ಅಹಮದಾಬಾದ್: ಗುಜರಾತ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆದ್ದಿದ್ದ ಮೂವರು ಸ್ವತಂತ್ರ ಶಾಸಕರು ಬಿಜೆಪಿಗೆ ತಮ್ಮ ಬೆಂಬಲ (Gujarat BJP) ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯಿಂದ ಪ್ರಭಾವಿತರಾಗಿರುವುದಾಗಿ ಅವರು ತಿಳಿಸಿದ್ದಾರೆ. ಬಯಾಡ್ ವಿಧಾನಸಭೆ ಕ್ಷೇತ್ರದ ಶಾಸಕರಾದ ಧಾವಲ್‌ಸಿನ್ಹ್ ಜಲಾ, ವಘೋಡಿಯಾದ ಧರ್ಮೇಂದ್ರ ಸಿನ್ಹ್ ವಾಘೇಲಾ ಮತ್ತು ಧಾನೇರಾದ ಶಾಸಕ ಮಾವ್‌ಜಿ ದೇಸಾಯಿ ಅವರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. 182 ಸದಸ್ಯ ಬಲದ ಸದನದಲ್ಲಿ ಬಿಜೆಪಿ 156 ಸೀಟುಗಳನ್ನು ಗೆದ್ದುಕೊಂಡಿದೆ.
ಬಿಜೆಪಿ ಸರ್ಕಾರಕ್ಕೆ ಭೇಷರತ್ ಬೆಂಬಲ ಸೂಚಿಸಿರುವುದಾಗಿ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಧಾವಲ್ ಸಿನ್ಹ್ ಜಲಾ ಅವರು 2017ರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು. 2019ರಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದರು. ಬಳಿಕ ಪಕ್ಷ ತೊರೆದು ಬಿಜೆಪಿಗೆ ಸೇರಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದಾಗ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದರು. ಧರ್ಮೇಂದ್ರ ವಾಘೇಲಾ ಅವರಿಗೂ ಟಿಕೆಟ್ ನಿರಾಕರಿಸಲಾಗಿತ್ತು. ಮಾವ್‌ಜಿ ದೇಸಾಯಿ ಕೂಡ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.