ನವ ದೆಹಲಿ: ಕಳೆದ ತಿಂಗಳು ಕೆಲ ವಸ್ತುಗಳಿಗೆ ಜಿಎಸ್‌ಟಿ ದರ ಏರಿಕೆ ಮಾಡಿದ ಬಳಿಕ ಮತ್ತಷ್ಟು ವಸ್ತುಗಳ ಮೇಲಿನ ಪರೋಕ್ಷ ತೆರಿಗೆಯಲ್ಲಿ ಶೀಘ್ರದಲ್ಲೇ (GST Rate) ಹೆಚ್ಚಳವಾಗುವ ಸಾಧ್ಯತೆ ಇದೆ.
ಇನ್‌ವರ್ಟೆಡ್ ಸುಂಕವನ್ನು ಹೊಂದಾಣಿಕೆ ಮಾಡುವ ಪ್ರಕ್ರಿಯೆ ಇನ್ನೂ ಪೂರ್ಣವಾಗಿಲ್ಲ. (Inverted duty correction) ಈ ಬಗ್ಗೆ ಮಾತುಕತೆ ನಡೆದಿದೆ. ಜವಳಿ ಸೇರಿದಂತೆ ಕೆಲ ವಸ್ತುಗಳ ಮೇಲೆ ಜಿಎಸ್‌ಟಿಯನ್ನು ಹೆಚ್ಚಿಸುವ ಮೂಲಕ ಇನ್‌ವರ್ಟೆಡ್ ಸುಂಕದ ಹೊಂದಾಣಿಕೆಯನ್ನು ಮಾಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. ಉತ್ಪಾದಿತ ವಸ್ತುವಿಗಿಂತ ವಸ್ತುವಿನ ಉತ್ಪಾದನೆಗೆ ಬಳಸುವ ಕಚ್ಚಾ ವಸ್ತುವಿನ ಮೇಲಿನ ಸುಂಕ ಹೆಚ್ಚು ಇದ್ದಾಗ ಇನ್‌ವರ್ಟೆಡ್ ಸುಂಕದ ಪರಿಸ್ಥಿತಿ ಉಂಟಾಗುತ್ತದೆ. ಉತ್ಪಾದಿತ ವಸ್ತುವಿನ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಮೂಲಕ ಇದನ್ನು ಸರಿದೂಗಿಸಬಹುದು.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಎರಡನೇ ಸುತ್ತಿನ ಜಿಎಸ್‌ಟಿ ದರ ಪರಿಶೀಲನೆ ನಡೆಸಲಿದೆ. ಆಟೊಮೊಬೈಲ್, ಕೆಲವು ಎಲೆಕ್ಟ್ರಾನಿಕ್ ವಸ್ತುಗಳು, ಯೂರಿಯಾ, ಇತರ ರಸಗೊಬ್ಬರ ಕಚ್ಚಾ ವಸ್ತುಗಳಲ್ಲಿ ಉತ್ಪಾದಿತ ವಸ್ತುವಿಗಿಂತ ಕಚ್ಚಾ ವಸ್ತುವಿನ ಮೇಲಿನ ತೆರಿಗೆಯೇ ಹೆಚ್ಚು ಇದೆ.
ಕಳೆದ ಜೂನ್‌ನಲ್ಲಿ ನಡೆದ ಜಿಎಸ್‌ಟಿಯ ೪೭ನೇ ಸಭೆಯಲ್ಲಿ ಮೊದಲೇ ಪ್ಯಾಕ್ ಮಾಡಿದ, ಲೇಬಲ್ ಹೊಂದಿರುವ ರಿಟೇಲ್ ಉತ್ಪನ್ನಗಳ ಮೇಲಿನ ವಿನಾಯಿತಿಯನ್ನು ರದ್ದುಪಡಿಸಲಾಗಿತ್ತು. ಮೊಸರು, ಲಸ್ಸಿ ಇತ್ಯಾದಿ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಸುಂಕ ವಿನಾಯಿತಿ ರದ್ದಾಗಿತ್ತು. ಪ್ಯಾಕ್‌ಗಳಲ್ಲಿ ಸಿದ್ಧಪಡಿಸಿ ಮಾರಾಟ ಮಾಡುವ ಪನೀರ್, ಮೊಸರು, ಲಸ್ಸಿ, ಮಜ್ಜಿಗೆ, ಜೇನುತುಪ್ಪ, ಮೀನು ಮತ್ತು ಮಾಂಸ, ಬಾರ್ಲಿ, ಓಟ್ಸ್, ಅಕ್ಕಿ- ಜೋಳದ ಹಿಟ್ಟು ಇತ್ಯಾದಿಗಳ ದರ ಏರಿಕೆಯಾಗಿತ್ತು.