Site icon Vistara News

ವಿಸ್ತಾರ Money Guide: ವಯಸ್ಸಾದಾಗ ಆರಾಮವಾಗಿರಲು ಪಿಂಚಣಿ ಪಡೆಯುವುದು ಹೇಗೆ? ನಿಮಗೆ ಗೊತ್ತಿರಬೇಕಾದ ಸಂಗತಿ

pension money

ಬೆಂಗಳೂರು: ಮೊದಲೆಲ್ಲ ಮಕ್ಕಳು ತಮ್ಮ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಈಗಿನ ಕಾಲ ಹಾಗಿಲ್ಲ. ತಂದೆ ತಾಯಿಯನ್ನು ಮಾತನಾಡಿಸಲು ಕೂಡ ಅವರ ಬಳಿ ಸಮಯ ಇರುವುದಿಲ್ಲ. ಹೆತ್ತವರ ಬಳಿ ಆರ್ಥಿಕ ಶಕ್ತಿ ಇದ್ದರೆ ಮಾತ್ರ ಯೋಗಕ್ಷೇಮ ನೋಡಿಕೊಂಡಾರು. ಇಲ್ಲದಿದ್ದರೆ ಅಷ್ಟೇ.. ತಲೆಯ ಮೇಲೆ ಕೈ ಹೊತ್ತು ಕೂರಬೇಕು ಎಂದು ಜನ ಮಾತನಾಡಿಕೊಳ್ಳುವುದನ್ನು ನೀವು ಕೇಳಿರಬಹುದು.

ಹೌದು..ಪ್ರತಿಯೊಬ್ಬ ಭಾರತೀಯನೂ ಇವತ್ತು ತನ್ನ ನಿವೃತ್ತಿಯ ಬದುಕಿನ ಬಳಿಕ ದಿನ ನಿತ್ಯದ ಖರ್ಚು ವೆಚ್ಚಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಬಗ್ಗೆ ತನ್ನ ಯೌವನದಲ್ಲೇ ಆಲೋಚಿಸಬೇಕಾದ ಕಾಲ ಸನ್ನಿಹಿತವಾಗಿದೆ. ತಡ ಮಾಡಿದಷ್ಟೂ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂಬ ಪರಿಸ್ಥಿತಿ ಇದೆ.

ಹಣಕಾಸು ವಿಚಾರಗಳಲ್ಲಿ ಸೂಕ್ತ ತಿಳುವಳಿಕೆಯ ಕೊರತೆಯ ಪರಿಣಾಮ ಕೋಟ್ಯಂತರ ಭಾರತೀಯರು ನಿವೃತ್ತಿಯ ಬಳಿಕ ಆರ್ಥಿಕ ಅಭದ್ರತೆಗೆ ಸಿಲುಕುತ್ತಾರೆ. ಇದನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಸಂಕಟಪಡುತ್ತಾರೆ. ಅನೇಕ ಮಂದಿ ನಿವೃತ್ತಿಯ ಬಳಿಕದ ಯೋಜನೆಗಳ ಬಗ್ಗೆ (Retirement plans) ಬಗ್ಗೆ ಚರ್ಚೆ ಮಾಡಲು ಕೂಡ ಹಿಂಜರಿಯುತ್ತಾರೆ. ಏಕೆಂದರೆ ಅದು ಅವರಿಗೆ ಗೊತ್ತಿರುವುದಿಲ್ಲ. ಅನೇಕ ಮಂದಿಗೆ ಈಗ ಸರಕಾರಿ ಉದ್ಯೋಗದಲ್ಲಿದ್ದರೂ ಮೊದಲಿನ ಪಿಂಚಣಿ ಯೋಜನೆಗಳು ಈಗ ಇಲ್ಲ ಎಂಬ ಮಾಹಿತಿ ಇಲ್ಲ. ಖಾಸಗಿ ಕಂಪನಿಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ಕೂಡ ಭವಿಷ್ಯನಿಧಿ (ಪಿಎಫ್)‌, ಗ್ರಾಚ್ಯುಯಿಟಿ ಸೌಲಭ್ಯ ಇರುವುದೇ ವಿನಾ, ಪಿಂಚಣಿ ಇರುವುದಿಲ್ಲ. ಪಿಎಫ್‌ ಯೋಜನೆಯಲ್ಲಿ ಪಿಂಚಣಿ ಇರುವುದಾದರೂ, ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಅದು ಸಾಕಾಗದು.

