ನವದೆಹಲಿ: ಜಿಎಸ್‌ಟಿ ಮಂಡಳಿಯ ೪೭ನೇ ಸಭೆ ಚಂಡಿಗಢದಲ್ಲಿ ಜೂನ್ ೨೮ ಮತ್ತು ೨೯ರಂದು ನಡೆಯಲಿದೆ. ಎರಡು ದಿನಗಳ ಈ ಸಭೆಯ ಅಧ್ಯಕ್ಷತೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಹಿಸಲಿದ್ದಾರೆ. ಹಲವಾರು ಉತ್ಪನ್ನಗಳು ಮತ್ತು ಸೇವೆಗಳ ಜಿಎಸ್‌ಟಿ ದರದಲ್ಲಿ ಬದಲಾವಣೆ ಮಾಡುವ ನಿರೀಕ್ಷೆ ಇದೆ. ಕುದುರೆ ರೇಸ್, ಕ್ಯಾಸಿನೊ, ಆನ್‌ಲೈನ್ ಗೇಮಿಂಗ್ ಮೇಲೆ ಜಿಎಸ್‌ಟಿ ದರ ೨೮%ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ.
ಈಗ ಕುದುರೆ ರೇಸ್, ಆನ್‌ಲೈನ್ ಗೇಮಿಂಗ್, ಕ್ಯಾಸಿನೊ ಸೇವೆಗಳಿಗೆ ೧೮% ಜಿಎಸ್‌ಟಿ ಇದೆ. ಇವುಗಳಿಗೆ ತಂಬಾಕು, ಪಾನ್ ಮಸಾಲಾ ಮೇಲಿರುವಂತೆ ೨೮%ರ ಗರಿಷ್ಠ ಜಿಎಸ್‌ಟಿ ದರ ಅನ್ವಯವಾಗುವ ಸಾಧ್ಯತೆ ಇದೆ.
ಆರು ತಿಂಗಳಿನ ಅಂತರದ ಬಳಿಕ ಸಭೆ ನಡೆಯುತ್ತಿದೆ. ಈ ಹಿಂದೆ ಶ್ರೀನಗರದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಭದ್ರತೆಯ ಕಾರಣಗಳಿಗೋಸ್ಕರ ಸ್ಥಳವನ್ನು ಚಂಡಿಗಢಕ್ಕೆ ಬದಲಾಯಿಸಲಾಗಿದೆ.
ಜಿಎಸ್‌ಟಿ ನಷ್ಟ ಪರಿಹಾರ ವಿಸ್ತರಣೆ ಕುರಿತ ಚರ್ಚೆ?
ಹಲವು ವಸ್ತುಗಳ ತೆರಿಗೆ ದರಗಳಲ್ಲಿ ಬದಲಾವಣೆ ಹೊರತುಪಡಿಸಿ, ರಾಜ್ಯಗಳಿಗೆ ಜಿಎಸ್‌ಟಿ ನಷ್ಟ ಪರಿಹಾರವನ್ನು ಜೂನ್ ಬಳಿಕವೂ ವಿಸ್ತರಿಸುವ ಬಗ್ಗೆ ಚರ್ಚೆ ನಿರೀಕ್ಷಿಸಲಾಗಿದೆ. ಪ್ರತಿ ಪಕ್ಷಗಳು ಜಿಎಸ್‌ಟಿ ನಷ್ಟ ಪರಿಹಾರವನ್ನು ೫ ವರ್ಷಗಳಿಂದಾಚೆಗೂ ವಿಸ್ತರಿಸಲು ಒತ್ತಾಯಿಸಿವೆ. ಜಿಎಸ್‌ಟಿಯ ಈಗಿನ ನೀತಿಯ ಪ್ರಕಾರ ಜೂನ್‌ಗೆ ೫ ವರ್ಷಗಳ ಅವಧಿ ಮುಕ್ತಾಯವಾಗುತ್ತಿದೆ.
ತೆರಿಗೆ ಬದಲಾವಣೆ ನಿರೀಕ್ಷೆಗಳೇನು?
- ಮೂಳೆಗಳ ಚಿಕಿತ್ಸೆ, ಕಸಿಗೆ ಸಂಬಂಧಿಸಿದ ಜಿಎಸ್‌ಟಿಯ ಶ್ರೇಣಿ ೫%ಕ್ಕೆ ಸ್ಥಿರವಾಗುವ ಸಾಧ್ಯತೆ. ಈಗ ೫%-೧೨% ತನಕ ಇದೆ.
- ಪಾಲಿಷ್ ರಹಿತ ಸ್ಟೋನ್, ಟೈಲ್ಸ್ಗಳ ಮೇಲಿನ ಜಿಎಸ್‌ಟಿ ೫% ಸ್ಥಿರ ಸಂಭವ. ಈಗ ೫%-೧೮%ರ ಶ್ರೇಣಿ ಇದೆ.
