ಬೆಂಗಳೂರು: ಒಂದಿಲ್ಲೊಂದು ಕಾರಣಗಳಿಂದಾಗಿ ಬೆಲೆ ಏರಿಕೆ ಇಡೀ ಜಗತ್ತನ್ನು ಆವರಿಸಿದೆ. ಮನೆಯ ದಿನ ನಿತ್ಯದ ಖರ್ಚು ವೆಚ್ಚಗಳು, ಸಾಲದ ಬಡ್ಡಿ, ಕೈ ಸಾಲ, ಕ್ರೆಡಿಟ್ ಕಾರ್ಡ್ ಬಿಲ್ ಎಲ್ಲವೂ ಗಗನಮುಖಿಯಾಗಿವೆ. ಕಳೆದ ಏಪ್ರಿಲ್‌ನಲ್ಲಿ ಹೋಲ್‌ಸೇಲ್ ಹಣದುಬ್ಬರ ಬರೋಬ್ಬರಿ ಶೇ.15.08ಕ್ಕೆ ಜಿಗಿದು ಎಚ್ಚರಿಕೆಯ ಗಂಟೆ ಬಾರಿಸಿದೆ. ರಿಟೇಲ್ ಹಣದುಬ್ಬರ ಶೇ.7.79ಕ್ಕೆ ಏರಿದ್ದು ಆರ್‌ಬಿಐ ಸೂಚಿಸಿರುವ ಸುರಕ್ಷತೆಯ ಮಟ್ಟವನ್ನು ಮೀರಿದೆ. ಕಳೆದ ಎಂಟು ವರ್ಷಗಳಲ್ಲೇ ಗರಿಷ್ಠ ಹಣದುಬ್ಬರವನ್ನು ದೇಶ ಎದುರಿಸುತ್ತಿದೆ. ರೂಪಾಯಿ ಮೌಲ್ಯ ಕುಸಿಯುತ್ತಿದೆ. ಇದರ ಅತಿ ದೊಡ್ಡ ಮತ್ತು ನೇರ ಪರಿಣಾಮವಾಗಿ ಲಭ್ಯವಿರುವ ಬಹುತೇಕ ಎಲ್ಲ ಸಣ್ಣ ಉಳಿತಾಯ, ಬ್ಯಾಂಕ್ ಉಳಿತಾಯ ಖಾತೆಗಳ ಬಡ್ಡಿ ದರಗಳು ಹಣದುಬ್ಬರವನ್ನು ಎದುರಿಸಲು ವಿಫಲವಾಗಿವೆ.
ಬ್ಯಾಂಕ್ ಉಳಿತಾಯ ಉಳಿತಾಯ ಖಾತೆ ಬಿಡಿ, ನಿಶ್ಚಿತ ಠೇವಣಿ, ಸಾರ್ವಜನಿಕ ಭವಿಷ್ಯನಿಧಿ (ಪಿಪಿಎಫ್) ಸೇರಿದಂತೆ ಸರಕಾರಗಳ ಜನಪ್ರಿಯ ಹಾಗೂ ಸುರಕ್ಷಿತ ಸಣ್ಣ ಉಳಿತಾಯ ಯೋಜನೆಗಳೂ ಹಣದುಬ್ಬರವನ್ನು ಎದುರಿಸುವಲ್ಲಿ ಈಗ ನಿಮಗೆ ಸಹಕರಿಸಲಾರದು. ಏಕೆಂದರೆ ಅವುಗಳಲ್ಲಿ ಸಿಗುವ ಬಡ್ಡಿ ಆದಾಯ ಹಣದುಬ್ಬರದ ಪ್ರಮಾಣಕ್ಕಿಂತ ಕಡಿಮೆ.
