Site icon Vistara News

High net worth Indians : ಈ ವರ್ಷ ದೇಶ ಬಿಡಲಿದ್ದಾರೆ 6,500 ಶ್ರೀಮಂತರು, ಚಿಂತೆ ಮಾಡಬೇಕೇ?

dubai laxury house

#image_title

ಮುಂಬಯಿ: ಈ ವರ್ಷ ಭಾರತದಿಂದ 6,500 ಮಂದಿ ಶ್ರೀಮಂತ ವ್ಯಕ್ತಿಗಳು ದೇಶ ಬಿಟ್ಟು ಹೋಗಲಿದ್ದಾರೆ ಎಂದು ವರದಿಯಾಗಿದೆ. (High net worth Indians ) ಕಳೆದ ವರ್ಷ 7,500 ಮಂದಿ ಭಾರತವನ್ನು ತೊರೆದಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸ್ವಲ್ಪ ಕಡಿಮೆ ಎನ್ನಬಹುದು. ಆದರೆ ಜಾಗತಿಕ ಮಟ್ಟದಲ್ಲಿ ಚೀನಾ ಬಿಟ್ಟರೆ ಹೆಚ್ಚು ಮಂದಿ ಭಾರತದಿಂದ ಹೊರ ನಡೆಯುತ್ತಿದ್ದಾರೆ.

ಚೀನಾದಲ್ಲಿ ಈ ವರ್ಷ 13,500 ಶ್ರೀಮಂತರು (HNIs) ದೇಶ ಬಿಟ್ಟು ಹೊರಟು ಹೋಗಿದ್ದಾರೆ. 2022ರಲ್ಲಿ 10.800 ಮಂದಿ ಚೀನಾದಿಂದ ನಿರ್ಗಮಿಸಿದ್ದರು. ಬ್ರಿಟನ್‌ ಮೂರನೇ ಸ್ಥಾನದಲ್ಲಿದೆ. ಬ್ರಿಟನ್‌ನಿಂದ 3,200 ಮಂದಿ ದೇಶ ಬಿಟ್ಟು ಹೋಗಿದ್ದಾರೆ. ಮಿಲಿಯನೇರ್‌ಗಳೆಂದರೆ 10 ಲಕ್ಷ ಡಾಲರ್‌ಗಿಂತ ಹೆಚ್ಚು ಸಂಪತ್ತು ಹೊಂದಿರುವವರು. (8.2 ಕೋಟಿ ರೂ.)

The Henley Private Wealth migration report 2023 ಪ್ರಕಾರ ಚೀನಾದಲ್ಲಿ 7.8 ಲಕ್ಷ ಮಿಲಿಯನೇರ್‌ಗಳಿದ್ದಾರೆ. ಭಾರತದಲ್ಲಿ 3.4 ಲಕ್ಷ ಮಿಲಿಯನೇರ್‌ಗಳಿದ್ದಾರೆ. ವರದಿಯ ಪ್ರಕಾರ ಭಾರತ ಈ ಬಗ್ಗೆ ಅತೀವ ಚಿಂತೆ ಮಾಡಬೇಕಾಗಿಲ್ಲ. ಏಕೆಂದರೆ ಹೊಸ ಮಿಲಿಯನೇರ್‌ಗಳನ್ನು ಸೃಷ್ಟಿಸುವ ಸಾಮರ್ಥ್ಯ ಭಾರತಕ್ಕೆ ಇದೆ. 2030ರ ವೇಳೆಗೆ ಭಾರತದಲ್ಲಿ ಮಿಲಿಯನೇರ್‌ಗಳ ಸಂಖ್ಯೆಯಲ್ಲಿ 80% ಹೆಚ್ಚಳವಾಗುವ ನಿರೀಕ್ಷೆ ಇದೆ. ಜಗತ್ತಿನಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತ ಒಂದಾಗಿ ಹೊರಹೊಮ್ಮಿದೆ.

