ಬೆಂಗಳೂರು: ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ (Karnataka Bank) ತನ್ನ ಶತಮಾನೋತ್ಸವವನ್ನು ಗ್ರಾಹಕರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ವಿಶೇಷ ಗೃಹ ಸಾಲ ಅಭಿಯಾನವನ್ನು ಏಪ್ರಿಲ್ 17ರಿಂದ ಜುಲೈ 17ರ ತನಕ ” ಕೆಬಿಎಲ್ ಸೆಂಟಿನರಿ ಮಹೋತ್ಸವʼ ಮೂಲಕ ಹಮ್ಮಿಕೊಂಡಿದೆ. ದೇಶಾದ್ಯಂತ ಬ್ಯಾಂಕಿನ ಎಲ್ಲ 901 ಶಾಖೆಗಳಲ್ಲಿ ಈ ಅಭಿಯಾನದ ಕೊಡುಗೆಯನ್ನು ಗ್ರಾಹಕರು ಪಡೆಯಬಹುದು.
ಕರ್ಣಾಟಕ ಬ್ಯಾಂಕ್ ಗೃಹ ಸಾಲ ವಿತರಣೆಗೆ ಡಿಜಿಟಲ್ ಲೋನ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ಗ್ರಾಹಕರು ತಾವು ಇದ್ದ ಸ್ಥಳದಲ್ಲಿಯೇ ಡಿಜಿಟಲ್ ಪ್ಲಾಟ್ ಫಾರ್ಮ್‌ಗಳ ಮೂಲಕ ಈ ಸಾಲ ಸೌಲಭ್ಯಗಳನ್ನು ಪಡೆಯಬಹುದು. ಈ ಅವಧಿಯಲ್ಲಿ ಗೃಹ ಸಾಲಗಳು 8.75%ರಿಂದ ಆರಂಭವಾಗುವ ಆಕರ್ಷಕ ಬಡ್ಡಿ ದರಗಳಲ್ಲಿ ದೊರೆಯಲಿದೆ. ಸಂಸ್ಕರಣಾ ಶುಲ್ಕಗಳು ಇರುವುದಿಲ್ಲ. ಇತರ ಶುಲ್ಕಗಳಲ್ಲೂ ರಿಯಾಯಿತಿ ಸಿಗುತ್ತವೆ.
ಈ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬ್ಯಾಂಕ್‌ನ ಹಂಗಾಮಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಶೇಖರ್ ರಾವ್, ಬ್ಯಾಂಕಿನ ಶತಮಾನೋತ್ಸವ ವರ್ಷದಲ್ಲಿ ಈ ಅಭಿಯಾನದ ಮೂಲಕ ವಿಶೇಷ ಗೃಹಸಾಲ ಸೌಲಭ್ಯಗಳನ್ನು ಗ್ರಾಹಕರಿಗೆ ಪರಿಚಯಿಸಲು ಸಂತೋಷ ಎನಿಸುತ್ತದೆ. ಡಿಜಿಟಲ್ ಪ್ರಕ್ರಿಯೆಗಳ ಮೂಲಕ ಸಾಲಗಳಿಗೆ ಕ್ಷಿಪ್ರ ಮಂಜೂರಾತಿ ಸಿಗಲಿದೆ. ” ನಿಮ್ಮ ಕುಟುಂಬದ ಬ್ಯಾಂಕ್ ದೇಶಾದ್ಯಂತʼ ಎಂಬ ಧ್ಯೇಯದಂತೆ ಬ್ಯಾಂಕ್ ಗ್ರಾಹಕರ ಅಗತ್ಯಗಳನ್ನು ಪೂರೈಸಲಿದೆ ಎಂದು ಹೇಳಿದರು.