ಮುಂಬಯಿ: ಹಿಂಡೆನ್ ಬರ್ಗ್ ವರದಿಯ ಬಳಿಕ ಅದಾನಿ ಸಮೂಹದ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯದಲ್ಲಿ 100 ಶತಕೋಟಿ ಡಾಲರ್ ( ಅಂದಾಜು 8.20 ಲಕ್ಷ ಕೋಟಿ ರೂ.) ನಷ್ಟವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಜೀವ ವಿಮಾ ನಿಗಮವು (Life Insurance Corporation) ಬೇರೆ ಕಂಪನಿಗಳಲ್ಲಿ (Adani stocks) ತನ್ನ ಈಕ್ವಿಟಿ ಮತ್ತು ಡೆಟ್ ಹೂಡಿಕೆಗಳ ಮೇಲೆ ಮಿತಿ ವಿಧಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಅದಾನಿ ಕಂಪನಿಯ ಷೇರುಗಳಲ್ಲಿ ಎಲ್‌ಐಸಿಯ ಹೂಡಿಕೆ ಇತ್ತೀಚೆಗೆ ಟೀಕೆಗೆ ಗುರಿಯಾಗಿತ್ತು. ಅದಾನಿ ಕಂಪನಿಗಳ ಷೇರು ದರಗಳು ಋಣಾತ್ಮಕವಾಗಿ ಇಳಿದಿರುವುದು ಇದಕ್ಕೆ ಕಾರಣ. ಇತ್ತೀಚೆಗೆ ಅದಾನಿ ಷೇರುಗಳ ದರ ಚೇರಿಸಿದ್ದರೂ, ಭವಿಷ್ಯದ ಮುನ್ನೆಚ್ಚರಿಕೆಯಾಗಿ ಮಿತಿಯನ್ನು ವಿಧಿಸಲು ಕಂಪನಿ ನಿರ್ಧರಿಸಿದೆ ಎಂದು ವರದಿಯಾಗಿದೆ.
ಎಲ್‌ಐಸಿಯು ದೇಶದ ಅತಿ ದೊಡ್ಡ ಸಾಂಸ್ಥಿಕ ಹೂಡಿಕೆದಾರ ಆಗಿದ್ದು, 539 ಶತಕೋಟಿ ಡಾಲರ್ (ಅಂದಾಜು 44 ಲಕ್ಷ ಕೋಟಿ ರೂ.) ಆಸ್ತಿಯನ್ನು ನಿರ್ವಹಿಸುತ್ತದೆ. 2023ರ ಜನವರಿ 31ಕ್ಕೆ ಎಲ್‌ಐಸಿಯು ಷೇರು, ಸಾಲಪತ್ರಗಳಲ್ಲಿ 36,474 ಕೋಟಿ ರೂ. ಹೂಡಿಕೆ ಮಾಡಿದೆ.