ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರೆಪೊ ದರವನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲಗಳ ಬಡ್ಡಿ ದರಗಳಲ್ಲಿ ಏರಿಕೆಯಾಗಲಿದೆ. (RBI Interest rate hike) ಈ ಕುರಿತ ವಿವರ ಇಂತಿದೆ.
ಆರ್‌ಬಿಐ ರೆಪೊ ದರವನ್ನು 0.50% ಹೆಚ್ಚಿಸಿದ್ದು, 5.90%ಕ್ಕೆ ಏರಿಕೆಯಾಗಿದೆ. ಇದರ ಪರಿಣಾಮ ರೆಪೊ ದರ ಆಧಾರಿತ ಎಲ್ಲ ಸಾಲಗಳ ಮೇಲೂ ಆಗಲಿದೆ. ಸಾಮಾನ್ಯವಾಗಿ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಿಸುವ ವೇಳೆ ಇಎಂಐ ಬದಲಿಗೆ, ಇಎಂಐ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಆರ್‌ಬಿಐ ತನ್ನ ರೆಪೊ ದರ ಹೆಚ್ಚಿಸಿರುವ ಪರಿಣಾಮ ನಾನಾ ಬಗೆಯ ಸಾಲಗಳು ದುಬಾರಿಯಾಗಲಿದೆ.
30 ಲಕ್ಷ ರೂ. ಗೃಹ ಸಾಲದ ಇಎಂಐನಲ್ಲಿ 957 ರೂ. ಏರಿಕೆ
ಉದಾಹರಣೆಗೆ ಒಬ್ಬ ವ್ಯಕ್ತಿ 30 ಲಕ್ಷ ರೂ. ಗೃಹ ಸಾಲ ಹೊಂದಿದ್ದು, 20 ವರ್ಷಗಳ ಅವಧಿಗೆ, ವಾರ್ಷಿಕ 8.5% ಬಡ್ಡಿ ದರವೂ ಇದ್ದರೆ, ಇಎಂಐನಲ್ಲಿ 957 ರೂ. ಹೆಚ್ಚಳವಾಗಲಿದೆ. ಅಂದರೆ ಇಎಂಐ 26,035 ರೂ.ಗಳಿಂದ 26,992 ರೂ.ಗೆ ಏರಿಕೆಯಾಗಲಿದೆ.
ವಾಹನ ಸಾಲ: ನೀವು 7 ವರ್ಷಗಳ ಅವಧಿಗೆ 8 ಲಕ್ಷ ರೂ. ವಾಹನ ಸಾಲವನ್ನು ಹೊಂದಿದ್ದರೆ, ಬಡ್ಡಿ ದರ 11.00% ಇದ್ದರೆ, ಅದು ಈಗ 11.5%ಕ್ಕೆ ಏರಿಕೆಯಾಗಲಿದೆ. ಇಎಂಐನಲ್ಲಿ 211 ರೂ. ಹೆಚ್ಚಳವಾಗಲಿದೆ. ಅಂದರೆ 13,698 ರೂ.ಗಳಿಂದ 13,909 ರೂ.ಗೆ ಇಎಂಐ ಹೆಚ್ಚಳವಾಗಲಿದೆ.
ವೈಯಕ್ತಿಕ ಸಾಲ: ಒಬ್ಬ ವ್ಯಕ್ತಿ 5 ವರ್ಷಗಳ ಅವಧಿಗೆ 5 ಲಕ್ಷ ರೂ. ವೈಯಕ್ತಿಕ ಸಾಲ ತೆಗೆದುಕೊಂಡಿದ್ದರೆ, ಬಡ್ಡಿ ದರ 15% ಇದ್ದರೆ 15.5%ಕ್ಕೆ ಹೆಚ್ಚಳವಾಗಲಿದೆ. ಇಎಂಐನಲ್ಲಿ 132 ರೂ. ಏರಿಕೆಯಾಗಲಿದೆ. ಅಂದರೆ 11,895 ರೂ.ಗಳಿಂದ 12,027 ರೂ.ಗೆ ಏರಿಕೆಯಾಗಲಿದೆ.
ಇದನ್ನೂ ಓದಿ : RBI Interest rate hike | ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಡ್ಡಿ ದರದಲ್ಲಿ 0.50% ಏರಿಕೆ ಘೋಷಣೆ