ನವ ದೆಹಲಿ: ಸರ್ಕಾರ ಲಕ್ಸುರಿ ಮತ್ತು ಹಾನಿಕಾರಕ ಉತ್ಪನ್ನಗಳ ಮೇಲೆ ೨೮% ಜಿಎಸ್‌ಟಿ ದರವನ್ನು ಮುಂದುವರಿಸುವ ಉದ್ದೇಶವನ್ನು ಹೊಂದಿದೆ. ಆದರೆ ೫,೧೨ ಮತ್ತು ೧೮%ರ ಶ್ರೇಣಿಗಳನ್ನು ಎರಡಕ್ಕೆ ಇಳಿಸುವ ಸಾಧ್ಯತೆ ಇದೆ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಸೋಮವಾರ ತಿಳಿಸಿದ್ದಾರೆ.
ಉದ್ದಿಮೆ ವಲಯದ ಮಂಡಳಿ ಅಸೊಚೆಮ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಕಂದಾಯ ನಷ್ಟದ ಭೀತಿ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಕ್ಕಿದೆ. ಹೀಗಾಗಿ ಇದಕ್ಕಾಗಿ ನಾವು ಕೆಲ ಕಾಲ ಕಾಯಬೇಕಾಗಿದೆ ಎಂದರು. ಜಿಎಸ್‌ಟಿ ಅಡಿಯಲ್ಲಿ ತೆರಿಗೆ ದರದ ರೆವೆನ್ಯೂ ನ್ಯೂಟ್ರಲ್ ಮಟ್ಟವನ್ನು ೧೫.೫%ಕ್ಕಿಂತ ಮೇಲಕ್ಕೆ ಏರಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿದರು.
ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಆರ್ಥಿಕ ಅಸಮಾನತೆ ಇರುವ ಎಕಾನಮಿಯಲ್ಲಿ ಲಕ್ಸುರಿ ಮತ್ತು ಹಾನಿಕಾರಕ ಉತ್ಪನ್ನಗಳ ಮೇಲೆ ೨೮% ಜಿಎಸ್‌ಟಿ ದರ ವಿಧಿಸಬೇಕಾದ ಅನಿವಾರ್ಯತೆ ಇದೆ. ಆದರೆ ೫,೧೨ ಮತ್ತು ೧೮% ಎಂಬ ಮೂರು ತೆರಿಗೆಯ ಶ್ರೇಣಿಯನ್ನು ಎರಡಕ್ಕೆ ಇಳಿಸಲು ಸಾಧ್ಯವಿದೆ ಎಂದು ವಿವರಿಸಿದರು.