ಉದಾಹರಣೆಗೆ ದೇಶದ ಅತಿ ದೊಡ್ಡ ಬ್ಯಾಂಕ್ ಎನ್ನಿಸಿರುವ ಎಸ್‌ಬಿಐನಲ್ಲಿ ಉಳಿತಾಯ ಖಾತೆಯಲ್ಲಿ ನೀವು ಇಡುವ 1 ಲಕ್ಷ ರೂ. ತನಕದ ಠೇವಣಿಗೆ ಸಿಗುವ ಬಡ್ಡಿ ದರ ವರ್ಷಕ್ಕೆ ಕೇವಲ ಶೇ.2.70ಮಾತ್ರ. ಈಗ ಶೇ.7.79 ರ ಹಣದುಬ್ಬರ ಇದೆ. ಒಂದು ವೇಳೆ ಒಂದು ವರ್ಷ ನೀವು ಇಲ್ಲಿ ಠೇವಣಿ ಇಟ್ಟರೆ ಅಂತಿಮವಾಗಿ ಏನಾಗುವುದು ಗೊತ್ತೇ? ಹಣದುಬ್ಬರದ ಪರಿಣಾಮ ನಿಮ್ಮ ಉಳಿತಾಯದ ಹಣದಲ್ಲೇ ಶೇ.೫.೦೯ರಷ್ಟು ಮೌಲ್ಯ ನಷ್ಟವಾಗಿರುತ್ತದೆ. ಠೇವಣಿಗೆ ಜುಜುಬಿ ಬಡ್ಡಿ ಸೇರಬಹುದು. ಆದರೆ ವಾಸ್ತವವಾಗಿ ಅದರ ಕಿಮ್ಮತ್ತು ಕುಸಿದಿರುತ್ತದೆ. ಹೀಗಾಗಿ ನಿಮ್ಮ ಸಂಪತ್ತು ಬೆಳೆಯುವುದರ ಬದಲಿಗೆ ಕಳೆಯುವುದಾಗುತ್ತದೆ! ಉಳಿತಾಯ ಖಾತೆಗೆ ಸಿಗುವ ಶೇ.2ರಿಂದ ಶೇ.4ರ ತನಕದ ಬಡ್ಡಿ ದರವಾಗಲಿ, ನಿಶ್ಚಿತ ಠೇವಣಿಗೆ ಸಿಗುವ ಶೇ.5-7ರ ಬಡ್ಡಿ ದರವಾಗಲಿ ಹಣದುಬ್ಬರದ ಎದುರು ಸಂಪತ್ತನ್ನು ಬೆಳೆಸಲಾರದು.
ಸಾರ್ವಜನಿಕ ಭವಿಷ್ಯನಿಧಿ (ಪಿಪಿಎಫ್) ಯೋಜನೆಯಲ್ಲಿ ಶೇ.7.1ರ ಬಡ್ಡಿ ಆದಾಯ ಇದೆ. ಆದರೆ ಚಿಲ್ಲರೆ ಹಣದುಬ್ಬರವನ್ನು ಎದುರಿಸಲು ಸಾಲದು.
ಹಾಗಾದರೆ ಎಲ್ಲಿ ಹಣವನ್ನು ಇಟ್ಟರೆ ಹಣದುಬ್ಬರಕ್ಕಿಂತ ಹೆಚ್ಚು ಬಡ್ಡಿ ದರ ಸಿಗುತ್ತದೆ ಎಂಬುದನ್ನು ಅರಿತುಕೊಳ್ಳುವುದು ಈಗಿನ ತುರ್ತು ಅವಶ್ಯಕತೆ. ಏಕೆಂದರೆ ಹೇಗೂ ಉಳಿತಾಯ ಖಾತೆ ಅಥವಾ ನಿಶ್ಚಿತ ಠೇವಣಿಗಳಲ್ಲಿ ಬಡ್ಡಿ ಸಾಲದು, ಹೀಗಾಗಿ ದುಡ್ಡು ಇರುವಾಗ ಖರ್ಚು ಮಾಡಿ ಬಿಡೋಣ ಎಂದುಕೊಂಡರೆ, ಅದೂ ಅತಿ ದೊಡ್ಡ ಪ್ರಮಾದವಾಗುತ್ತದೆ. ಉಳಿತಾಯ ಮತ್ತು ಹೂಡಿಕೆ ಮಾಡದಿದ್ದರೆ ಜೀವನದಲ್ಲಿ ಹೆಚ್ಚು ವೆಚ್ಚವನ್ನು ಬಯಸುವ ಹಾಗೂ ಅವಶ್ಯಕವಾದ ಗುರಿಗಳನ್ನು ಈಡೇರಿಸಲು ಸಾಧ್ಯವಾಗದೆ ಹತಾಶೆಯಿಂದ ಕೊರಗುವಂತಾಗಬಹುದು. ಆತ್ಮವಿಶ್ವಾಸದಿಂದ ಬದುಕನ್ನು ಸ್ವಾವಲಂಬಿಯಾಗಿ ನಡೆಸಲು ಸಾಧ್ಯವಾಗದಿರಬಹುದು. ಆರ್ಥಿಕ ಭದ್ರತೆ ಮತ್ತು ಸ್ವಾತಂತ್ರ್ಯ ಕೈಗೆಟುಕದೆ ಅತಂತ್ರರಾಗಬಹುದು. ಸ್ವಂತ ಮನೆ, ನಿವೇಶನ ಅಥವಾ ಬೇರೆ ಯಾವುದಾದರೂ ಪ್ರಮುಖ ಕನಸುಗಳನ್ನು ನನಸಾಗಿಸುವುದು ಬಹಳ ಕಷ್ಟವಾದೀತು.