ಹಣಕಾಸು ಸೇವೆ, ಆರೋಗ್ಯ, ತಂತ್ರಜ್ಞಾನ ವಲಯದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದೆ. ಜನ ಜೀವನದ ಗುಣಮಟ್ಟ ಕೂಡ ಸುಧಾರಿಸುತ್ತಿದೆ. ತಲಾ ಆದಾಯ ವೃದ್ಧಿಸುತ್ತಿದೆ. ಭಾರತದಲ್ಲಿ ತೆರಿಗೆ ಕಾನೂನುಗಳು ಸಂಕೀರ್ಣವಾಗಿರುವುದು, ವಿದೇಶಿ ಹೂಡಿಕೆ ಕುರಿತ ನಿಯಮಗಳು ಬಿಗಿಯಾಗಿರುವುದು ಮಿಲಿಯನೇರ್‌ಗಳ ವಲಸೆಗೆ ಕಾರಣವಾಗಿದೆ ಎನ್ನುತ್ತಾರೆ ತಜ್ಞರು. ಹೀಗೆ ಹೊರಟ ಸಿರಿವಂತರು ದುಬೈ, ಸಿಂಗಾಪುರದಲ್ಲಿ ಹೆಚ್ಚಾಗಿ ನೆಲೆಸುತ್ತಾರೆ. ಆಸ್ಟ್ರೇಲಿಯಾ ಕೂಡ ಭಾರತದ ಮಿಲಿಯನೇರ್‌ಗಳನ್ನು ಆಕರ್ಷಿಸುತ್ತಿದೆ.‌

ಆನ್‌ಲೈನ್‌ ಬ್ರೋಕರೇಜ್‌ ವಲಯದ ಜೆರೋಧಾ (Zerodha) ಕಂಪನಿಯ ಸಂಸ್ಥಾಪಕರಾದ ನಿತಿನ್‌ ಕಾಮತ್‌ ಮತ್ತು ನಿಖಿಲ್‌ ಕಾಮತ್‌ ಅವರು ಫೋರ್ಬ್ಸ್‌ ಬಿಲಿಯನೇರ್ಸ್‌ 2023 ಪಟ್ಟಿಗೆ ಹೊಸತಾಗಿ ಸೇರ್ಪಡೆಯಾಗಿದ್ದಾರೆ. ನಿತಿನ್‌ ಕಾಮತ್‌ ಅವರು 1104 ಹಾಗೂ ನಿಖಿಲ್‌ ಕಾಮತ್‌ 2405ನೇ ರ‍್ಯಾಂಕ್‌ ಗಳಿಸಿದ್ದಾರೆ.

ಫೋರ್ಬ್ಸ್‌ ಪಟ್ಟಿಯ ಪ್ರಕಾರ ನಿತಿನ್‌ ಕಾಮತ್‌ ಅವರ ಸಂಪತ್ತು 2.7 ಶತಕೋಟಿ ಡಾಲರ್‌ (22,140 ಕೋಟಿ ರೂ.) ಹಾಗೂ ನಿಖಿಲ್‌ ಕಾಮತ್‌ ಅವರ ಸಂಪತ್ತು 1.1 ಶತಕೋಟಿ ಡಾಲರ್‌ (9,020 ಕೋಟಿ ರೂ.) 2010ರಲ್ಲಿ ನಿತಿನ್‌ ಕಾಮತ್‌ ಅವರು ತಮ್ಮ ಸೋದರ ನಿಖಿಲ್‌ ಕಾಮತ್‌ ಅವರೊಡನೆ ಜೆರೋಧಾ ಬ್ರೋಕರೇಜ್‌ ಅನ್ನು ಸ್ಥಾಪಿಸಿದ್ದರು. ಕಡಿಮೆ ವೆಚ್ಚದಲ್ಲಿ ಷೇರು ಬ್ರೋಕರೇಜ್‌ ಒದಗಿಸುವ ನಿಟ್ಟಿನಲ್ಲಿ ಜೆರೋಧಾ ಜನಪ್ರಿಯತೆ ಗಳಿಸಿದೆ.

ಇದನ್ನೂ ಓದಿ: Zerodha : ಜೆರೋಧಾ ಸ್ಥಾಪಕರಾದ ನಿತಿನ್‌, ನಿಖಿಲ್‌ ಕಾಮತ್ ಫೋರ್ಬ್ಸ್‌ ಪಟ್ಟಿಗೆ ಹೊಸ ಸೇರ್ಪಡೆ, ಸೋದರರ ಸಂಪತ್ತೆಷ್ಟು?

Exit mobile version