ಚಂಡೀಗಢ: ಜಿಎಸ್‌ಟಿ ಮಂಡಳಿಯು ಆನ್‌ಲೈನ್ ಗೇಮಿಂಗ್, ಕ್ಯಾಸಿನೊ ಸೇವೆ, ಕುದುರೆ ರೇಸ್, ಲಾಟರಿಗೆ ಜಿಎಸ್‌ಟಿಯನ್ನು ೨೮%ಕ್ಕೆ ಏರಿಸುವ ಪ್ರಸ್ತಾಪವನ್ನು ಮುಂದೂಡಿದೆ. ಈ ಸಂಬಂಧ ಸಚಿವರುಗಳ ಉನ್ನತ ಮಟ್ಟದ ಸಮಿತಿ ಜುಲೈ ೧೫ರೊಳಗೆ ತನ್ನ ವರದಿ ಸಲ್ಲಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಎರಡು ದಿನಗಳ ಕಾಲ ನಡೆದ ಮಂಡಳಿಯ ೪೭ನೇ ಸಭೆ ಬುಧವಾರ ಅಂತ್ಯವಾಯಿತು. ಜಿಎಸ್‌ಟಿ ಮಂಡಳಿಯ ಮುಂದಿನ ಸಭೆ ಆಗಸ್ಟ್‌ನಲ್ಲಿ ನಡೆಯಲಿದೆ.
ಚಂಡೀಗಢದಲ್ಲಿ ನಡೆದ ಸಭೆಯಲ್ಲಿ ನಿರ್ಧಾರವನ್ನು ಮುಂದೂಡಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರುಗಳ ಸಮಿತಿಯು ಜಿಎಸ್‌ಟಿ ದರ ಪರಿಷ್ಕರಣೆಗೆ ಶಿಫಾರಸು ನೀಡಿತ್ತು.
ಆನ್‌ಲೈನ್ ಗೇಮಿಂಗ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಜಿಎಸ್‌ಟಿ ಜಾರಿಗೊಳಿಸಬೇಕು. ಗೇಮಿಂಗ್‌ನ ಪ್ರವೇಶ ಶುಲ್ಕಕ್ಕೂ ಅನ್ವಯಗೊಳಿಸಬೇಕು. ಕುದುರೆ ರೇಸ್‌ನಲ್ಲಿ ಬೆಟ್ಟಿಂಗ್‌ನ ಒಟ್ಟು ಮೌಲ್ಯಕ್ಕೆ ಜಿಎಸ್‌ಟಿ ವಿಧಿಸಬೇಕು ಎಂದು ಸಮಿತಿ ಶಿಫಾರಸು ನೀಡಿತ್ತು.
ಜಿಎಸ್‌ಟಿ ವಿಧಿಸಲು ಕೌಶಲದ ಆಟ ( Game of skill) ಮತ್ತು ಇತರ ಗೇಮಿಂಗ್ ಎಂಬ ಭೇದ ಸಲ್ಲದು. ಇಂಥ ಎಲ್ಲ ಚಟುವಟಿಕೆಗಳಿಗೂ ೨೮% ಜಿಎಸ್‌ಟಿ ಅನ್ವಯಗೊಳಿಸಬೇಕು ಎಂದು ಸಲಹೆ ನೀಡಲಾಗಿತ್ತು. ಆದರೆ ಗೇಮಿಂಗ್ ಇಂಡಸ್ಟ್ರಿ ಈ ಪ್ರಸ್ತಾಪವನ್ನು ವಿರೋಧಿಸಿವೆ. ಪ್ರಸ್ತುತ ಆನ್‌ಲೈನ್ ಗೇಮಿಂಗ್, ಕುದುರೆ ರೇಸ್, ಕ್ಯಾಸಿನೊ ಸೇವೆಗೆ ೧೮% ಜಿಎಸ್‌ಟಿ ಇದೆ.
ನಷ್ಟ ಪರಿಹಾರ ಮುಂದುವರಿಸಲು ಒತ್ತಾಯ
ಜಿಎಸ್‌ಟಿ ಅನುಷ್ಠಾನದಲ್ಲಿ ರಾಜ್ಯಗಳಿಗೆ ಉಂಟಾಗುತ್ತಿರುವ ನಷ್ಟ ಪರಿಹಾರವನ್ನು ಮುಂದುವರಿಸಬೇಕು ಎಂದು ಬಿಜೆಪಿ ಆಡಳಿತದ ರಾಜ್ಯಗಳೂ ಸೇರಿದಂತೆ ಎಲ್ಲ ರಾಜ್ಯಗಳೂ ಒತ್ತಾಯಿಸಿವೆ ಎಂದು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ರಾಜನ್ ತಿಳಿಸಿದರು. ೨೦೨೦ರ ಜೂನ್ ೩೦ಕ್ಕೆ ಅಂತ್ಯವಾಗುವ ನಷ್ಟ ಪರಿಹಾರ ವಿತರಣೆ ಕುರಿತ ಗಡುವನ್ನು ಮತ್ತೆ ೫ ವರ್ಷಗಳ ಅವಧಿಗೆ ವಿಸ್ತರಿಸಬೇಕು ಎಂದು ರಾಜ್ಯಗಳು ಒತ್ತಾಯಿಸಿವೆ.