Site icon Vistara News

GST Evasion: ಜಿಎಸ್‌ಟಿ ವಂಚಕರಿಗೆ ಗುನ್ನ; 50 ಸಾವಿರ ಕೋಟಿ ರೂ. ವಸೂಲಿ ಮಾಡಲಿದೆ ಕೇಂದ್ರ

GST Collection

GST collection in October 2023 hit second highest ever of ₹1.72 lakh crore

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚಕರಿಗೆ (GST Evasion) ದೇಶಾದ್ಯಂತ ಬಿಸಿ ಮುಟ್ಟಿಸಲು ಜಿಎಸ್‌ಟಿ ನಿರ್ದೇಶನಾಲಯ (GST Enforcement) ಸಜ್ಜಾಗಿದ್ದು, 2024ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ಸುಮಾರು 50 ಸಾವಿರ ಕೋಟಿ ರೂ. ಜಿಎಸ್‌ಟಿ ವಂಚನೆ ಮೊತ್ತ ವಾಪಸಾಗಲಿದೆ ಎಂದು ತಿಳಿದುಬಂದಿದೆ. ಹಾಗೊಂದು ವೇಳೆ ನಿಗದಿತ ಗುರಿಯಂತೆ 50 ಸಾವಿರ ಕೋಟಿ ರೂ. ವಸೂಲಿ ಮಾಡಿದರೆ, ಜಿಎಸ್‌ಟಿ ಜಾರಿಯಾದಾಗಿನಿಂದ ಇದುವರೆಗೆ ಗರಿಷ್ಠ ಮೊತ್ತ ವಸೂಲಿ ಮಾಡಿದಂತಾಗಲಿದೆ.

2023-24ನೇ ಹಣಕಾಸು ವರ್ಷದಲ್ಲಿ ದೇಶಾದ್ಯಂತ 1.36 ಲಕ್ಷ ಕೋಟಿ ರೂ. ಜಿಎಸ್‌ಟಿ ವಂಚಿಸಲಾಗಿರುವುದನ್ನು ಜಿಎಸ್‌ಟಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಆದರೆ, ಇದುವರೆಗೆ ಕೇವಲ 14,108 ಕೋಟಿ ರೂಪಾಯಿಯನ್ನು ಮಾತ್ರ ವಸೂಲಿ ಮಾಡಲಾಗಿದೆ. 2022-23ರಲ್ಲಿ 1.01 ಲಕ್ಷ ಕೋಟಿ ರೂ. ಜಿಎಸ್‌ಟಿ ವಂಚಿಸಲಾಗಿತ್ತು. ಇದರ ಪೈಕಿ ಜಿಎಸ್‌ಟಿ ಅಧಿಕಾರಿಗಳು 21 ಸಾವಿರ ಕೋಟಿ ರೂಪಾಯಿಯನ್ನು ವಸೂಲಿ ಮಾಡಿದ್ದರು.

2023-24ನೇ ಸಾಲಿನಲ್ಲಿ ಜಿಎಸ್‌ಟಿ ನಿರ್ದೇಶನಾಲಯವು 50 ಸಾವಿರ ಕೋಟಿ ರೂ. ವಸೂಲಿ ಮಾಡುವ ಗುರಿ ಹೊಂದಿದೆ. ಇದು ಕಳೆದ ಸಾಲಿಗಿಂತ ದುಪ್ಪಟ್ಟು ಮೊತ್ತ ಆಗಿದೆ. ಜಿಎಸ್‌ಟಿ ವಂಚನೆ ನಿಗ್ರಹಕ್ಕೆ, ವಸೂಲಾತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಿಗೆ ಕೆಲಸ ಮಾಡುತ್ತಿವೆ ಎಂದು ಜಿಎಸ್‌ಟಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರತಿ ತಿಂಗಳು ಜಿಎಸ್‌ಟಿ ಸಂಗ್ರಹವೂ ಹೆಚ್ಚಾಗುತ್ತಿದೆ. 2023ರ ಸೆಪ್ಟೆಂಬರ್ ತಿಂಗಳಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ ಸೆಪ್ಟೆಂಬರ್‌ನಲ್ಲಿ 1,62,712 ಕೋಟಿ ರೂ. ಸಂಗ್ರಹವಾಗಿದೆ.

ಇದನ್ನೂ ಓದಿ: GST Council Meeting: ರೈತರಿಗೆ ಶುಭಸುದ್ದಿ; ಸಿರಿಧಾನ್ಯ ಹಿಟ್ಟು, ಕಾಕಂಬಿ ಜಿಎಸ್‌ಟಿ 5%ಕ್ಕೆ ಇಳಿಕೆ

ಇದುವರೆಗೆ ವಸೂಲಿ ಮಾಡಿದ ಹಣ ಎಷ್ಟು?

ದೇಶದಲ್ಲಿ ಜಿಎಸ್‌ಟಿ ಜಾರಿಯಾದ ಬಳಿಕ ಜಿಎಸ್‌ಟಿ ವಂಚಕರ ಮೇಲೆ ನಿರ್ದೇಶನಾಲಯವು ಹದ್ದಿನ ಕಣ್ಣಿಟ್ಟಿದೆ. 2017ರ ಜುಲೈನಿಂದ 2023ರ ಫೆಬ್ರವರಿ ಅವಧಿಯಲ್ಲಿ ದೇಶಾದ್ಯಂತ ಸುಮಾರು 3.08 ಲಕ್ಷ ಕೋಟಿ ರೂ. ವಂಚನೆ ಮಾಡಲಾಗಿದೆ. ಆದರೆ, ಜಿಎಸ್‌ಟಿ ನಿರ್ದೇಶನಾಲಯವು ಇದುವರೆಗೆ 1.03 ಲಕ್ಷ ಕೋಟಿ ರೂಪಾಯಿಯನ್ನು ವಸೂಲಿ ಮಾಡಿದೆ. ಹಾಗೆಯೇ, ಇಷ್ಟೇ ಅವಧಿಯಲ್ಲಿ ಜಿಎಸ್‌ಟಿ ವಂಚಿಸಿದ 1,402 ಮಂದಿಯನ್ನು ಬಂಧಿಸಲಾಗಿದೆ. ಇದರ ಜತೆಗೆ ಸಾವಿರಾರು ಜನರ ವಿರುದ್ಧ ಕೇಸ್‌ ದಾಖಲಿಸಲಾಗಿದೆ.

Exit mobile version