ನವ ದೆಹಲಿ: ಕಳೆದ ಜೂನ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ ( ಜಿಎಸ್‌ಟಿ) ಸಂಗ್ರಹ (GST collection) ಶೇ. ೫೬ ರಷ್ಟು ಹೆಚ್ಚಾಗಿದ್ದು, 1,44,616 ಕೋಟಿ ರೂ.ಗಳಿಗೆ ಏರಿದೆ. ಮೇ ತಿಂಗಳಿನಲ್ಲಿ 1.4 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಇದು ಎರಡನೇ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ಏಪ್ರಿಲ್‌ನಲ್ಲಿ 1,67,540 ಕೋಟಿ ರೂ. ಸಂಗ್ರಹವಾಗಿರುವುದು ದಾಖಲೆಯಾಗಿದೆ.
ಅನೇಕ ರಾಜ್ಯಗಳು ಕೂಡ ಜಿಎಸ್‌ಟಿ ಸಂಗ್ರಹದಲ್ಲಿ ಶೇ. ೫೦ಕ್ಕಿಂತಲೂ ಹೆಚ್ಚು ಪ್ರಗತಿ ದಾಖಲಿಸಿದ್ದು, ಕರ್ನಾಟಕವು ಶೇ. ೭೩ರಷ್ಟು ಹೆಚ್ಚು ಸಂಗ್ರಹಿಸಿದೆ. ಶೇ. ೮೩ ರಷ್ಟು ಪ್ರಗತಿ ದಾಖಲಿಸಿರುವ ತಮಿಳುನಾಡು ಅಗ್ರಸ್ಥಾನದಲ್ಲಿದೆ. ಉತ್ತರಾಖಂಡ ಶೇ.೮೨, ಹರಿಯಾಣ ಶೇ.೭೭ ಮಹಾರಾಷ್ಟ್ರ ಶೇ.೬೩, ಪಶ್ಚಿಮ ಬಂಗಾಳ ಶೇ.೫೮, ರಾಜಸ್ಥಾನ ಶೇ.೫೬, ಪಂಜಾಬ್ ಶೇ.೫೧ ಮತ್ತು ಗುಜರಾತ್ ಶೇ. ೫೦ ರಷ್ಟು ಪ್ರಗತಿ ದಾಖಲಿಸಿವೆ.
ಕಳೆದ ವರ್ಷ ಇದೇ ಅವಧಿಯಲ್ಲಿ 92,849 ಕೋಟಿ ರೂ. ಸಂಗ್ರಹವಾಗಿತ್ತು. ಜಿಎಸ್‌ಟಿ ಜಾರಿಯಾದ ಬಳಿಕ ೫ನೇ ಬಾರಿಗೆ ಮಾಸಿಕ ಜಿಎಸ್‌ಟಿ ಸಂಗ್ರಹ ವೃದ್ಧಿಸಿದೆ. ಸತತ ನಾಲ್ಕನೇ ತಿಂಗಳು ಪ್ರಗತಿ ದಾಖಲಾಗಿದೆ. ಸರಕುಗಳ ಆಮದಿನಿಂದ ಬರುವ ಕಂದಾಯದಲ್ಲೂ ಶೇ.೫೫ ರಷ್ಟು ಹೆಚ್ಚಳವಾಗಿದೆ.
ಜೂನ್ ತಿಂಗಳಿನ ಜಿಎಸ್‌ಟಿ ಸಂಗ್ರಹದಲ್ಲಿ ಸಿಜಿಎಸ್‌ಟಿ ಪಾಲು 25,306 ಕೋಟಿ ರೂ, ಎಸ್‌ಜಿಎಸ್‌ಟಿ 32,406 ಕೋಟಿ ರೂ, ಮತ್ತು ಐಜಿಎಸ್‌ಟಿ 75,887 ಕೋಟಿ ರೂ.ಗಳಾಗಿದೆ. ಆಮದಿನಿಂದ ಸಂಗ್ರಹವಾದ ಜಿಎಸ್‌ಟಿ 1,197 ಕೋಟಿ ರೂ ಸೇರಿದಂತೆ ಒಟ್ಟಾರೆ ಸಂಗ್ರಹವಾದ ಸೆಸ್ 11,018 ಕೋಟಿ ರೂ.ಗಳಾಗಿದ್ದು, ಇದು ಜಿಎಸ್‌ಟಿ ಜಾರಿಗೆ ಬಂದ ಮೇಲೆ ದಾಖಲೆ ಸಂಗ್ರಹವಾಗಿದೆ.
ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯ ಅನುಕ್ರಮವಾಗಿ 25,306 ಕೋಟಿ ರೂ. ಮತ್ತು 32,406 ಕೋಟಿ ರೂ.ಗಳಾಗಿದೆ. ಆದರೆ ಐಜಿಎಸ್‌ಟಿ 75,887 ಕೋಟಿ ರೂ. ಸಂಗ್ರಹವಾಗಿದೆ.
ಇತ್ತೀಚೆಗೆ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಜಿಎಸ್‌ಟಿ ತೆರಿಗೆಯ ಸ್ವರೂಪವನ್ನು ಸರಳಗೊಳಿಸುವುದು ಹಾಗೂ ಕೆಲ ವಸ್ತು ಮತ್ತು ಸೇವೆಗಳಿಗೆ ತೆರಿಗೆ ವಿನಾಯಿತಿ ರದ್ದುಪಡಿಸುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರುಗಳ ಉನ್ನತ ಮಟ್ಟದ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು. ಸಮಿತಿಯ ವರದಿಯನ್ನು ಜಿಎಸ್‌ಟಿ ಕೌನ್ಸಿಲ್ ಅಂಗೀಕರಿಸಿದೆ.
ಇದನ್ನೂ ಓದಿ| ವಿಸ್ತಾರ Explainer: GST ಕ್ರಾಂತಿಗೆ 5 ವರ್ಷ, ಸಾಧಕ-ಬಾಧಕಗಳ ಅವಲೋಕಕ್ಕೆ ಸಕಾಲ