ನವ ದೆಹಲಿ: ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಆಡಳಿತ ಮಂಡಳಿ ಜೂನ್ 30ರಂದು ವಿಲೀನ ಸಂಬಂಧ ಕೊನೆ ಹಂತದ ಮಾತುಕತೆ ನಡೆಸಲಿವೆ. ಜುಲೈ 1ರಿಂದ ವಿಲೀನ್ ಅನ್ವಯವಾಗಲಿದೆ ಎಂದು ಎಚ್‌ಡಿಎಫ್‌ಸಿ ಚೇರ್ಮನ್ ದೀಪಕ್ ಪರೇಖ್ ತಿಳಿಸಿದ್ದಾರೆ. (HDFC-HDFC Bank) ಎಚ್‌ಡಿಎಫ್‌ಸಿ ಷೇರು ದರದಲ್ಲಿ ಮಂಗಳವಾರ 2.3% ಏರಿಕೆ ದಾಖಲಾಗಿದೆ.
ಭಾರತದ ಕಾರ್ಪೊರೇಟ್ ಇತಿಹಾಸದಲ್ಲಿಯೇ ಅತಿ ದೊಡ್ಡ ಟ್ರಾನ್ಸಕ್ಷನ್ ಇದಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಳೆದ ವರ್ಷ ಏಪ್ರಿಲ್ 4ರಂದು 40 ಶತಕೋಟಿ ಡಾಲರ್ (3.28 ಲಕ್ಷ ಕೋಟಿ ರೂ.) ಮೌಲ್ಯದ ಡೀಲ್‌ನಲ್ಲಿ ಎಚ್‌ಡಿಎಫ್‌ಸಿಯನ್ನು ವಿಲೀನಗೊಳಿಸಲು ಸಮ್ಮತಿಸಿತ್ತು. ಇದರಿಂದಾಗಿ 168 ಶತಕೋಟಿ ಡಾಲರ್ (13.7 ಲಕ್ಷ ಕೋಟಿ ರೂ.) ಮೌಲ್ಯದ ಬ್ಯಾಂಕ್ ಸೃಷ್ಟಿಯಾಗಲಿದೆ. ಇದರಿಂದ ಉಭಯ ಬ್ಯಾಂಕ್‌ಗಳ ಕೋಟ್ಯಂತರ ಗ್ರಾಹಕರಿಗೆ ಹಾಗೂ ಅನುಕೂಲವಾಗಲಿದೆ ಎಂದು ದೀಪಕ್ ಪರೇಖ್ ತಿಳಿಸಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿಯ 25 ಷೇರುಗಳಿಗೆ 42 ಹೊಸ ಷೇರುಗಳನ್ನು ಮಂಜೂರು ಮಾಡಲಿದೆ.
ಸೆನ್ಸೆಕ್ಸ್ 446 ಅಂಕ ಏರಿಕೆ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 446 ಅಂಕ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಮುಗ್ಗರಿಸಿದರೂ ಭಾರತದಲ್ಲಿ ಷೇರು ಪೇಟೆಯಲ್ಲಿ ಸೂಚ್ಯಂಕಗಳ ಜಿಗಿತ ಕಂಡು ಬಂದಿತು. ಸೆನ್ಸೆಕ್ಸ್ 63,416ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿದರೆ, ನಿಫ್ಟಿ 126 ಅಂಕ ಏರಿಕೆಯಾಗಿ 18,817ಕ್ಕೆ ಸ್ಥಿರವಾಯಿತು.
ಸೆನ್ಸೆಕ್ಸ್ ಜಿಗಿತದ ಪರಿಣಾಮ ಹೂಡಿಕೆದಾರರಿಗೆ 1.46 ಲಕ್ಷ ಕೋಟಿ ರೂ. ಲಾಭವಾಯಿತು. ಎಸ್‌ಬಿಐ, ಎಚ್‌ಡಿಎಫ್‌ಸಿ , ಎಚ್‌ಡಿಎಫ್‌ಸಿ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್, ಟಾಟಾ ಮೋಟಾರ್ಸ್, ಎನ್‌ಟಿಪಿಸಿ ಷೇರುಗಳ ದರ ಏರಿತು. ಮತ್ತೊಂದು ಕಡೆ ಮಾರುತಿ, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಯುಎಲ್, ಐಟಿಸಿ ಷೇರು ದರ ಏರಿತು.
ಇದನ್ನೂ ಓದಿ: Adani stocks : ಅದಾನಿ ಷೇರುದಾರರಿಗೆ ದಿಢೀರ್ 50,000 ಕೋಟಿ ರೂ. ನಷ್ಟ, ಕಾರಣವೇನು?
ಬಿಎಸ್‌ಇನಲ್ಲಿ ನೋಂದಾಯಿತ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯವು 292 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು, 1.46 ಲಕ್ಷ ಕೋಟಿ ರೂ. ವೃದ್ಧಿಸಿದೆ. 2025 ಸ್ಟಾಕ್‌ಗಳು ಲಾಭ ಗಳಿಸಿತು. 1467 ಷೇರುಗಳು ನಷ್ಟಕ್ಕೀಡಾಯಿತು. ಭಾರತದ ಚಾಲ್ತಿ ಖಾತೆ ಕೊರತೆಯಲ್ಲಿ (current account deficit) 1.3 ಶತಕೋಟಿ ಡಾಲರ್ ಕಡಿಮೆಯಾಗಿದ್ದು, 16.8 ಶತಕೋಟಿ ಡಾಲರ್‌ಗೆ (1.37 ಲಕ್ಷ ಕೋಟಿ ರೂ.) ಇಳಿಯಿತು.