ನವದೆಹಲಿ: ಮಾಧ್ಯಮಗಳು ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜನ್ನು ಉತ್ತೇಜಿಸುವ ಜಾಹೀರಾತುಗಳನ್ನು ಪ್ರಸಾರ ಮಾಡದಿರುವಂತೆ ಕೇಂದ್ರ ಸರಕಾರ ಸೋಮವಾರ ಸಲಹೆ ನೀಡಿದೆ.
ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳ ಜಾಹೀರಾತುಗಳು ಮುದ್ರಣ, ಎಲೆಕ್ಟ್ರಾನಿಕ್, ಸಾಮಾಜಿಕ ಜಾಲತಾಣ ಮತ್ತು ಆನ್‌ಲೈನ್ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ಸಲಹೆ ನೀಡಿದೆ.
” ದೇಶದ ಬಹುತೇಕ ಭಾಗಗಳಲ್ಲಿ ಬೆಟ್ಟಿಂಗ್, ಜೂಜನ್ನು ಕಾನೂನುಬಾಹಿರ ಎಂದು ಘೋಷಿಸಲಾಗಿದೆ. ಇದು ಗ್ರಾಹಕರ ಹಣಕಾಸು, ಸಾಮಾಜಿಕ ಸ್ಥಿತಿಗತಿಗಳ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಯುವಜನತೆ ಮತ್ತು ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರುವ ಅಪಾಯ ಇದೆ. ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳ ಜಾಹೀರಾತುಗಳು ಈ ನಿಷೇಧಿತ ಚಟುವಟಿಕೆಗಳನ್ನು ಉತ್ತೇಜಿಸುವಂತಿದೆʼʼ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಹೀಗಾಗಿ ಇಂಥ ಜಾಹೀರಾತುಗಳನ್ನು ಪ್ರದರ್ಶಿಸದಂತೆ ಸಚಿವಾಲಯ ಸಲಹೆ ನೀಡಿದೆ. 2020ರ ಡಿಸೆಂಬರ್ 4ರಂದು ಸರಕಾರ ಖಾಸಗಿ ಟಿವಿ ಚಾನೆಲ್‌ಗಳಿಗೆ, ಆನ್‌ಲೈನ್ ಗೇಮಿಂಗ್ ಕುರಿತ ಜಾಹೀರಾತುಗಳಿಗೆ ಸಂಬಂಧಿಸಿ ಭಾರತೀಯ ಜಾಹೀರಾತು ಮಂಡಳಿಯ (ASCI) ಮಾರ್ಗದರ್ಶಿ ಪಾಲಿಸುವಂತೆ ಸೂಚಿಸಿತ್ತು.
ಸರಕಾರದ ಈ ಸಲಹೆ ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿಗಳ ವ್ಯವಹಾರಗಳಿಗೆ ನಿರುತ್ತೇಜನಗೊಳಿಸುವ ನಿರೀಕ್ಷೆ ಇದೆ. ಇವುಗಳು ಆನ್‌ಲೈನ್ ಬೆಟ್ಟಿಂಗ್ ಅನ್ನು ಉತ್ತೇಜಿಸುತ್ತವೆ ಎಂಬ ಆರೋಪಗಳಿವೆ. ಫ್ಯಾಂಟಸಿ ಸ್ಪೋರ್ಟ್ಸ್ ಇಂಡಸ್ಟ್ರಿಯು ತನ್ನ ನಿಯಂತ್ರಣಕ್ಕೆ ಸಂಬಂಧಿಸಿ ಸರಕಾರ ಸ್ಪಷ್ಟವಾದ ನೀತಿ ಜಾರಿಗೊಳಿಸಬೇಕು ಎಂದು ಬೇಡಿಕೆ ಮುಂದಿಟ್ಟಿದೆ.
ಫೆಡರೇಷನ್ ಆಫ್ ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್ (FIFS) ವರದಿಯ ಪ್ರಕಾರ ಫ್ಯಾಂಟಸಿ ಸ್ಪೋರ್ಟ್ಸ್ ಉದ್ದಿಮೆಯು 2025ರ ವೇಳೆಗೆ ಭಾರತದಲ್ಲಿ 1.65 ಲಕ್ಷ ಕೋಟಿ ರೂ. ವಹಿವಾಟು ನಡೆಸುವ ಇಂಡಸ್ಟ್ರಿಯಾಗಿ ಬೆಳೆಯಲಿದೆ.