Site icon Vistara News

ಫೇಸ್‌ಬುಕ್‌, ಟ್ವಿಟರ್‌ ಇತ್ಯಾದಿ ಜಾಲ ತಾಣಗಳ ನಿಯಂತ್ರಣಕ್ಕೆ ಹೆಚ್ಚಿನ ಅಧಿಕಾರ ಬಯಸಿದ ಕೇಂದ್ರ

social media

ನವದೆಹಲಿ: ಸರಕಾರವು ಫೇಸ್‌ ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌, ವಾಟ್ಸ್‌ ಆಪ್ ಇತ್ಯಾದಿ ಸಾಮಾಜಿಕ ಜಾಲತಾಣ ಕಂಪನಿಗಳ ನಿಯಂತ್ರಣಕ್ಕೆ ಹೆಚ್ಚಿನ ಅಧಿಕಾರವನ್ನು ಬಯಸಿದೆ.‌

ಈ ಜಾಲತಾಣ ಕಂಪನಿಗಳು ನಾನಾ ನಿಯಮಗಳ ಉಲ್ಲಂಘನೆಗೋಸ್ಕರ ಬಳಕೆದಾರರ ಖಾತೆಗಳನ್ನು ಬ್ಲಾಕ್‌ ಮಾಡುತ್ತವೆ. ಇಂಥ ಅನೇಕ ಉದಾಹರಣೆಗಳು ನಡೆಯುತ್ತಿವೆ. ಕಂಪನಿಗಳು ಬಳಕೆದಾರರ ದೂರುಗಳನ್ನು ಆಧರಿಸಿ ಅಥವಾ ತಮ್ಮದೇ ನಿರ್ಧಾರ ಕೈಗೊಂಡು ಅಕೌಂಟ್‌ ಗಳನ್ನು ನಿಷೇಧಿಸುತ್ತವೆ. ಆದರೆ ಈ ವಿಚಾರದಲ್ಲಿ ಸರಕಾರಕ್ಕೂ ಹೆಚ್ಚಿನ ಅಧಿಕಾರವನ್ನು ನೀಡಲು ಕರಡು ಪ್ರಸ್ತಾಪ ಸಿದ್ಧವಾಗಿದೆ.

ಜಾಲತಾಣಗಳ ನಿಯಂತ್ರಣ ಕುರಿತ ಕರಡು ಪ್ರಸ್ತಾಪ ಶೀಘ್ರದಲ್ಲಿಯೇ ಮಾಹಿತಿ ತಂತ್ರಜ್ಞಾನ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ. ಈ ಕರಡು ಪ್ರಸ್ತಾಪ ಜಾರಿಯಾದರೆ, ಬಳಕೆದಾರರ ಅಕೌಂಟ್‌ಗಳನ್ನು ಬ್ಲಾಕ್‌ ಮಾಡುವ ವಿಚಾರದಲ್ಲಿ ಸರಕಾರದ ನಿರ್ಧಾರ ಅಂತಿಮವಾಗಲಿದೆ.

ಇದರೊಂದಿಗೆ ಜಾಲತಾಣಗಳಲ್ಲಿ ಪ್ರಸಾರವಾಗುವ ವಿಷಯಗಳ ಸೆನ್ಸಾರ್‌ ಮಾಡಲು ಸರಕಾರಕ್ಕೂ ಪರೋಕ್ಷವಾಗಿ ಅನುಕೂಲವಾಗಲಿದೆ. ಇದರ ಪರಿಣಾಮ ಇಂಟರ್‌ನೆಟ್‌ ಕಂಪನಿಗಳು, ಜಾಲತಾಣ ಕಂಪನಿಗಳು ಹಾಗೂ ಸರಕಾರದ ನಡುವೆ ಸಂಘರ್ಷ ಉಂಟಾಗಲೂಬಹುದು. ಜಾಲತಾಣಗಳು ಬ್ಲಾಕ್‌ ಮಾಡಿದ ಅಥವಾ ರದ್ದುಪಡಿಸಿದ ಅಕೌಂಟ್‌ ಗಳನ್ನು ಮರು ಸ್ಥಾಪಿಸಲು ಸರಕಾರ ಆದೇಶ ಹೊರಡಿಸಬಹುದು.

ಜಾಲತಾಣ ಕಂಪನಿಗಳು ಬಳಕೆದಾರರ ಖಾತೆಗಳನ್ನು ಬ್ಲಾಕ್‌ ಮಾಡುವ ಸಂದರ್ಭದಲ್ಲಿ ಹೆಚ್ಚು ನಿಗಾ ವಹಿಸಬೇಕು. ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ. ನಾಗರಿಕರ ಹಕ್ಕುಗಳ ಬಗ್ಗೆ ಹೆಚ್ಚು ಜಾಗರೂಕತೆ ಹೊಂದಿರಬೇಕು ಎಂದು ಸರಕಾರ ಅಭಿಪ್ರಾಯಪಟ್ಟಿದೆ.

Exit mobile version