ಮುಂಬಯಿ: ಆರ್ಥಿಕ ಚಟುವಟಿಕೆಗಳನ್ನು ವರ್ಷವಿಡೀ ಮಾಡಬೇಕು. ಆದರೆ, ಕೆಲವು ಕಡ್ಡಾಯ ಕೆಲಸಗಳನ್ನು (Money Guide ) ಸರಕಾರದ ಮತ್ತು ನಿರ್ದಿಷ್ಟ ಹಣಕಾಸು ಸಂಸ್ಥೆಗಳ ಸೂಚನೆಯನ್ನು ನಿಗದಿತ ಅವಧಿಯೊಳಗೆ ಮಾಡಲೇಬೇಕು. ಇಲ್ಲ ಎಂದಾದರೆ ನೀವು ಕೂಡಿಟ್ಟ ಹಣ ಅಥವಾ ನಿಮ್ಮ ಹಣವನ್ನು ಜೋಪಾನವಾಗಿ ಕಾಪಾಡುವ ಉಳಿತಾಯ ಖಾತೆಗಳು ವ್ಯತಿರಿಕ್ತ ಪರಿಣಾಮವನ್ನು ತಂದೊಡ್ಟಬಹುದು. ನಿಮ್ಮದೇ ಹಣವನ್ನು ಪಡೆಯುವುದಕ್ಕೆ ಮುಂದೆ ಕಷ್ಟ ಪಡಬೇಕಾಗಬಹುದು. ಹಣ ಇದ್ದರೂ ಬಳಕೆಗೆ ಬಾರದಿರಬಹುದು. ತುರ್ತು ಸಂದರ್ಭದಲ್ಲಿ ನಿಮ್ಮ ಉಳಿತಾಯ ಪ್ರಯೋಜನಕ್ಕೆ ಸಿಗದೇ ಇರಬಹುದು. ನೀವಿಗ ಸೆಪ್ಟೆಂಬರ್ ತಿಂಗಳಿನಲ್ಲಿದ್ದೀರಿ. ಈ ತಿಂಗಳು ಮುಗಿಯಲು ಇನ್ನು ಎರಡು ವಾರಗಳು ಮಾತ್ರ ಬಾಕಿ ಉಳಿದಿದೆ. ಈ ತಿಂಗಳ ಅಂತ್ಯಕ್ಕೆ ಕೆಲವೊಂದು ಹಣಕಾಸು ಗಡುವುಗಳಿವೆ ಎಂಬುದನ್ನು ನಾವಿಲ್ಲಿ ಸ್ಮರಿಸುತ್ತಿದ್ದೇವೆ. ಅವುಗಳು ಯಾವುದೆಂದು ನೋಡೋಣ.
ಸಣ್ಣ ಉಳಿತಾಯ ಯೋಜನೆಗೆ ಆಧಾರ್ ಜೋಡಣೆ
ಸೆಪ್ಟೆಂಬರ್ 30, 2023 ರೊಳಗೆ ತಮ್ಮ ಆಧಾರ್ ಸಂಖ್ಯೆಗಳನ್ನು ಒದಗಿಸದಿದ್ದರೆ ಅಕ್ಟೋಬರ್ 1, 2023 ರಂದು ಚಾಲ್ತಿಯಲ್ಲಿರುವ ಗ್ರಾಹಕರ ಖಾತೆಗಳನ್ನು ಅಮಾನತುಗೊಳ್ಳುತ್ತವೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ಸಿಎಸ್ಎಸ್), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ) ಅಥವಾ ಇತರ ಅಂಚೆ ಕಚೇರಿ ಯೋಜನೆಗಳಂತಹ ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿರುವವರು ತಮ್ಮ ಆಧಾರ್ ಸಂಖ್ಯೆಯನ್ನು ಅಂಚೆ ಕಚೇರಿ ಅಥವಾ ತಮ್ಮ ಬ್ಯಾಂಕ್ ಶಾಖೆಗೆ ಸೆಪ್ಟೆಂಬರ್ 30ರೊಳಗೆ ಒದಗಿಸಲೇಬೇಕು.
ಕೊಡದಿದ್ದರೇ ಏನಾಗುತ್ತದೆ?
- ಸಂಗ್ರಹವಾಗಿರುವ ಬಡ್ಡಿಯನ್ನು ಹೂಡಿಕೆದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದಿಲ್ಲ.
