Site icon Vistara News

GST Collection: ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ನಂ. 2; ಇಲ್ಲಿ ಸಂಗ್ರಹವಾಗಿದ್ದು ಎಷ್ಟು?

GST Collection

GST Collection

ನವದೆಹಲಿ: ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹದ ಅಂಕಿ-ಅಂಶ ಬಿಡುಗಡೆಯಾಗಿದೆ (GST Collection). ಮೇಯಲ್ಲಿ ಬರೋಬ್ಬರಿ 1.73 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರವಾಗಿದ್ದು, ಕರ್ನಾಟಕ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ. ರೀಫಂಡ್ ಕಳೆದ ಬಳಿಕ ನಿವ್ವಳ ಜಿಎಸ್​ಟಿ ಸಂಗ್ರಹ ಮೇಯಲ್ಲಿ 1.44 ಲಕ್ಷ ಕೋಟಿ ರೂ. ಆಗಿದೆ ಎಂದು ವರದಿ ತಿಳಿಸಿದೆ.

ಹಣಕಾಸು ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿ, ʼʼಮೇಯಲ್ಲಿ ಜಿಎಸ್‌ಟಿ ಆದಾಯ 1.73 ಲಕ್ಷ ಕೋಟಿ ರೂ. ಆಗಿದ್ದು, ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳ ದಾಖಲಿಸಿದೆ. ಜತೆಗೆ ದೇಶೀಯ ವಹಿವಾಟುಗಳಲ್ಲಿ ಬಲವಾದ ಹೆಚ್ಚಳ (ಶೇಕಡಾ 15.3ರಷ್ಟು ಏರಿಕೆ) ಮತ್ತು ಆಮದುಗಳಲ್ಲಿ ಇಳಿಕೆ (ಶೇಕಡಾ 4.3ರಷ್ಟು ಕಡಿಮೆ) ಕಂಡು ಬಂದಿದೆʼʼ ಎಂದು ತಿಳಿಸಿದೆ.

ರಾಜ್ಯವಾರು ಸಂಗ್ರಹ

ಮಹಾರಾಷ್ಟ್ರವು 26,854 ಕೋಟಿ ರೂ. ಸಂಗ್ರಹಿಸುವ ಮೂಲಕ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ. ಇಲ್ಲಿ 11,889 ಕೋಟಿ ರೂ. ಸಂಗ್ರಹವಾಗಿದೆ. ಗುಜರಾತ್‌ನಲ್ಲಿ 11,325 ಕೋಟಿ ರೂ. ಸಂಗ್ರಹವಾಗಿದ್ದು ಮೂರನೇ ಸ್ಥಾನದಲ್ಲಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಟಾಪ್‌ 10 ರಾಜ್ಯಗಳು

ರಾಜ್ಯ ಜಿಎಸ್‌ಟಿ ಸಂಗ್ರಹ (ಕೋಟಿ ರೂ.ಗಳಲ್ಲಿ)
ಮಹಾರಾಷ್ಟ್ರ26,854
ಕರ್ನಾಟಕ11,889
ಗುಜರಾತ್11,325
ತಮಿಳುನಾಡು9,768
ಹರಿಯಾಣ9,289
ಉತ್ತರಪ್ರದೇಶ9,091
ದೆಹಲಿ7,512
ಪಶ್ಚಿಮ ಬಂಗಾಳ5,377
ಒಡಿಶಾ5,027
ತೆಲಂಗಾಣ4,986

ವಿವಿಧ ತೆರಿಗೆಗಳ ಅಂಕಿ ಅಂಶ

ಏಪ್ರಿಲ್‌ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದ ಜಿಎಸ್‌ಟಿ ಸಂಗ್ರಹ

ಏಪ್ರಿಲ್‌ನ ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. 2024ರ ಏಪ್ರಿಲ್‌ನ ಒಟ್ಟು ಜಿಎಸ್‌ಟಿ ಸಂಗ್ರಹವು 2.10 ಲಕ್ಷ ಕೋಟಿ ರೂ.ಗೆ ತಲುಪಿತ್ತು. ಒಟ್ಟಾರೆಯಾಗಿ ಪರೋಕ್ಷ ತೆರಿಗೆ ಆದಾಯವು ಶೇ. 12.4ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ದೇಶೀಯ ವಹಿವಾಟು ಮತ್ತು ಆಮದುಗಳಲ್ಲಿನ ಹೆಚ್ಚಳ ಇದಕ್ಕೆ ಕಾರಣ.

ಟ್ಯಾಕ್ಸ್ ಕನೆಕ್ಟ್ ಅಡ್ವೈಸರಿ ಸರ್ವೀಸಸ್ ಎಲ್‌ಎಲ್‌ಪಿಯ ಪಾಲುದಾರ ವಿವೇಕ್ ಜಲನ್ ಈ ಬಗ್ಗೆ ಮಾತನಾಡಿ,  ʼʼ2017ರ ಜುಲೈಯಲ್ಲಿ ಈ ನಿಯಮ ಜಾರಿಗೆ ಬಂದಾಗಿನಿಂದ 2024ರ ಏಪ್ರಿಲ್‌ವರೆಗೆ ಜಿಎಸ್‌ಟಿ ಸಂಗ್ರಹವು ಸರಾಸರಿ ಮಾಸಿಕ ಆದಾಯವನ್ನು ಸುಮಾರು 0.9 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆʼʼ ಎಂದು ತಿಳಿಸಿದ್ದರು.

ಇದನ್ನೂ ಓದಿ: GST Collection: ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಜಿಎಸ್‌ಟಿ ಸಂಗ್ರಹ; ಏಪ್ರಿಲ್‌ನ ಕಲೆಕ್ಷನ್‌ ಎಷ್ಟು?

Exit mobile version