು. 2019ರ ಮಾರ್ಗದರ್ಶಿಯ ಪ್ರಕಾರ ಹಿಂದುಳಿದ ಪ್ರದೇಶಗಳಲ್ಲಿ ಪೆಟ್ರೋಲ್‌ ಬಂಕ್‌ಗಳಿಗೆ ಯುಎಸ್‌ಒ ಅನ್ವಯಿಸುತ್ತಿತ್ತು. ಈಗ ಎಲ್ಲ ಕಡೆಗಳಿಗೂ ಅನ್ವಯಿಸುತ್ತಿದೆ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಅಂಥ ಖಾಸಗಿ ಪೆಟ್ರೋಲ್ ಬಂಕ್‌ಗಳ ಪರವಾನಗಿ ರದ್ದಾಗುವ ಸಾಧ್ಯತೆ ಇದೆ.‌

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿದಾಗಲೂ ಸಾರ್ವಜನಿಕ ತೈಲ ಕಂಪನಿಗಳು ದರವನ್ನು ಏರಿಸಿರಲಿಲ್ಲ. ಪರಿಣಾಮವಾಗಿ ನಷ್ಟದಲ್ಲಿ ನಡೆಯುತ್ತಿವೆ. ಆದರೆ ಖಾಸಗಿ ತೈಲ ಕಂಪನಿಗಳು ಅಂಥ ನಷ್ಟವನ್ನು ಹೊತ್ತುಕೊಳ್ಳುವುದಿಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಜಾಸ್ತಿಯಾದಾಗ ಮಾರಾಟವನ್ನೇ ಕಡಿಮೆ ಮಾಡುತ್ತವೆ. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತದೆ. ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕದಲ್ಲಿ ಖಾಸಗಿ ಕಂಪನಿಗಳ ಪೆಟ್ರೋಲ್‌ ಬಂಕ್‌ಗಳೂ ದೊಡ್ಡ ಸಂಖ್ಯೆಯಲ್ಲಿದೆ.

Exit mobile version