- ಪಿಪಿಎಫ್ ಅಥವಾ ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ.
- ಪಿಪಿಎಫ್ ಅಥವಾ ಸುಕನ್ಯಾ ಸಮೃದ್ಧಿ ಖಾತೆಗಳ ಮೊತ್ತವನ್ನು ಪಡೆಯಲು ಸಾಧ್ಯವಾಗುವುದಿಲ್ಲ. \
2,000 ರೂ ವಿನಿಮಯ ಮಾಡಿಕೊಳ್ಳಲು ಕೊನೆಯ ದಿನ
ಠೇವಣಿದಾರರು ಮತ್ತು ವಿನಿಮಯದಾರರಿಗೆ 2000 ರೂ.ಗಳ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು. ಸೆಪ್ಟೆಂಬರ್ 30, 2023 ರೊಳಗೆ, ನೋಟುಗಳನ್ನು ವಿನಿಮಯ ಮಾಡಬೇಕು ಅಥವಾ ಬ್ಯಾಂಕ್ನಲ್ಲಿ ಠೇವಣಿ ಇಡಬೇಕು.
ಎಸ್ ಬಿಐ ವೀಕೇರ್
ಹಿರಿಯ ನಾಗರಿಕರಿಗಾಗಿ ಎಸ್ಬಿಐನ ವಿಕೇರ್ ವಿಶೇಷ ಸ್ಥಿರ ಠೇವಣಿಗಳು ಹೂಡಿಕೆ ಮಾಡಲು ಸೆಪ್ಟೆಂಬರ್ 30, 2023 ಕೊನೆಯ ದಿನಾಂಕ. ಹೆಚ್ಚಿನ ಎಫ್ಡಿ ಬಡ್ಡಿದರಗಳನ್ನು ನೀಡುವ ಈ ಯೋಜನೆಗೆ ಹಿರಿಯ ನಾಗರಿಕರು ಮಾತ್ರ ಅರ್ಹರಾಗಿದ್ದಾರೆ. ಬ್ಯಾಂಕ್ ಸಾರ್ವಜನಿಕರಿಗೆ ನೀಡುವ ಕಾರ್ಡ್ ದರಕ್ಕಿಂತ 50 ಬೇಸಿಸ್ ಪಾಯಿಂಟ್ (ಬಿಪಿಎಸ್) ಹೆಚ್ಚುವರಿ ಪ್ರೀಮಿಯಂ ಅನ್ನು ಈ ಪ್ಲ್ಯಾನ್ ಒದಗಿಸುತ್ತದೆ. ವಿ ಕೇರ್ ಯೋಜನೆಯಲ್ಲಿ ಹಿರಿಯ ನಾಗರಿಕರು 7.50 ಬಡ್ಡಿಯನ್ನು ಪಡೆಯುತ್ತಾರೆ. ಇದು ಹೊಸ ಠೇವಣಿ ಮತ್ತು ಇರುವ ಠೇವಣಿಯ ನವೀಕರಣಕ್ಕೂ ಅನ್ವಯವಾಗುತ್ತದೆ.
ಐಡಿಬಿಐ ಅಮೃತ ಮಹೋತ್ಸವ ಎಫ್ಡಿ
375 ದಿನಗಳ ಅಮೃತ ಮಹೋತ್ಸವ್ ಎಫ್ಡಿ ಯೋಜನೆಯಡಿ, ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 7.10% ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ, ಬ್ಯಾಂಕ್ 7.60% ನೀಡುತ್ತದೆ. 444 ದಿನಗಳ ಸ್ಕೀಮ್ನಲ್ಲಿ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 7.15% ಮತ್ತು ಹಿರಿಯ ನಾಗರಿಕರಿಗೆ 7.65% ಬಡ್ಡಿದರವನ್ನು ನೀಡುತ್ತದೆ.
ಡೆಮಾಟ್, ಎಂಎಫ್ ನಾಮನಿರ್ದೇಶನ
ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆದಾರರಿಗೆ ನಾಮಿನಿಗಳನ್ನು ಸೂಚಿಸಲು ಅಥವಾ ನಾಮಿನಿಯಿಂದ ಹೊರಗುಳಿಯಲು ಸಮಯವನ್ನು ವಿಸ್ತರಿಸಿತ್ತು. ಪರಿಷ್ಕೃತ ಗಡುವು ಸೆಪ್ಟೆಂಬರ್ 30, 2023.