ಮುಂಬಯಿ: ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ (Hindenburg Research) ತನ್ನ ವಿರುದ್ಧ ಮಾಡಿರುವ 88 ಆರೋಪಗಳಿಗೆ ಅದಾನಿ ಗ್ರೂಪ್, (Adani Group) 413 ಪುಟಗಳ ಸುದೀರ್ಘ ಪ್ರತಿಕ್ರಿಯೆಯನ್ನು ಭಾನುವಾರ ಬಿಡುಗಡೆಗೊಳಿಸಿದೆ. ಇದು ಭಾರತದ ಮೇಲಿನ ಪೂರ್ವನಿಯೋಜಿತ ದಾಳಿ ಎಂದು ತೀವ್ರವಾಗಿ ಖಂಡಿಸಿದೆ. ಹಿಂಡೆನ್‌ಬರ್ಗ್ ಆರೋಪಗಳು ಸುಳ್ಳಿನ ಕಂತೆ ಬಿಟ್ಟರೆ ಬೇರೇನೂ ಅಲ್ಲ ಎಂದು ಅದಾನಿ ಸಮೂಹ 413 ಪುಟಗಳ ಪ್ರತಿಕ್ರಿಯೆಯಲ್ಲಿ ಪ್ರತಿಕ್ರಿಯಿಸಿದೆ. ಹಿಂಡೆನ್ ಬರ್ಗ್ ತನಗೆ ಆರ್ಥಿಕವಾಗಿ ಲಾಭ ಮಾಡಿಕೊಳ್ಳಲು ಈ ಕೃತ್ಯವೆಸಗಿದೆ.
ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ತನ್ನ ದುರ್ಲಾಭ, ಸ್ವಾರ್ಥಕ್ಕೆ ಮಾಡಿರುವ ಆರೋಪ: ಅದಾನಿ
ಹಿಂಡೆನ್‌ಬರ್ಗ್ ಜನವರಿ 24ರಂದು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅದಾನಿ ಗ್ರೂಪ್, ಇದು ಕೇವಲ ಭಾರತೀಯ ಕಂಪನಿಯೊಂದರ ಮೇಲಿನ ದಾಳಿಯಲ್ಲ, ದೇಶದ ಸ್ವಾತಂತ್ರ್ಯ, ಸಮಗ್ರತೆ, ಸಂಸ್ಥೆಗಳ ಗುಣಮಟ್ಟ, ಬೆಳವಣಿಗೆ ಮತ್ತು ಮಹತ್ತ್ವಾಕಾಂಕ್ಷೆಗಳಿಗೆ ವಿರುದ್ಧ ನಡೆದ ದಾಳಿ ಎಂದು ಅದಾನಿ ಗ್ರೂಪ್ ಹೇಳಿದೆ. ಶಾರ್ಟ್ ಸೆಲ್ಲರ್ ಆಗಿರುವ ಹಿಂಡೆನ್‌ಬರ್ಗ್ ಮಾರುಕಟ್ಟೆಯಲ್ಲಿ ಸುಳ್ಳಿನ ಕಂತೆಗಳನ್ನು ಹರಡಿ ದುರ್ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಇಂಥ ಕೆಲಸ ಮಾಡಿದೆ. ಆದರೆ ಇದರಿಂದ ಲೆಕ್ಕಕ್ಕೆ ಸಿಗದಷ್ಟು ಹೂಡಿಕೆದಾರರು ಬೆಲೆ ತೆರುವಂತಾಗಿದೆ ಎಂದು ಅದಾನಿ ಗ್ರೂಪ್ ಹೇಳಿದೆ.
ಆರೋಪ ಮಾಡಿರುವ ಕಾಲವನ್ನು ಪ್ರಶ್ನಿಸಿದ ಅದಾನಿ ಗ್ರೂಪ್:
ಅದಾನಿ ಎಂಟರ್‌ಪ್ರೈಸಸ್ ತನ್ನ ಎಫ್‌ಪಿಒ (ಮುಂದುವರಿದ ಷೇರು ಬಿಡುಗಡೆ) ಮಾಡುವ ಸಂದರ್ಭವನ್ನೇ ಕಾದು ನೋಡಿಕೊಂಡು ಹಿಂಡೆನ್ ಬರ್ಗ್ ತನ್ನ ಕಪೋಲಕಲ್ಪಿತ ವರದಿಯನ್ನು ಬಿಡುಗಡೆಗೊಳಿಸಿದೆ. ಇದುವೇ ದೊಡ್ಡ ಷಡ್ಯಂತ್ರವನ್ನು ಬಿಂಬಿಸಿದೆ. ಇದರೊಂದಿಗೆ ಹಿಂಡೆನ್‌ಬರ್ಗ್ ಸೆಕ್ಯುರಿಟೀಸ್ ಮತ್ತು ವಿದೇಶಿ ವಿನಿಮಯ ಕಾನೂನುಗಳನ್ನು ಉಲ್ಲಂಘಿಸಿದೆ. ಅದರ ವರದಿ ಯಾವುದೇ ಸ್ವತಂತ್ರ ವರದಿಯೂ ಅಲ್ಲ, ಆಳವಾಗಿ ಸಂಶೋಧನೆ ನಡೆಸಿ ಮಾಡಿದ್ದೂ ಅಲ್ಲ ಎಂದು ಅದಾನಿ ಗ್ರೂಪ್ ತರಾಟೆಗೆ ತೆಗೆದುಕೊಂಡಿದೆ.
ಹಿಂಡೆನ್‌ಬರ್ಗ್ ಮುಂದಿಟ್ಟಿರುವ 88 ಪ್ರಶ್ನೆಗಳ ಪೈಕಿ 65 ಪ್ರಶ್ನೆಗಳು ಅದಾನಿ ಸಮೂಹದ ಅಧೀನ ಕಂಪನಿಗಳಿಗೆ ಸೇರಿದ್ದು, ಜಂಟಿಯಾಗಿ ಉತ್ತರಿಸಲಾಗಿದೆ. ಉಳಿದ 23 ಪ್ರಶ್ನೆಗಳ ಪೈಕಿ 18 ಪ್ರಶ್ನೆಗಳು ಸಾರ್ವಜನಿಕ ಷೇರುದಾರರಿಗೆ ಸಂಬಂಧಿಸಿವೆ. ಉಳಿದ 5 ಪ್ರಶ್ನೆಗಳು ನಿರಾಧಾರವಾಗಿವೆ ಎಂದು ತಿಳಿಸಿದೆ.