ಹೂಡಿಕೆ ಬಗ್ಗೆ ಮನೆಯಲ್ಲೇ ಮಾತನಾಡಿ
ಹೆಚ್ಚುತ್ತಿರುವ ಬೆಲೆ ಏರಿಕೆ ಹಾಗೂ ಅದನ್ನು ಎದುರಿಸಲು ಹೇಗೆ ಹಣವನ್ನು ಉಳಿಸಬಹುದು ಮತ್ತು ಎಲ್ಲಿ ಹೂಡಿಕೆ ಮಾಡಬೇಕು ಎಂದು ನಿರ್ಧರಿಸುವ ಮೊದಲು ಮನೆಮಂದಿಯಲ್ಲಿ ಚರ್ಚಿಸಿ. ಮ್ಯೂಚುವಲ್ ಫಂಡ್, ಷೇರು, ಚಿನ್ನ, ರಿಯಲ್ ಎಸ್ಟೇಟ್, ಬಾಂಡ್, ಇಟಿಎಫ್ ಇತ್ಯಾದಿ ಹೆಚ್ಚಿನ ಆದಾಯ ನೀಡುವ ಹೂಡಿಕೆಯ ಸಾಧನಗಳಲ್ಲಿ ಇನ್ವೆಸ್ಟ್ ಮಾಡುವ ಬಗ್ಗೆ ಕುಟುಂಬದ ಸದಸ್ಯರೊಡನೆ ಚರ್ಚಿಸುವುದು ಉತ್ತಮ ನಡೆ. ವಿಮೆಗಳಲ್ಲಿ ಹೂಡಿಕೆ ಮಾಡಿದ್ದರೆ ಅದರ ವಿವರಗಳನ್ನೂ ಹಂಚಿಕೊಳ್ಳಿ. ಹಣದುಬ್ಬರವನ್ನು ಸೋಲಿಸಲು ಎಲ್ಲರೂ ಅದರ ಬಗ್ಗೆ ಮಾತನಾಡುವುದು, ವಿಚಾರ ವಿಮರ್ಶೆ ಮಾಡುವುದು ಅತಿ ಮುಖ್ಯ. ಕೆಜಿಎಫ್ ಸಿನಿಮಾದ ಬಗ್ಗೆ, ರಾಜಕೀಯದ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತೇವೆ. ಹರಟುತ್ತೇವೆ. ಇರಲಿ, ಅದರ ಜತೆಗೆ ಹಣಕಾಸು ಮತ್ತು ಹೂಡಿಕೆ ಬಗ್ಗೆಯೂ ಮಾತನಾಡುವುದು ಅತ್ಯಂತ ಉಪಯುಕ್ತ ಎಂಬುದರಲ್ಲಿ ಸಂದೇಹವೇ ಇಲ್ಲ.
ಬೆಲೆ ಏರಿಕೆ ಎದುರಿಸಲು ಹೂಡಿಕೆ ಸಹಕಾರಿ
ಜನಜೀವನದ ಖರ್ಚು ವೆಚ್ಚಗಳು ಬಲೂನಿನಂತೆ ಉಬ್ಬುತ್ತಿರುವಾಗ ಕೇವಲ ನಾನಾ ಬಿಲ್‌ಗಳನ್ನು ಕಟ್ಟುವುದು ಮಾತ್ರ ಮುಖ್ಯವಲ್ಲ. ವೈಯಕ್ತಿಕ ಆದಾಯವನ್ನು ಮತ್ತುಸಂಪತ್ತನ್ನು ಹೆಚ್ಚಿಸಿಕೊಳ್ಳುವುದು ಕೂಡ ಅಷ್ಟೇ ನಿರ್ಣಾಯಕ. ದುಡ್ಡನ್ನು ಸರಿಯಾಗಿ ಹೂಡಿಕೆ ಮಾಡುವ ಮೂಲಕ ದುಡಿಸಿಕೊಳ್ಳುವುದರಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.
