Site icon Vistara News

ಗ್ರಾಹಕರಿಂದ ಸೇವಾ ಶುಲ್ಕ ವಸೂಲು ಮಾಡದಂತೆ ರೆಸ್ಟೊರೆಂಟ್‌ಗಳಿಗೆ ಸರಕಾರದ ಎಚ್ಚರಿಕೆ

hotel

ಹೊಸದಿಲ್ಲಿ: ರೆಸ್ಟೊರೆಂಟ್‌ಗಳಲ್ಲಿ ಗ್ರಾಹಕರಿಂದ ಬಲವಂತವಾಗಿ ಸೇವಾ ಶುಲ್ಕ ವಸೂಲು ಮಾಡುವಂತಿಲ್ಲ ಎಂದು ವಾಣಿಜ್ಯ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸೋಮವಾರ ಎಚ್ಚರಿಕೆ ನೀಡಿದೆ.

ಸೇವಾ ಶುಲ್ಕಗಳು ಸ್ವಯಂಪ್ರೇರಿತವಾಗಿದ್ದು, ಗ್ರಾಹಕರ ಸಮ್ಮತಿ ಇದ್ದರೆ ಮಾತ್ರ ಪಡೆಯಬಹುದು ಎಂದು ಸರಕಾರ ತಿಳಿಸಿದೆ. ಹೈದರಾಬಾದ್‌ನಲ್ಲಿ ರೆಸ್ಟೊರೆಂಟ್‌ ಒಂದರಲ್ಲಿ ಗ್ರಾಹಕರಿಂದ ಬಲವಂತವಾಗಿ ಸೇವಾ ಶುಲ್ಕ ವಸೂಲಿ ಮಾಡಿದ್ದಕ್ಕೆ ರೆಸ್ಟೊರೆಂಟ್‌ಗೆ ದಂಡ ವಿಧಿಸಿದ ಬಳಿಕ ಇಲಾಖೆ ಈ ಎಚ್ಚರಿಕೆ ನೀಡಿದೆ.

ಗ್ರಾಹಕರು ರೆಸ್ಟೊರೆಂಟ್‌ಗೆ ಪ್ರವೇಶಿಸಿದ್ದಕ್ಕೆ ಸೇವಾ ಶುಲ್ಕ ವಿಧಿಸಬಾರದು. ಬಳಕೆದಾರರ ಸಮ್ಮತಿ ಇದ್ದರೆ ಮಾತ್ರ ಸೇವಾ ಶುಲ್ಕವನ್ನು ಪಡೆಯಬಹುದು. ಕಾನೂನು ಪ್ರಕಾರ ಕಡ್ಡಾಯವಲ್ಲ.
ಒಂದು ವೇಳೆ ರೆಸ್ಟೊರೆಂಟ್‌ ಗಳು, ಹೋಟೆಲ್‌ಗಳು ಬಲವಂತವಾಗಿ ಸೇವಾ ಶುಲ್ಕ ಪಡೆದರೆ ಗ್ರಾಹಕರು ಗ್ರಾಹಕ ಅಹವಾಲು ಇತ್ಯರ್ಥ ವೇದಿಕೆಗಳನ್ನು ಸಂಪರ್ಕಿಸಬಹುದು ಎಂದಿದೆ.

ಸೇವಾ ಶುಲ್ಕ (ಸರ್ವೀಸ್‌ ಚಾರ್ಜ್)‌ ಸ್ವಯಂಪ್ರೇರಿತವಾಗಿದ್ದರೂ ಹಲವಾರು ರೆಸ್ಟೊರೆಂಟ್‌ಗಳು ಗ್ರಾಹಕರಿಂದ ಸಂಗ್ರಹಿಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಕಾನೂನು ಬಾಹಿರ ಎಂದು ಇಲಾಖೆ ತಿಳಿಸಿದೆ. ಕಳೆದ ಕೆಲ ವರ್ಷಗಳಿಂದಲೂ ಸರಕಾರ ಈ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ.

Exit mobile version