ಪ್ರತಿಯೊಬ್ಬ ವ್ಯಕ್ತಿಗೂ ತಾನು ಉದ್ಯೋಗದಿಂದ ನಿವೃತ್ತನಾದ ಬಳಿಕ ಯಾರ ಹಂಗೂ ಇಲ್ಲದೆ, ಆರ್ಥಿಕ ಸ್ವಾತಂತ್ರ್ಯದೊಂದಿಗೆ ಬಾಳಬೇಕು, ಯಾರ ಹತ್ತಿರವೂ ದುಡ್ಡಿಗೆ ಕೈಚಾಚುವ ಪರಿಸ್ಥಿತಿ ಬರಕೂಡದು, ಪ್ರತಿ ತಿಂಗಳೂ ಇಂತಿಷ್ಟು ದುಡ್ಡು ಅಕೌಂಟ್‌ಗೆ ಬರುತ್ತಲೇ ಇರಬೇಕು ಎಂಬ ಆಸೆ ಇರುತ್ತದೆ. ಆದರೆ ಇದನ್ನು ಈಡೇರಿಸುವುದು ಹೇಗೆ? ಈಗ ತನ್ನ ಸಂಬಳ ಎಷ್ಟು? ನಿವೃತ್ತಿಯ ಬಳಿಕ ಸಂಬಳ ನಿಂತು ಹೋಗುತ್ತದೆಯಲ್ಲವೇ, ಆಗ ಆದಾಯ ಗಳಿಸುವುದು ಹೇಗೆ? ಎಂಬ ಬಗ್ಗೆ ತಾರ್ಕಿಕವಾಗಿ, ವಸ್ತುನಿಷ್ಠವಾಗಿ ಆಲೋಚಿಸುವವರು ಕಡಿಮೆ. ಆದ್ದರಿಂದ ಕೆಲವರು ಮಾತ್ರ ಇಳಿ ವಯಸ್ಸಿನಲ್ಲಿ ತಾವು ಅಂದುಕೊಂಡಂತೆ ಜಾಲಿಯಾಗಿ, ನಿರಾಳವಾಗಿ ಜೀವನ ಸಾಗಿಸುತ್ತಾರೆ. ಉಳಿದವರು ನಿವೃತ್ತಿಯ ಬಳಿಕವೂ ಜೀವನೋಪಾಯಕ್ಕಾಗಿ ಎಲ್ಲೋ ನಿಟ್ಟುಸಿರಿಡುತ್ತಾ ದುಡಿಯುತ್ತಾರೆ. ದಿನ ನಿತ್ಯದ ಖರ್ಚು, ಔಷಧ, ಚಿಕಿತ್ಸೆಯ ವೆಚ್ಚ ಹೊಂದಿಸಲು ಪರದಾಡುತ್ತಾರೆ. ಈಗ ಬ್ಯಾಂಕ್‌, ಅಂಚೆ ಕಚೇರಿಯ ಉಳಿತಾಯ ಠೇವಣಿಗೂ ಬಡ್ಡಿ ಕಡಿಮೆ. ಹೀಗಾಗಿ ಆದಾಯದ ಮೂಲ ಹೇಗೆ ಹೆಚ್ಚಿಸುವುದು ಎಂಬ ಯೋಚನೆಯಲ್ಲಿ ಇರುತ್ತಾರೆ. ಅನೇಕ ಮಂದಿ ಮಕ್ಕಳನ್ನು ಅವಲಂಬಿಸುತ್ತಾರೆ. ಆದರೆ ಎಲ್ಲ ಮಕ್ಕಳೂ ಆದರ್ಶಪ್ರಾಯರಾಗಿ ಪೋಷಕರನ್ನು ಪಾಲನೆ ಮಾಡುವರು ಎಂಬ ಖಾತರಿ ಈಗಿಲ್ಲ. ಎರಡನೆಯದಾಗಿ ಇಂದಿನ ಮಕ್ಕಳೇ ಭವಿಷ್ಯದ ವೃದ್ಧರು. ಹೀಗಾಗಿ ಅವರು ಕೂಡ ತಮ್ಮ ನಿವೃತ್ತಿಯ ಬದುಕಿನ ಹಣಕಾಸು ವ್ಯವಸ್ಥೆ ಬಗ್ಗೆ ಯೋಚಿಸಬೇಕು. ತಪ್ಪಿದರೆ ಅವರೂ ಅವರ ಮಕ್ಕಳನ್ನು ಅವಲಂಬಿಸಬೇಕಾಗಿ ಬರಬಹುದು.

