ನವದೆಹಲಿ: ಜಿಎಸ್‌ಟಿ ಮಂಡಳಿಯ ೪೭ನೇ ಸಭೆ ಚಂಡಿಗಢದಲ್ಲಿ ಮಂಗಳವಾರ ಆರಂಭವಾಗಿದ್ದು, ಕೆಲವು ವಸ್ತುಗಳಿಗೆ ಮತ್ತು ಸೇವೆಗಳಿಗೆ ಜಿಎಸ್‌ಟಿ ರಿಯಾಯಿತಿಯನ್ನು ರದ್ದುಪಡಿಸಲು ಸಮ್ಮತಿಸಲಾಗಿದೆ.
ಜಿಎಸ್‌ಟಿ ತೆರಿಗೆಯ ಸ್ವರೂಪವನ್ನು ಸರಳಗೊಳಿಸುವುದು ಹಾಗೂ ಕೆಲ ವಸ್ತು ಮತ್ತು ಸೇವೆಗಳಿಗೆ ತೆರಿಗೆ ವಿನಾಯಿತಿ ರದ್ದುಪಡಿಸುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರುಗಳ ಉನ್ನತ ಮಟ್ಟದ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು. ಹಾಗೂ ಸಮಿತಿಯ ವರದಿಯನ್ನು ಜಿಎಸ್‌ಟಿ ಕೌನ್ಸಿಲ್ ಅಂಗೀಕರಿಸಿದೆ. 1,000 ರೂ.ಗಿಂತ ಕಡಿಮೆ ದರದ ಹೋಟೆಲ್ ರೂಮ್ ಬಾಡಿಗೆಯ ಮೇಲೆ ಈಗ ಇರುವ ತೆರಿಗೆ ವಿನಾಯಿತಿಯನ್ನು ರದ್ದುಪಡಿಸಿ, ೧೨% ಜಿಎಸ್‌ಟಿ ವಿಧಿಸಲು ಸಮಿತಿ ಶಿಫಾರಸು ಮಾಡಿತ್ತು.
ಜಿಎಸ್‌ಟಿ ಮಂಡಳಿ ಸಭೆಯ ಮುಖ್ಯಾಂಶಗಳು
- ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರುಗಳ ಉನ್ನತ ಮಟ್ಟದ ಸಮಿತಿಯ ಮಧ್ಯಂತರ ವರದಿಗೆ ಅಸ್ತು
- ಆನ್ಲೈನ್ ಗೇಮಿಂಗ್, ಕುದುರೆ ರೇಸ್, ಕ್ಯಾಸಿನೊ ಸೇವೆಗೆ ಜಿಎಸ್‌ಟಿ ಕುರಿತು ಬುಧವಾರ ನಿರ್ಧಾರ
- ರಾಜ್ಯಗಳಿಗೆ ಜಿಎಸ್‌ಟಿ ನಷ್ಟ ಪರಿಹಾರ ವಿಸ್ತರಣೆ ಕುರಿತು ಚರ್ಚೆ ನಿರೀಕ್ಷೆ
ಬಂಗಾರ ಮತ್ತು ಅಮೂಲ್ಯ ಶಿಲೆಗಳ ಅಂತಾರಾಜ್ಯ ಸಾಗಣೆಗೆ ಇ-ವೇ ಬಿಲ್ ಬಿಡುಗಡೆಗೊಳಿಸಲು ಅನುಮೋದಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.ರಾಜ್ಯಗಳಿಗೆ ೨೦೨೨ರ ಜೂನ್ ಬಳಿಕ ಜಿಎಸ್‌ಟಿ ನಷ್ಟ ಪರಿಹಾರ ವಿತರಣೆಯನ್ನು ಮುಂದುವರಿಸುವುದು, ಕ್ಯಾಸಿನೊ, ಕುದುರೆ ರೇಸ್, ಆನ್ ಲೈನ್ ಗೇಮಿಂಗ್ ಮೇಲೆ ಶೇ.೨೮ರ ಜಿಎಸ್‌ಟಿ ವಿಚಾರದ ಬಗ್ಗೆ ಬುಧವಾರ ತೀರ್ಮಾನಿಸುವ ನಿರೀಕ್ಷೆ ಇದೆ. ಪ್ರತಿಪಕ್ಷ ಆಡಳಿತವಿರುವ ರಾಜ್ಯಗಳು ಜಿಎಸ್‌ಟಿ ನಷ್ಟ ಪರಿಹಾರ ವಿಸ್ತರಣೆಗೆ ಒತ್ತಾಯಿಸುತ್ತಿವೆ.