Site icon Vistara News

Higher EPS pension : ಉದ್ಯೋಗಿಗಳಿಗೆ ಸಿಹಿ ಸುದ್ದಿ, ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ಗಡುವು ಜೂನ್‌ 26ಕ್ಕೆ ವಿಸ್ತರಣೆ, ಏನಿದು?

Higher EPS pension EPFO ​​extends deadline to apply for higher pension to June 26 2023

ನವ ದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ (Employees provident fund organisation -EPFO) ಉದ್ಯೋಗಿಗಳ ಪಿಂಚಣಿ ಯೋಜನೆಯ ಅಡಿಯಲ್ಲಿ (EPS) ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಗಡುವನ್ನು 2023ರ ಜೂನ್‌ 26ಕ್ಕೆ ಮುಂದೂಡಿದೆ. ಈ ಹಿಂದೆ 2023ರ ಮೇ 2 ಗಡುವಾಗಿತ್ತು. ಇಪಿಎಫ್‌ಒ ಎರಡನೇ ಬಾರಿಗೆ ಇಪಿಎಸ್‌ನ ಹೆಚ್ಚಿನ ಪೆನ್ಷನ್‌ಗೆ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸಿದಂತಾಗಿದೆ.

ಈ ಹಿಂದೆ ಸುಪ್ರೀಂಕೋರ್ಟ್‌ ತನ್ನ ತೀರ್ಪಿನ ದಿನಾಂಕದ (2022 ನವೆಂಬರ್‌ 4) ನಾಲ್ಕು ತಿಂಗಳಿನ ಅವಧಿಯ ತನಕ, ಅಂದರೆ 2023ರ ಮಾರ್ಚ್‌ 3 ತನಕ ನಿಗದಿಪಡಿಸಿತ್ತು. ಆದರೆ ಇಪಿಎಫ್‌ಒ ಸುಪ್ರೀಂಕೋರ್ಟ್‌ ಆದೇಶದ ಪಾಲನೆಯಲ್ಲಿ ವಿಳಂಬಿಸಿತ್ತು. ಮತ್ತೆರಡು ತಿಂಗಳಿಗೆ ವಿಸ್ತರಿಸಲಾಯಿತು ( 2023ರ ಮೇ 3) ಹೀಗಿದ್ದರೂ, ಸಮಸ್ಯೆ ಬಗೆಹರಿದಿರಲಿಲ್ಲ. ಇದೀಗ ಮತ್ತೆ ಜೂನ್‌ 26ಕ್ಕೆ ಮುಂದೂಡಲಾಗಿದೆ. ಹೀಗಾಗಿ ಅರ್ಹ ಉದ್ಯೋಗಿಗಳು ಅರ್ಜಿ ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಸಿಕ್ಕಿದಂತಾಗಿದೆ.

ಎಲ್ಲ ಇಪಿಎಫ್‌ ಸದಸ್ಯರೂ ಈ ಸೌಲಭ್ಯಕ್ಕೆ ಅರ್ಹರಲ್ಲ. ಅರ್ಹತೆ ಇರುವವರು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಹತೆ ಇದ್ದರೆ ನಿಗದಿತ ದಾಖಲೆ ಸಲ್ಲಿಸಿ ಅರ್ಜಿ ದಾಖಲಿಸಬಹುದು. ಮೂಲ ವೇತನವು ನಿರ್ದಿಷ್ಟ ಮಿತಿಗಿಂತ ಮೇಲಿದ್ದರೆ ಅರ್ಹತೆ ಸಿಗಲಿದೆ. ಇಪಿಎಸ್‌ ಅಡಿಯಲ್ಲಿ ಪಿಂಚಣಿಗೆ ಅರ್ಹತೆಯಲ್ಲಿ ಮೂಲ ವೇತನದ ಮಿತಿ ಮಾಸಿಕ 15,000 ರೂ. ಇದೆ. ಇದಕ್ಕಿಂತಲೂ ಹೆಚ್ಚು ಮೂಲ ವೇತನ ಇರುವವರು ಹೆಚ್ಚಿನ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಪಿಂಚಣಿ ಬೇಕಿದ್ದರೆ ಏನು ಮಾಡಬೇಕಾಗುತ್ತದೆ?

ನಿಮಗೆ ಇಪಿಎಫ್‌ಒ ಅಡಿಯಲ್ಲಿ ಹೆಚ್ಚು ಪಿಂಚಣಿ ಸಿಗಬೇಕಿದ್ದರೆ, ನಿಮ್ಮ ಇಪಿಎಫ್‌ ಖಾತೆಯಿಂದ ಇಪಿಎಸ್‌ ಖಾತೆಗೆ ಹೆಚ್ಚು ಹಣ ವರ್ಗಾವಣೆ ಆಗಬೇಕಾಗುತ್ತದೆ.

ಪ್ರಸ್ತುತ ಉದ್ಯೋಗಿಗಳು ಮತ್ತು ಉದ್ಯೋಗದಾತರು ಉದ್ಯೋಗಿಗಳ ಮೂಲವೇತನ, ತುಟ್ಟಿಭತ್ಯೆಯ 12%ರಷ್ಟನ್ನು ಇಪಿಎಫ್‌ಗೆ ಸಲ್ಲಿಸಲಾಗುತ್ತದೆ. ಉದ್ಯೋಗಿಗಳ 12% ದೇಣಿಗೆ ಪೂರ್ಣವಾಗಿ ಇಪಿಎಫ್‌ಗೆ ಸಂದಾಯವಾಗುತ್ತದೆ. ಉದ್ಯೋಗಿಗಳ 12% ಪಾಲಿನಲ್ಲಿ 3.67% ಇಪಿಎಫ್‌ಗೆ ಹೋಗುತ್ತದೆ. ಉಳಿದ 8.33% ಇಪಿಎಸ್‌ಗೆ ಹೋಗುತ್ತದೆ. ಸರ್ಕಾರ ಉದ್ಯೋಗಿಯ ಪಿಂಚಣಿಗೆ 1.6% ನೀಡುತ್ತದೆ. ಆದರೆ ಇದೀಗ ಉದ್ಯೋಗಿಗಳೂ ಇಪಿಎಸ್‌ಗೆ ಹೆಚ್ಚುವರಿ ದೇಣಿಗೆ ನೀಡುವ ಮೂಲಕ ಹೆಚ್ಚಿನ ಪಿಂಚಣಿ ಪಡೆಯಲು ಅವಕಾಶ ಸೃಷ್ಟಿಯಾಗಿದೆ.

Exit mobile version