- ಕುದುರೆ ರೇಸ್, ಆನ್‌ಲೈನ್ ಗೇಮಿಂಗ್, ಕ್ಯಾಸಿನೊ ಸೇವೆ ಮೇಲೆ ಜಿಎಸ್‌ಟಿ ೧೮%ರಿಂದ ೨೮%ಕ್ಕೆ ಹೆಚ್ಚಳ ಸಂಭವ.
ಇತರ ಶಿಫಾರಸುಗಳು
- ಆಹಾರ ಧಾನ್ಯಗಳ ಉಪ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರವನ್ನು ೫%ಕ್ಕೆ ಇಳಿಸುವುದು.
- ಖಾಸಗಿ ವಲಯದಿಂದ ಆಮದು ಮಾಡುವ ಕೆಲವು ಡಿಫೆನ್ಸ್ ಉತ್ಪನ್ನಗಳ ಮೇಲಿನ ಐಜಿಎಸ್ಟಿ ಕಡಿತ.
- ಒಳಚರಂಡಿ ನೀರನ್ನು ಸಂಸ್ಕರಿಸಿ ಸಿದ್ಧಪಡಿಸಿದ ನೀರಿನ ಮೇಲಿನ ಜಿಎಸ್‌ಟಿ ರದ್ದು. ಈಗ ೧೮% ಇದೆ.
- ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಪ್ಯಾಕ್ ಮೇಲಿನ ಜಿಎಸ್‌ಟಿ ರಿಯಾಯಿತಿ ಬಗ್ಗೆ ತೀರ್ಮಾನ.
- ಟೆಟ್ರಾ ಪ್ಯಾಕ್/ ಪ್ಯಾಕೇಜಿಂಗ್ ಪೇಪರ್ ಮೇಲಿನ ಜಿಎಸ್‌ಟಿ ೧೨%ರಿಂದ ೧೮%ಕ್ಕೆ ಏರಿಕೆ.
ತೆರಿಗೆ ದರ ಯಥಾಸ್ಥಿತಿ ಸಾಧ್ಯತೆ
- ಹಣ್ಣಿನ ಪಾನೀಯಗಳು, ಉಪ್ಪಿನಕಾಯಿ (೧೨%)
- ರೆಡಿ-ಟು-ಈಟ್, ರೆಡಿ-ಟು-ಕುಕ್ ಫುಡ್ಸ್, ಇನ್ಸ್ಟಂಟ್ ಫುಡ್ ಮಿಕ್ಸ್ (೧೮%)
- ಬ್ರ್ಯಾಂಡೆಡ್ ಸ್ನ್ಯಾಕ್ಸ್, ಚಿಪ್ಸ್ ಇತ್ಯಾದಿ (೧೨%)
- ಛಾವಣಿ ಸೋಲಾರ್ ಫಲಕ, ಡಿಸಿಆರ್ (೧೨%)
- ಡೇರಿ ಉತ್ಪನ್ನಗಳು, ಕೋವಿಡ್ -೧೯ ಔಷಧಗಳು, ಏವಿಯೇಶನ್ ಇಂಧನ, ಹೆಲಿಕಾಪ್ಟರ್ ಮತ್ತು ಏರ್ ಕ್ರಾಫ್ಟ್ ಬಿಡಿಭಾಗಗಳ ಜಿಎಸ್‌ಟಿ ಯಥಾಸ್ಥಿತಿಯಲ್ಲಿ ಮುಂದುವರಿಯುವ ನಿರೀಕ್ಷೆ ಇದೆ.
ಜಿಎಸ್‌ಟಿ ಅಡಿಯಲ್ಲಿ ನಾಲ್ಕು ದರಗಳ ಶ್ರೇಣಿಗಳು ಇವೆ. ಕೆಲವು ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ಇದೆ. ಹಲವು ಅಗತ್ಯ ವಸ್ತುಗಳ ಜಿಎಸ್‌ಟಿ ದರ ೫%ರಲ್ಲಿದೆ. ಐಷಾರಾಮಿ ವಸ್ತುಗಳಿಗೆ ೨೮% ದರ ಇದೆ. ೧೨% ಮತ್ತು ೧೮% ಉಳಿದ ಎರಡು ಶ್ರೇಣಿಗಳಾಗಿವೆ. ಇದಲ್ಲದೆ ೨೮% ಶ್ರೇಣಿಯಲ್ಲಿರುವ ಉತ್ಪನ್ನಗಳ ಮೇಲೆ ಸೆಸ್ ಅನ್ವಯಿಸುತ್ತದೆ.