ನವದೆಹಲಿ: ಕೇಂದ್ರ ಸರಕಾರ ಉದ್ಯೋಗಿಗಳ ಭವಿಷ್ಯನಿಧಿ (ಇಪಿಎಫ್) ಮೇಲಿನ ಬಡ್ಡಿ ದರವನ್ನು 8.5%ರಿಂದ 8.1%ಕ್ಕೆ ಕಡಿತಗೊಳಿಸಲು ಅನುಮೋದಿಸಿದೆ. ಕಳೆದ 40 ವರ್ಷಗಳಲ್ಲಿಯೇ ಇದು ಕನಿಷ್ಠ ಮಟ್ಟವಾಗಿದೆ.
ಇಪಿಎಫ್‌ಒ ಕಳೆದ ಮಾರ್ಚ್‌ನಲ್ಲಿ 2021-22ರ ಬಡ್ಡಿದರವನ್ನು 8.1%ಕ್ಕೆ ಇಳಿಸಲು ನಿರ್ಧರಿಸಿತ್ತು.
ಈ ಕಡಿತದೊಂದಿಗೆ ಇಪಿಎಫ್ ಬಡ್ಡಿದರ 1977-78ರ ಮಟ್ಟಕ್ಕೆ ಕುಸಿದಿದೆ. ಆಗ 8% ಇತ್ತು. ಇದು 6.4 ಕೋಟಿ ಪಿಎಫ್‌ದಾರರ ಪಿಎಫ್ ಬಡ್ಡಿ ಆದಾಯವನ್ನು ತಗ್ಗಿಸಲಿದೆ. ಹಣಕಾಸು ಸಚಿವಾಲಯ ಈ ಬಗ್ಗೆ ಅಧಿಸೂಚನೆ ಹೊರಡಿಸಲಿದೆ.
ಇಪಿಎಫ್‌ಒ ಕಳೆದ ವರ್ಷ ತನ್ನ ಒಟ್ಟು ಬಂಡವಾಳದಿಂದ 76,768 ಕೋಟಿ ರೂ. ಪಡೆದಿತ್ತು. ಅಂದರೆ ಶೇ.7.9 ರಷ್ಟು ಆದಾಯ ಗಳಿಸಿತ್ತು ಎಂದು ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.
ಇಪಿಎಫ್‌ಒ 2020ರ ಮಾರ್ಚ್‌ನಲ್ಲಿ ಪಿಎಫ್ ಬಡ್ಡಿ ದರವನ್ನು 8.65%ರಿಂದ 8.5%ಕ್ಕೆ ಇಳಿಸಿತ್ತು.