Site icon Vistara News

Money Guide: ಜಾಗತಿಕ ಷೇರು ಮಾರುಕಟ್ಟೆ ಎತ್ತ ಸಾಗುತ್ತಿದೆ, ಭಾರತದ ಷೇರು ಪೇಟೆ ಹೇಗಿದೆ?

stock invest

ವಿಶ್ವಾದ್ಯಂತ ಸೆಂಟ್ರಲ್‌ ಬ್ಯಾಂಕ್‌ಗಳು ಬೆಲೆ ಏರಿಕೆಯನ್ನು ತಗ್ಗಿಸುವ ಉದ್ದೇಶದಿಂದ, ಬಡ್ಡಿ ದರಗಳನ್ನು ಹೆಚ್ಚಿಸಿದ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸಂಭವಿಸಿದೆ. ನಿಲ್ಲದ ರಷ್ಯಾ-ಉಕ್ರೇನ್‌ ಬಿಕ್ಕಟ್ಟು, ಚೀನಾದಲ್ಲಿ ಬೇಡಿಕೆಯ ಮಂದಗತಿ, ಜಾಗತಿಕ ಹಣದುಬ್ಬರ ಈಕ್ವಿಟಿ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ. ಭಾರತೀಯ ಷೇರು ಪೇಟೆಯಲ್ಲೂ, ಕಳೆದ ಕೆಲ ವಾರಗಳಿಂದ ಭಾರಿ ಷೇರು ಮಾರಾಟ ಭರಾಟೆಯನ್ನು ಕಾಣಬಹುದು.

ನಿಫ್ಟಿ ಈ ವರ್ಷ ಶೇ. 8.9 ನಷ್ಟಕ್ಕೀಡಾಗಿದೆ. ನಿಫ್ಟಿ ಮಿಡ್‌ ಕ್ಯಾಪ್‌-100 ಸೂಚ್ಯಂಕ ಈ ವರ್ಷ ಶೇ.10.4 ಕುಸಿದಿದೆ. ನಿಫ್ಟಿ ಸ್ಮಾಲ್‌ ಕ್ಯಾಪ್‌ 100 ಸೂಚ್ಯಂಕ ಶೇ.21 ಕುಸಿದಿದೆ. ಬಿಎಸ್‌ಇಯ 4,000 ಷೇರುಗಳ ಪೈಕಿ ಶೇ.64ರಷ್ಟು ಷೇರುಗಳು ನಷ್ಟಕ್ಕೀಡಾಗಿವೆ.

ಚೋಳಮಂಡಳಮ್‌ ಸೆಕ್ಯುರಿಟೀಸ್‌ನ ಇತ್ತೀಚಿನ ವರದಿಯ ಪ್ರಕಾರ, ಹೂಡಿಕೆದಾರರು ಎಚ್ಚರದಿಂದ ಮುನ್ನಡೆಯುವುದು ಸೂಕ್ತ. ದೇಶೀಯ ಹಾಗೂ ಬಾಹ್ಯ ವಿದ್ಯಮಾನಗಳು ಷೇರು ಪೇಟೆಯ ಮೇಲೆ ಬೀರುವ ಪ್ರಭಾವ ಮತ್ತು ಪರಿಣಾಮವನ್ನು ಸದ್ಯ ಗ್ರಹಿಸುವುದು ಕಷ್ಟ. ಮುಂದಿನ ಎರಡು ವರ್ಷ ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿರಬಹುದು ಎಂದು ಐಎಂಎಫ್‌ ತಿಳಿಸಿದೆ. ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಶೇ.5.7 ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೇ.8.7ರ ಹಣದುಬ್ಬರ ಇರಬಹುದು ಎಂದು ಅಂದಾಜಿಸಲಾಗಿದೆ.
ಉದಯೋನ್ಮುಖ ಮಾರುಕಟ್ಟೆಗಳಾದ ಬ್ರೆಜಿಲ್‌, ಮೆಕ್ಸಿಕೊ, ಇಂಡೊನೇಷ್ಯಾ, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾದಲ್ಲಿ 10 ವರ್ಷಗಳ ಬಾಂಡ್‌ನ ಆದಾಯದಲ್ಲಿ ಶೇ.0.80 ಏರಿಕೆಯಾಗಿದ್ದು, ಹಣದುಬ್ಬರದ ಏರುಗತಿಯನ್ನು ಬಿಂಬಿಸಿದೆ. ಭಾರತದ ಷೇರುಪೇಟೆ ಮೇಲೆ ಪ್ರಭಾವ ಬೀರಿದ ಅಂಶಗಳನ್ನು ನೋಡೋಣ.

