ಹಾಂಕಾಂಗ್: ಹಾಂಕಾಂಗ್‌ನ ಪ್ರಸಿದ್ಧ ತೇಲುವ ಅತಿ ದೊಡ್ಡ ರೆಸ್ಟೊರೆಂಟ್ ಸಮುದ್ರದಲ್ಲಿ ಮುಳುಗಿದೆ. ಜಂಬೊ ಕಿಂಗ್‌ಡಮ್ ಎಂಬ ಹೆಸರಿನ ಮೂರು ಅಂತಸ್ತುಗಳ ರೆಸ್ಟೊರೆಂಟ್ ಇದಾಗಿತ್ತು. ಕಳೆದ ೪೬ ವರ್ಷಗಳಿಂದ ಇದು ಅಸ್ತಿತ್ವದಲ್ಲಿತ್ತು.
ಹಾಂಕಾಂಗ್ ನಗರದಿಂದ ಪಯಣ ಆರಂಭಿಸಿದ ತೇಲುವ ರೆಸ್ಟೊರೆಂಟ್ ಒಂದೇ ವಾರದಲ್ಲಿ ದಕ್ಷಿಣ ಚೀನಾ ಸಾಗರದಲ್ಲಿ ಮುಳುಗಿದೆ. ಪ್ರತಿಕೂಲ ಹವಾಮಾನ ಇದಕ್ಕೆ ಕಾರಣ ಎನ್ನಲಾಗಿದೆ. ಕ್ಷಿಶಾ ದ್ವೀಪಸ್ತೋಮವನ್ನು ದಾಟಿ ಹೋಗುತ್ತಿದ್ದ ತೇಲುವ ರೆಸ್ಟೊರೆಂಟ್ ಬಳಿಕ ಸಂಭವಿಸಿದ ಅವಘಡದಲ್ಲಿ ಮುಳುಗಿದೆ. ಈ ಅನಾಹುತದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಆದರೆ ನೌಕೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಈ ಜಂಬೊ ರೆಸ್ಟೊರೆಂಟ್ ೮೦ ಮೀಟರ್ ಉದ್ದ ಇತ್ತು. ಕಳೆದ ನಲುವತ್ತಾರು ವರ್ಷಗಳಿಂದ ಲಕ್ಷಾಂತರ ಅತಿಥಿಗಳಿಗೆ ಸೇವೆ ಸಲ್ಲಿಸಿತ್ತು. ಕೋವಿಡ್ ಸಾಂಂಕ್ರಾಮಿಕದ ಹಿನ್ನೆಲೆಯಲ್ಲಿ ೨೦೨೦ರಲ್ಲಿ ಇದನ್ನು ಮುಚ್ಚಲಾಗಿತ್ತು. ಎಲ್ಲ ಸಿಬ್ಬಂದಿಯನ್ನು ವಜಾಗೊಳಿಸಲಾಗಿತ್ತು. ಈ ರೆಸ್ಟೊರೆಂಟ್ ಅದರ ಷೇರುದಾರರಿಗೆ ಹೊರೆಯಾಗಿ ಪರಿಣಮಿಸಿತ್ತು. ರೆಸ್ಟೊರೆಂಟ್ ಅನ್ನು ಚೀನಾದಲ್ಲಿ ನವೀಕರಿಸಿ, ಕಡಿಮೆ ಖರ್ಚಿನಲ್ಲಿ ನಿರ್ವಹಿಸಲು ಅನುಕೂಲವಾಗುವಂತೆ ಬೇರೆಡೆಗೆ ಸ್ಥಳಾಂತರಿಸಲು ಯತ್ನಿಸುತ್ತಿದ್ದ ಸಂದರ್ಭ ಮುಳುಗಿದೆ.
ತೇಲುವ ರೆಸ್ಟೊರೆಂಟ್ ೧,೦೦೦ ಮೀಟರ್‌ಗೂ ಹೆಚ್ಚು (೩,೨೮೦ ಅಡಿ) ಆಳಕ್ಕೆ ಮುಳುಗಿದ ಪರಿಣಾಮ ಉಳಿಸಲು ಸಾಧ್ಯವಾಗಲಿಲ್ಲ ಎಂದು ರೆಸ್ಟೊರೆಂಟ್‌ನ ಮಾತೃಸಂಸ್ಥೆ ತಿಳಿಸಿದೆ.
ಇಂಪೀರಿಯಲ್ ಶೈಲಿಯ ಮುಂಭಾಗ, ಧಾರಾಳ ನಿಯಾನ್ ದೀಪಗಳು, ವರ್ಣಮಯ ಚಿತ್ತಾರಗಳ ಕಲಾಕೃತಿಗಳು, ಚೀನೀಯರ ಕಲಾತ್ಮಕತೆಯನ್ನು ಇದು ಒಳಗೊಂಡಿತ್ತು. ಆಹಾರ-ವಿಹಾರಗಳಿಗೆ ಫೇಮಸ್ ಆಗಿತ್ತು. ಆದರೆ ಹಾಂಕಾಂಗ್‌ನಲ್ಲಿ ಮೀನುಗಾರಿಕೆ ವ್ಯವಹಾರ ಕಡಿಮೆಯಾದ ಬಳಿಕ ಈ ತೇಲುವ ರೆಸ್ಟೊರೆಂಟ್ ಜನಪ್ರಿಯತೆ ಕಳೆದುಕೊಂಡಿತ್ತು.