ನವ ದೆಹಲಿ: ಜಗತ್ತಿನ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕ ಕಂಪನಿಯಾದ ಹೀರೊ ಮೊಟೊ ಕಂಪನಿಯ (Hero Motocorp) ಚೇರ್ಮನ್ ಪವನ್ ಮುಂಜಾಲ್ ಮನೆಗೆ ಜಾರಿ ನಿರ್ದೇಶನಾಲಯವು (Enforcement Directorate -ED) ದಾಳಿ ನಡೆಸಿದೆ. ಇತರ ಕೆಲವು ಕಚೇರಿಗಳ ಮೇಲೆ ಕೂಡ ಇ.ಡಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ದಿಲ್ಲಿ ಮತ್ತು ನೆರೆಯ ಗುರುಗ್ರಾಮದಲ್ಲಿ ಇ.ಡಿ ಕಾರ್ಯಾಚರಣೆ ನಡೆದಿದೆ. (Prevention money laundering act -PMLA) ಪವನ್ ಮುಂಜಾಲ್ ಅವರ ಆಪ್ತರೊಬ್ಬರು ಅಘೋಷಿತ ವಿದೇಶಿ ಕರೆನ್ಸಿಗಳನ್ನು ಸಾಗಿಸುತ್ತಿದ್ದ ಆರೋಪದ .ಮೇರೆಗೆ ತನಿಖೆ ನಡೆದಿದೆ ಎಂದು ವರದಿಯಾಗಿದೆ.
ಹೀರೊ ಮೊಟೊ ವಿರುದ್ಧದ ಆರೋಪವೇನು?: ಇ.ಡಿ ದಾಳಿಯ ಬೆನ್ನಲ್ಲೇ ಹೀರೊ ಮೊಟೊ ಕಂಪನಿಯ ಷೇರು ದರದಲ್ಲಿ 4.4 % ಇಳಿಕೆಯಾಗಿದೆ. ವರದಿಯ ಪ್ರಕಾರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು (Ministry of corporate affairs) ಹೀರೊ ಮೊಟೊಕಾರ್ಪ್ ವಿರುದ್ಧ ಕಾರ್ಪೊರೇಟ್ ವಿವಾದಗಳಿಗೆ ಸಂಬಂಧಿಸಿ ತನಿಖೆ ನಡೆಸಲು ಇ.ಡಿಗೆ ಕಳೆದ ಜೂನ್‌ನಲ್ಲಿ ಆದೇಶಿಸಿತ್ತು. ಹೀರೊ ಮೊಟೊ ಕಾರ್ಪ್ ನಕಲಿ ಕಂಪನಿಗಳನ್ನು ನಡೆಸುತ್ತಿದೆ ಎಂಬ ಆರೋಪವೂ ಇದೆ. ಈ ಬಗ್ಗೆ ರಿಜಿಸ್ಟ್ರಾರ್ ಆಫ್ ಕಂಪನೀಸ್ ತನಿಖೆ ಪೂರ್ಣಗೊಳಿಸಿದೆ.
2022ರ ಮಾರ್ಚ್‌ನಲ್ಲಿ ತೆರಿಗೆ ಸೋರಿಕೆಗೆ ಸಂಬಂಧಿಸಿದಂತೆ ಹೀರೊ ಮೊಟೊ ಕಾರ್ಪ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಆಗ ಐಟಿ ಇಲಾಖೆಯ ತಂಡವು ಪವನ್ ಮುಂಜಾಲ್ ಅವರ ನಿವಾಸದಲ್ಲೂ ಶೋಧ ನಡೆಸಿತ್ತು. ಸಿಬಿಡಿಟಿ ನೀಡಿದ್ದ ಹೇಳಿಕೆಯಲ್ಲಿ 800 ಕೋಟಿ ರೂ. ಅವ್ಯವಹಾರ ಆಗಿರುವುದು ಪತ್ತೆಯಾಗಿದೆ ಎಂದು ತಿಳಿಸಿತ್ತು.
2018ರ ಆಗಸ್ಟ್‌ನಲ್ಲಿ ಪವನ್ ಮುಂಜಾಲ್ ಅವರನ್ನು ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಕ್ಕೆ ತಡೆಯಲಾಗಿತ್ತು. ಇದಕ್ಕೂ ಮುನ್ನ ಅಮಿತ್ ಬಾಲಿ ಎಂಬಾತ 81 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ಲಗ್ಗೇಜ್‌ನಲ್ಲಿ ಸಾಗಿಸಿದ್ದುದು ಪತ್ತೆಯಾಗಿತ್ತು. ಸೆಕ್ಯುರಿಟಿ ಚೆಕ್ ಮಾಡುವ ಸಿಐಎಸ್‌ಎಫ್ ಅಧಿಕಾರಿಗಳಿಗೆ ಇದು ಪತ್ತೆಯಾಗಿತ್ತು.
ಇದನ್ನೂ ಓದಿ: Hero MotoCorp : ಹೀರೊ ಮೊಟೊಕಾರ್ಪ್ ಎಲ್ಲ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ (VRS) ಘೋಷಣೆ ಮಾಡಿದ್ದೇಕೆ?
ಹೀರೊ ಮೊಟೊಕಾರ್ಪ್ 2001ರಲ್ಲಿ ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕವಾಗಿತ್ತು. 40 ದೇಶಗಳಲ್ಲಿ ಕಂಪನಿ ಅಸ್ತಿತ್ವದಲ್ಲಿದೆ. ಏಷ್ಯಾ, ಆಫ್ರಿಕಾ, ದಕ್ಷಿಣ ಮತ್ತು ಸೆಂಟ್ರಲ್ ಅಮೆರಿಕದಲ್ಲಿ ಅಸ್ತಿತ್ವದಲ್ಲಿದೆ.