Site icon Vistara News

ಫೇಸ್‌ಬುಕ್, ಗೂಗಲ್, ನೆಟ್‌ಫ್ಲಿಕ್ಸ್ ಸೇರಿ ವಿದೇಶಿ ಕಂಪನಿಗಳಿಗೆ ಜಿಎಸ್‌ಟಿ ನೋಟಿಸ್!

GST Served Notice to Facebook, Google and Netflix and other foreign companies

ನವದೆಹಲಿ: ಜಿಎಸ್‌ಟಿ ನಿಯಮಗಳನ್ನು (GST Rules) ಸರಿಯಾಗಿ ಪಾಲನೆ ಮಾಡಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರಕು ಮತ್ತು ಸೇವಾ ತೆರಿಗೆ(Goods and Service Tax) ಅಧಿಕಾರಿಗಳು, ಫೇಸ್‌ಬುಕ್ (Facebook), ಗೂಗಲ್ (Google), ನೆಟ್‌ಫ್ಲಿಕ್ (Netflix) ಮತ್ತು ಸ್ಫೂಟಿಫೈ (Spotify) ಸೇರಿದಂತೆ ಹಲವಾರು ವಿದೇಶಿ ಕಂಪನಿಗಳಿಗೆ ನೋಟಿಸ್‌ (Notice Served) ನೀಡಿದ್ದಾರೆ.

ಜಾಹೀರಾತು, ಎಜುಟೆಕ್, ಆನ್‌ಲೈನ್ ಗೇಮಿಂಗ್ ಸೇರಿದಂತೆ 70 ಡಿಜಿಟಲ್ ಕಂಪನಿಗಳಿಗೆ ನೋಟಿಸ್ ಕಳುಹಿಸಲಾಗಿದ್ದು, ಶೇ.18ರಷ್ಟು ಸಮಗ್ರ ಜಿಎಸ್‌ಟಿ ಪಾಲನೆ ಮಾಡಲಾಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ. ಈ ಹೊಸ ತೆರಿಗೆಯು ಅಕ್ಟೋಬರ್ 1ರಿಂದ ಜಾರಿಯಾಗಿದ್ದು, ವೈಯಕ್ತಿಕ ಸೇವೆ ಅಥವಾ ಬಿಸಿನೆಸ್ ಬಳಕೆ ಸೇರಿದಂತೆ ಎಲ್ಲದಕ್ಕೂ ಇದು ಅನ್ವಯವಾಗಲಿದೆ.

ಈ ತೆರಿಗೆ ಬದಲಾವಣೆಯಿಂದ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 2000 ಕೋಟಿ ರೂಪಾಯಿ ಸಂಗ್ರಹದ ಗುರಿಯನ್ನು ಹಾಕಿಕೊಂಡಿದೆ. ದೇಶದಲ್ಲಿ ಡಿಜಿಟಲ್ ಸೇವೆಯನ್ನು ಒದಗಿಸುವ ಕಂಪನಿಗಳಿಂದ ಕಳೆದ ವರ್ಷದ ಸರ್ಕಾರವು ಕೇವಲ 700 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಹಾಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ, ತೆರಿಗೆ ಬದಲಾವಣೆಯಿಂದ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಕ್ಕೆ ಹಣವು ಹರಿದು ಬರಲಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

ಈ ಸುದ್ದಿಯನ್ನೂ ಓದಿ: GST Collection: ಸೆಪ್ಟೆಂಬರ್ ತಿಂಗಳಲ್ಲಿ 1.63 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, ಶೇ.10ರಷ್ಟು ಹೆಚ್ಚಳ!

ಈ ಹಿಂದೆ, ಬಿಸಿನೆಸ್ ಟು ಬಿಸೆನೆಸ್ ಮಾತ್ರ ಐಜಿಎಸ್‌ಟಿ ವ್ಯಾಪ್ತಿಯಲ್ಲಿತ್ತು. ಭಾರತೀಯ ನ್ಯಾಯವ್ಯಾಪ್ತಿಯ ಹೊರಗೆ ಸಾಗರೋತ್ತರ ಆನ್‌ಲೈನ್ ಮಾಹಿತಿ ಡೇಟಾಬೇಸ್ ಪ್ರವೇಶ ಮತ್ತು ಮರುಪಡೆಯುವಿಕೆ (OIDAR) ಸೇವಾ ಪೂರೈಕೆದಾರರಿಂದ ವ್ಯಾಪಾರೇತರ ಸೇವೆಗಳನ್ನು ಪಡೆದುಕೊಳ್ಳುವ ವ್ಯಕ್ತಿಗಳು ಮತ್ತು ಸರ್ಕಾರಿ ಘಟಕಗಳಿಗೆ ಯಾವುದೇ ತೆರಿಗೆ ಬಾಧ್ಯತೆ ಇರಲಿಲ್ಲ.

ಜಿಎಸ್‌ಟಿಯನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಕಂಪನಿಗಳ ಮೇಲೆ ನಿಗಾ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂದಾದಾರಿಕೆ ಮಾದರಿಯ ವ್ಯಾಪಾರದಲ್ಲಿರುವವರ ಬಹುತೇಕರು ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ. ಹಾಗಿದ್ದೂ, ಕೆಲವು ಆದಾಯ ಹರಿವುಗಳು ಇದಕ್ಕೆ ಅಪವಾದವಾಗಿವೆ. ಮಧ್ಯಂತದಿಂದ ಸಣ್ಣ ಗಾತ್ರದ ಕಂಪನಿಗಳು ತೆರಿಗೆ ವ್ಯಾಪ್ತಿಗೆ ಇನ್ನೂ ಬಂದಿಲ್ಲ. ಇದೇ ವೇಳೆ, OIDAR ಅಡಿ ತೆರಿಗೆ ಪಾವತಿ ಮತ್ತು ಐಟಿಆರ್ ಸಲ್ಲಿಸುವುದು ಯಾಕೆ ಮಹತ್ವದ್ದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version