ನವ ದೆಹಲಿ: ಆನ್‌ಲೈನ್ ಗೇಮಿಂಗ್, ಕ್ಯಾಸಿನೊ, ಕುದುರೆ ರೇಸ್ ಮೇಲೆ 2023ರ ಅಕ್ಟೋಬರ್ 1ರಿಂದ 28% ತೆರಿಗೆ ಜಾರಿಯಾಗಲಿದೆ. (GST Council meet ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್‌ಟಿ ಮಂಡಳಿಯ 51ನೇ ಸಭೆಯ ಬಳಿಕ ಈ ವಿಷಯ ತಿಳಿಸಿದ್ದಾರೆ. ಆನ್‌ಲೈನ್ ಗೇಮಿಂಗ್, ಕ್ಯಾಸಿನೊಗಳಲ್ಲಿ ವ್ಯವಹಾರದ ಪೂರ್ಣ ಮೌಲ್ಯದ ಮೇಲೆ 28% ಜಿಎಸ್‌ಟಿ ಜಾರಿಯಾಗಲಿದೆ. ಇದು ಜಾರಿಯಾದ 6 ತಿಂಗಳಿನ ಬಳಿಕ ಅದರ ಬಗ್ಗೆ ಪರಾಮರ್ಶೆಯೂ ನಡೆಯಲಿದೆ.
ದಿಲ್ಲಿಯ ಹಣಕಾಸು ಸಚಿವರು ಆನ್‌ಲೈನ್ ಗೇಮಿಂಗ್ ಮೇಲೆ ಟ್ಯಾಕ್ಸ್ ವಿಧಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಗೋವಾ ಮತ್ತು ಸಿಕ್ಕಿಂ ರಾಜ್ಯಗಳು ಒಟ್ಟಾರೆ ಗೇಮಿಂಗ್ ಆದಾಯದ ಮೇಲೆ ಜಿಎಸ್‌ಟಿ ಜಾರಿಗೆ ಬಯಸುತ್ತಿವೆಯೇ ಹೊರತು ಫೇಸ್ ವಾಲ್ಯೂವಿಗೆ ಅಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.
ಕರ್ನಾಟಕದಿಂದ ಗುಜರಾತ್, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದ ತನಕ ಹಲವು ರಾಜ್ಯಗಳು ಕಳೆದ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಧಾರವನ್ನು ಬೆಂಬಲಿಸಿವೆ. ಅಕ್ಟೋಬರ್ 1 ರಿಂದ ಹೊಸ ಲೆವಿ ಜಾರಿಯಾಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
28% ಜಿಎಸ್‌ಟಿಯು ಎಂಟ್ರಿ ಲೆವೆಲ್‌ನಲ್ಲಿಯೇ ಅನ್ವಯವಾಗಲಿದೆ. ಬೆಟ್ಟಿಂಗ್‌ನ ಗೆಲುವನ್ನು ಅಧರಿಸಿ ಅಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳನ್ನು ಒಳಗೊಂಡ ಕಾನೂನು ಸಮಿತಿಯು ಕರಡು ನಿಯಮಾವಳಿಗಳನ್ನು ರಚಿಸಲಿದೆ ಎಂದರು. ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಮಂಡಳಿಯ ನಿರ್ಧಾರವನ್ನು ಅಸಮರ್ಪಕ ಎಂದು ಖಂಡಿಸಿದೆ.
ನಜರಾ, ಗೇಮ್ಸ್‌ಕ್ರಾಫ್ಟ್, ಜುಪೀ, ವಿನ್ಜೊ ಮುಂತಾದ ಕಂಪನಿಗಳನ್ನು ಪ್ರತಿನಿಧಿಸುವ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ (AIGF) ಜಿಎಸ್‌ಟಿ ಮಂಡಳಿಯ ನಿರ್ಧಾರವನ್ನು ತಾನು ಒಪ್ಪುವುದಿಲ್ಲ ಎಂದು ಪ್ರತಿಕ್ರಿಯಿಸಿದೆ.