ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಾರಿ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವ ಬಗ್ಗೆ ಈಗ ವ್ಯಾಪಕ ಸಂಭ್ರಮಾಚರಣೆ ನಡೆಯುತ್ತಿದೆ. ಆದರೆ ಎರಡೂವರೆ ದಶಕಗಳ ಹಿಂದೆಯೇ ಭಾರತೀಯ ಭೂ ವಿಜ್ಞಾನ ಸರ್ವೇಕ್ಷಣಾಲಯ ( Geological survey of India) ಜಮ್ಮು ಕಾಶ್ಮೀರದ ಸಲಾಲ್ ವಲಯದಲ್ಲಿ ಲಿಥಿಯಂ ನಿಕ್ಷೇಪದ ಬಗ್ಗೆ ವಿಸ್ತೃತ ವರದಿಯನ್ನು ಸಲ್ಲಿಸಿತ್ತು. ಆದರೆ ಬಳಿಕ ಅದರ ಬಗ್ಗೆ ಫಾಲೋ-ಅಪ್ ನಡೆದಿರಲಿಲ್ಲ.
ಜಿಯೊಲಾಜಿಕಲ್ ಸರ್ವೇ ಆಫ್ ಇಂಡಿಯಾ ವರದಿಯ ಪ್ರಕಾರ ಜಮ್ಮು ಕಾಶ್ಮೀರದ ಸಲಾಲ್-ಹೈಮಾನಾ ವಲಯದಲ್ಲಿ 59 ಲಕ್ಷ ಟನ್ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ.
1995-97ರಲ್ಲಿ ಸಲ್ಲಿಸಿದ ವರದಿಯಂತೆಯೇ ಇತ್ತೀಚಿನ ಜಿಎಸ್ ಐ ವರದಿಯೂ ಪ್ರಾಥಮಿಕ ಹಂತದ ವರದಿಯಾಗಿದೆ. ಪ್ರಸ್ತುತ ಭಾರತ ಈ ಲಿಥಿಯಂ ಅನ್ನು ಗಣಿಯಿಂದ ಹೊರ ತೆಗೆಯುವ ಮತ್ತು ಸಂಸ್ಕರಿಸುವ ತಂತ್ರಜ್ಞಾನವನ್ನು ಹೊಂದಿಲ್ಲ. ಖಾಸಗಿ ವಲಯದ ಕಂಪನಿಗಳ ಸಹಯೋಗದಲ್ಲಿ ಗಣಿಗಾರಿಕೆ ಮತ್ತು ಸಂಸ್ಕರಣೆ ನಡೆಯಬೇಕಾಗಿದೆ ಎನ್ನುತ್ತಾರೆ ತಜ್ಞರು.