ಉಳಿತಾಯ ಮಾತ್ರ ಸಾಕಾಗುವುದಿಲ್ಲ
ಅನೇಕ ಮಂದಿ ಉಳಿತಾಯ ಒಂದರಿಂದಲೇ ಸಕಲವೂ ಸಾಧ್ಯ ಎಂದು ನಂಬುತ್ತಾರೆ.
ಹೂಡಿಕೆಗೆ ಅಂಥ ಆದ್ಯತೆ ಕೊಡುವುದಿಲ್ಲ. ಆದರೆ ಉಳಿತಾಯ ಮಾತ್ರ ಸಾಕಾಗುವುದಿಲ್ಲ. ಅದನ್ನು ಸರಿಯಾಗಿ ಹೂಡಿಕೆ ಮಾಡಿದರೆ ಮಾತ್ರ ದೊಡ್ಡ ಮೊತ್ತವಾಗಿ ವೃದ್ಧಿಸುತ್ತದೆ. ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ 10ಸಾವಿರ ರೂ.ಗಿಂತ ಹೆಚ್ಚು ದುಡ್ಡನ್ನು ಇಡುವುದು ವ್ಯರ್ಥ ಎನ್ನುತ್ತಾರೆ ವೈಯಕ್ತಿಕ ಹಣಕಾಸು ಸಲಹೆಗಾರರು. ಹೀಗಾಗಿ ಉಳಿದ ಹಣವನ್ನು ಮ್ಯೂಚುವಲ್ ಫಂಡ್, ಷೇರು, ಚಿನ್ನ, ಇಟಿಎಫ್, ಪ್ರಾಪರ್ಟಿ ಇತ್ಯಾದಿ ವೈವಿಧ್ಯಮಯ ಹೂಡಿಕೆಯಾಗಿ ಪರಿವರ್ತಿಸುವ ಮೂಲಕ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದು. ಹಾಗಂತ ಉಳಿತಾಯ ಕೂಡ ಹೇಳಿದಷ್ಟು ಸುಲಭವಲ್ಲ. ನಾನಾ ಬಗೆಯ ಆಕರ್ಷಣೆಗಳು, ಅಗತ್ಯಗಳು ದುಡ್ಡನ್ನು ತಕ್ಷಣ ಖರ್ಚು ಮಾಡುವಂತೆ ಪ್ರೇರೇಪಿಸುತ್ತದೆ.
ಹೂಡಿಕೆ ಆರಂಭಿಸಲು 1,000 ರೂ. ಸಾಕು
ಹೂಡಿಕೆಯನ್ನು ಶುರು ಮಾಡಲು ಲಕ್ಷಾಂತರ ರೂಪಾಯಿ ಬೇಕು ಎಂಬ ಆಲೋಚನೆಯೊಂದಿಗೆ ಅನೇಕ ಮಂದಿ ಮುಂದೂಡುತ್ತಾರೆ. ಆದರೆ ಹೂಡಿಕೆಗೆ ಅಷ್ಟೆಲ್ಲ ಬೇಕೇಬೇಕು ಎಂದೇನಿಲ್ಲ. ಕೇವಲ 1,000 ರೂ.ಗಳಿಂದಲೂ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಆರಂಭಿಸಬಹುದು. ಹೂಡಿಕೆ ಶುರು ಮಾಡುವುದು ಮತ್ತು ಶಿಸ್ತಿನಿಂದ ಮುಂದುವರಿಸುವ ಬದ್ಧತೆ ಎಲ್ಲಕ್ಕಿಂತ ಮುಖ್ಯ. ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡುವುದರಿಂದ ಹಣದುಬ್ಬರವನ್ನು ಸೋಲಿಸಬಹುದು. ಆದರೆ ಅದಕ್ಕೆ ಅಧ್ಯಯನ, ಸಮಯ ಎರಡೂ ನೀಡಬೇಕು. ಅದು ಸಾಧ್ಯವಾಗದಿದ್ದರೆ ಮ್ಯೂಚುವಲ್ ಫಂಡ್‌ಗಳು ಉತ್ತಮ ಆಯ್ಕೆ ಎನ್ನುತ್ತಾರೆ ತಜ್ಞರು.