Site icon Vistara News

GST evasion : 2022-23ರಲ್ಲಿ 1.01 ಲಕ್ಷ ಕೋಟಿ ರೂ. ಜಿಎಸ್‌ಟಿ ಸೋರಿಕೆ, ಕಾರಣವೇನು?

gst

gst

ನವ ದೆಹಲಿ: ಕಳೆದ 2022-23ರಲ್ಲಿ ಒಟ್ಟು 1.01 ಲಕ್ಷ ಕೋಟಿ ರೂ. ಜಿಎಸ್‌ಟಿ ಸೋರಿಕೆಯನ್ನು ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. (GST evasion) ಈ ಹಿಂದಿನ ಸಾಲಿಗೆ ಹೋಲಿಸಿದರೆ ಸೋರಿಕೆಯ ಪ್ರಮಾಣ ಇಮ್ಮಡಿಯಾಗಿದೆ. ಜಿಎಸ್‌ಟಿ ಇಂಟಲಿಜೆನ್ಸ್‌ ನಿರ್ದೇಶನಾಲಯವು (DGGI) 21,000 ಕೋಟಿ ರೂ.ಗಳನ್ನು ರಿಕವರಿ ಮಾಡಿತ್ತು.

ಡಿಜಿಜಿಐ ಅಧಿಕಾರಿಗಳು 2022-23ರಲ್ಲಿ 1,01,300 ಕೋಟಿ ರೂ. ಮೊತ್ತದ ಜಿಎಸ್‌ಟಿ ಸೋರಿಕೆಯನ್ನು ಪತ್ತೆ ಹಚ್ಚಿದ್ದರು. ಇದರಲ್ಲಿ 21,000 ಕೋಟಿ ರೂ.ಗಳನ್ನು ರಿಕವರಿ ಮಾಡುವಲ್ಲಿ ಡಿಜಿಜಿಐ ಯಶಸ್ವಿಯಾಗಿತ್ತು. 2021-22ರಲ್ಲಿ ಡಿಜಿಜಿಐ 54,000 ಕೋಟಿ ರೂ. ಮೌಲ್ಯದ ಜಿಎಸ್‌ಟಿ ಸೋರಿಕೆಯನ್ನು ಪತ್ತೆ ಹಚ್ಚಿತ್ತು.

ಜಿಎಸ್‌ಟಿ ತೆರಿಗೆ ಸೋರಿಕೆಗೆ ಕಾರಣವೇನು?

ವಂಚಕರು ಸರಕು ಮತ್ತು ಸೇವೆಗಳ ನಿಜವಾದ ಮೌಲ್ಯವನ್ನು ಮರೆಮಾಚಿ, ಕಡಿಮೆ ಮೌಲ್ಯವನ್ನು ನಮೂದಿಸಿ ಕಡಿಮೆ ಜಿಎಸ್‌ಟಿ ಪಾವತಿಸುವುದು ವಂಚನೆಯ ಒಂದು ವಿಧ. ಜಿಎಸ್‌ಟಿ ತೆರಿಗೆ ವಿನಾಯಿತಿಯ ಅಧಿಸೂಚನೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಎರಡನೇ ವಿಧವಾದ ವಂಚನೆ. ಇನ್‌ಪುಟ್‌ ಕ್ರೆಡಿಟ್‌ ಟ್ಯಾಕ್ಸ್‌ನಲ್ಲಿ ವಂಚಿಸುವುದು ಮತ್ತೊಂದು ವಿಧ. ನಕಲಿ ಸಂಸ್ಥೆ ಮತ್ತು ನಕಲಿ ಇನ್‌ ವಾಯ್ಸ್‌ಗಳ ಮೂಲಕ ಜಿಎಸ್‌ಟಿ ಕೊಡದೆ ವಂಚಿಸುವುದು ಕೂಡ ತೆರಿಗೆ ಸೋರಿಕೆಗೆ ಮತ್ತೊಂದು ಕಾರಣವಾಗಿ ಪರಿಣಮಿಸಿದೆ.

ಕಳೆದ ಫೆಬ್ರವರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹ 1,49,577 ಕೋಟಿ ರೂ.ಗೆ ಏರಿಕೆಯಾಗಿದೆ. ವಾರ್ಷಿಕ ಆಧಾರದಲ್ಲಿ 12% ಏರಿಕೆಯಾಗಿದೆ. ಇದರೊಂದಿಗೆ ಕಳೆದ 12 ತಿಂಗಳುಗಳಲ್ಲಿ ಸತತವಾಗಿ 1.4 ಲಕ್ಷ ಕೋಟಿ ರೂ.ಗೂ ಹೆಚ್ಚು ಸಂಗ್ರಹ ಆದಂತಾಗಿದೆ (GST Collection) ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ಬುಧವಾರ ತಿಳಿಸಿದೆ. 2022ರ ಫೆಬ್ರವರಿಯಲ್ಲಿ ಜಿಎಸ್‌ಟಿ ಆದಾಯ 1,33,026 ಕೋಟಿ ರೂ.ಗಳಾಗಿತ್ತು.

ಜಿಎಸ್‌ಟಿ ಸಂಗ್ರಹದಲ್ಲಿ ಸಿಜಿಎಸ್‌ಟಿ 27,662 ಕೋಟಿ ರೂ, ಎಸ್‌ಜಿಎಸ್‌ ಟಿ 34,915 ಕೋಟಿ ರೂ, ಐಜಿಎಸ್‌ಟಿ 75,069 ಕೋಟಿ ರೂ. ಆಗಿದೆ. ಸೆಸ್ 11,931 ಕೋಟಿ ರೂ. ಸಂಗ್ರಹವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಬಜೆಟ್‌ ಭಾಷಣದ ಪ್ರಕಾರ 2022-23ರಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ 12% ಏರಿಕೆ ನಿರೀಕ್ಷಿಸಲಾಗಿದೆ. ಕಳೆದ ಮಾರ್ಚ್‌ನಲ್ಲಿ 1.6 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು.

Exit mobile version