ವಿದೇಶಿ ಹೂಡಿಕೆಯ ಹೊರ ಹರಿವು
ಆರ್‌ಬಿಐ ರೆಪೊ ದರವನ್ನು ಏರಿಸಿದ ಬಳಿಕ ದೇಶಿ ಮಾರುಕಟ್ಟೆಯಲ್ಲಿ 10 ವರ್ಷಗಳ ಅವಧಿಯ ಬಾಂಡ್‌ನ ಆದಾಯದಲ್ಲಿ ಕಳೆದ ಮೂರು ವರ್ಷಗಳಲ್ಲೇ ಏರಿಕೆ ಉಂಟಾಗಿದೆ. 10 ವರ್ಷ ಅವಧಿಯ ಅಮೆರಿಕದ ಬಾಂಡ್‌ನ ಆದಾಯ ಕೂಡ ಶೇ.2.9ಕ್ಕೆ ಏರಿಕೆಯಾಗಿದೆ. ಇದು ವಿದೇಶಿ ಹೂಡಿಕೆದಾರಿಗೆ ಅಮೆರಿಕದ ಮಾರುಕಟ್ಟೆಯನ್ನು ಆಕರ್ಷಕವಾಗಿಸಿದೆ. ಕಳೆದ ಏಳು ತಿಂಗಳಿನಿಂದ ವಿದೇಶಿ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಕೋಟಕ್‌ ಸೆಕ್ಯುರಿಟೀಸ್‌ ಪ್ರಕಾರ 2022ರ ಮೊದಲ ನಾಲ್ಕು ತಿಂಗಳಿನಲ್ಲಿ 1.3 ಲಕ್ಷ ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.


ಬೆಲೆ ಏರಿಕೆಯ ಎಫೆಕ್ಟ್‌
ಉತ್ಪಾದನಾ ವಲಯದಲ್ಲಿ ಬಳಕೆಯಾಗುವ ಸರಕುಗಳ ಬೆಲೆಗಳು ಗಗನಕ್ಕೇರಿವೆ. ವಿಶ್ವ ಬ್ಯಾಂಕ್‌ ವರದಿಯ ಪ್ರಕಾರ, ರಷ್ಯಾ-ಉಕ್ರೇನ್‌ ಸಮರದ ಪರಿಣಾಮ ೨೦೨೨ರಲ್ಲಿ ಇಂಧನಯೇತರ ವಸ್ತುಗಳ ದರದಲ್ಲಿ ಶೇ.20 ಏರಿಕೆಯಾಗಲಿದೆ. ರಷ್ಯಾ ಮತ್ತು ಉಕ್ರೇನ್‌ನ ರಫ್ತುದಾರರು ನಿರ್ಣಾಯಕ ಪಾತ್ರ ವಹಿಸುವ ಸರಕುಗಳ ದರಗಳಿ ಏರಿಕೆಯಾಗಲಿದೆ. 2022ರಲ್ಲಿ ಕಚ್ಚಾ ತೈಲ ದರ ಸರಾಸರಿ 100 ಡಾಲರ್‌ನಲ್ಲಿ ಇರುವ ಅಂದಾಜಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.40ರಷ್ಟು ಹೆಚ್ಚಳವಾಗಿದೆ. ಸದ್ಯಕ್ಕೆ 113ಡಾಲರ್‌ಗೆ ಜಿಗಿದಿದೆ. ನೈಸರ್ಗಿಕ ಅನಿಲ, ತಾಮ್ರ, ಸತು ಮತ್ತು ಇತರ ಲೋಹಗಳ ದರ ಶೇ.40 ಹೆಚ್ಚಳವಾಗಿದೆ. ಭಾರತದ ಸಗಟು ಗಣದುಬ್ಬರ ಏಪ್ರಿಲ್‌ ನಲ್ಲಿ ದಾಖಲೆಯ ಶೇ.15.08ಕ್ಕೆ ಏರಿದೆ.

ಹೀಗಾಗಿ ಕಂಪನಿಗಳಿಗೆ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವಾಗಿದ್ದು, ಲಾಭಾಂಶಕ್ಕೆ ಹೊಡೆತ ಬಿದ್ದಿದೆ. ಬೇಡಿಕೆ ಕುಸಿಯುವ ಆತಂಕದಿಂದ ಎಲ್ಲ ಕಂಪನಿಗಳಿಗೆ ಉತ್ಪಾದನಾ ವೆಚ್ಚದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ. ಉತ್ಪಾದನಾ ವೆಚ್ಚ ಏರಿಕೆಯಿಂದ ಆಟೊಮೊಬೈಲ್‌, ಸಿಮೆಂಟ್‌, ರಾಸಾಯನಿಕ, ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ತಯಾರಿಕಾ ವೆಚ್ಚ ಏರಿಕೆಯಾಗಿದೆ. ಮತ್ತೊಂದು ಕಡೆ ಇಂಧನ ದರ ಹೆಚ್ಚಳದ ಪರಿಣಾಮ ವಿದ್ಯುತ್‌, ಪೆಟ್ರೊಕೆಮಿಕಲ್ಸ್‌, ಅನಿಲ ವಿತರಣೆ ತುಟ್ಟಿಯಾಗಿದೆ.ಯೂರಿಯಾ ಉತ್ಪಾದನೆಗೆ ನೈಸರ್ಗಿಕ ಅನಿಲ ಬಳಕೆಯಾಗುವುದರದಿಂದ ದುಬಾರಿಯಾಗಿದೆ. ಹೀಗಿದ್ದರೂ ಸರಕಾರ ಸಬ್ಸಿಡಿ ಕೊಟ್ಟು ರಸಗೊಬ್ಬರ ಕ್ಷೇತ್ರವನ್ನು ರಕ್ಷಿಸಿದೆ.


ಕೈಗಾರಿಕಾ ಉತ್ಪಾದನೆ ಇಳಿಮುಖ
ಬೆಲೆ ಏರಿಕೆಯ ಪರಿಣಾಮ 2022 ರ ಮಾರ್ಚ್‌ ನಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳು ಹಾಗೂ ದಿನ ಬಳಕೆಯ ಸಾಮಾನ್ಯ ವಸ್ತುಗಳ ಬೇಡಿಕೆ ಇಳಿಕೆಯಾಗಿದೆ. ಬಡ್ಡಿ ದರ ಏರಿಕೆಯಿಂದ ಕೈಗಾರಿಕಾ ಉತ್ಪಾದನೆ ಮತ್ತಷ್ಟು ಸಂಕೀರ್ಣವಾಗಲಿದೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು. ಇದು ತಕ್ಷಣದ ಚೇತರಿಕೆಗೆ ತಡೆಯೊಡ್ಡಲಿದೆ. ಕಾರ್ಪೊರೇಟ್‌ ಲಾಭ ಮತ್ತು ಬಳಕೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದೆ. ವಾಣಿಜ್ಯ ಸಚಿವಾಲಯದ ಪ್ರಕಾರ, ಭಾರತದ ಪ್ರಮುಖ ವಲಯಗಳ ಬೆಳವಣಿಗೆ ಫೆಬ್ರವರಿ-ಮಾರ್ಚ್‌ ಅವಧಿಯಲ್ಲಿ ಶೇ.6ರಿಂದ ಶೇ.4.3ಕ್ಕೆ ಇಳಿದಿದೆ. ಕಾರ್ಮಿಕ ಬಲದ ಚಟುವಟಿಕೆ ಕ್ಷೀಣಿಸಿದ್ದು, ಹೆಚ್ಚುತ್ತಿರುವ ನಿರುದ್ಯೋಗವನ್ನು ಬಿಂಬಿಸಿದೆ. ಈ ಎಲ್ಲ ಅಂಶಗಳನ್ನು ಅರಿತುಕೊಂಡು ಷೇರು ಮಾರುಕಟ್ಟೆಯಲ್ಲಿ ಜಾಣ್ಮೆಯಿಂದ ಹೂಡಿಕೆ ಮಾಡಬೇಕು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Money Guide: ಶೇ.7.79ಕ್ಕೆ ಜಿಗಿದ ಹಣದುಬ್ಬರ, ಉಳಿತಾಯ ಖಾತೆಗೆ ಸಾಲದು ಬಡ್ಡಿದರ

Exit mobile version