ನಿವೃತ್ತಿಯ ಬಳಿಕ ದುಡಿಯುವುದು ತಪ್ಪಲ್ಲ. ನಿವೃತ್ತರಿಗೆ ಎರಡನೇ ಕರಿಯರ್‌ ಆಯ್ಕೆ ಮಾಡಿಕೊಳ್ಳುವ ಸಕಲ ಸ್ವಾತಂತ್ರ್ಯವೂ ಇದೆ. ಆದರೆ ಆ ವೇಳೆಗೆ ಇಳಿ ವಯಸ್ಸಾಗಿರುತ್ತದೆ. ಶರೀರ ಮತ್ತು ಮನಸ್ಸಿಗೆ ವಿಶ್ರಾಂತಿಯ ಅಗತ್ಯ ಇರುತ್ತದೆ. ಯೌವನದಲ್ಲಿ ದುಡಿದಷ್ಟೇ ತೀವ್ರತೆಯಿಂದ ಶ್ರಮ ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಎಲ್ಲ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು ಮುಖ್ಯ.

ಯುವಜನತೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಮೂರು ವಿಚಾರಗಳು ಇಂತಿವೆ.

ನಿರಾಶರಾಗದಿರಿ, ಪಿಂಚಣಿ ಯೋಜನೆಗಳಿವೆ
ಮೇಲ್ಕಂಡ ವಾಸ್ತವ ಸಂಗತಿಗಳನ್ನು ಓದಿದ ಮೇಲೆ ನಿರಾಶರಾಗಿದ್ದೀರಾ? ಅದರ ಅಗತ್ಯ ಇಲ್ಲ. ಅದೃಷ್ಟವಶಾತ್‌ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ಪಿಂಚಣಿ ಯೋಜನೆಗಳು ಅಸ್ತಿತ್ವಕ್ಕೆ ಬಂದಿವೆ. ಕೆಲವು ಪಿಂಚಣಿ ಯೋಜನೆಗಳನ್ನು ಸರಕಾರವೇ ವ್ಯವಸ್ಥೆಗೊಳಿಸಿವೆ. ಪಿಂಚಣಿ ಯೋಜನೆಗೆ ಆನ್ಯುಯಿಟಿ ಯೋಜನೆ (Annuity plan)ಎಂಬ ಹೆಸರೂ ಇದೆ.

ಏನಿದು ಪಿಂಚಣಿ ಯೋಜನೆ?
ಪಿಂಚಣಿ ಹಣಕಾಸು ಉತ್ಪನ್ನವಾಗಿದೆ. ನಿಮಗೆ ವಿಶ್ರಾಂತಿಯ ನಿವೃತ್ತಿಯ ಜೀವನದಲ್ಲಿ ಖಾತರಿಯ ಆದಾಯವನ್ನು ನೀಡುತ್ತದೆ. ಷೇರು ಮಾರುಕಟ್ಟೆ ಹೇಗೆಯೇ ಇರಲಿ, ಒಪ್ಪಂದದ ಪ್ರಕಾರ ನಿರ್ದಿಷ್ಟ ಮೊತ್ತ ನಿಮಗೆ ಸಿಕ್ಕೇ ಸಿಗುತ್ತದೆ. ಪಿಂಚಣಿ ಮತ್ತು ವಿಮೆ ಎರಡೂ ಇರುವ ಪ್ಲಾನ್‌ಗಳಲ್ಲಿ ವಿಮೆಯ ಅನುಕೂಲವೂ ದೊರೆಯುತ್ತದೆ. ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಲೆಕ್ಕದಲ್ಲಿ ಆದಾಯವನ್ನು ಗಳಿಸಬಹುದು.

ಹೂಡಿಕೆ ಹೇಗೆ?
ಪಿಂಚಣಿ ಯೋಜನೆಗಳಲ್ಲಿ ನಿಯಮಿತವಾಗಿ ಪ್ರತಿ ತಿಂಗಳು ಹೂಡಿಕೆ ಮಾಡಬಹುದು. ಅಥವಾ ಒಮ್ಮೆಲೇ ಹೂಡಿಕೆ ಮಾಡಬಹುದು.
ಹಾಗಾದರೆ ಕಟ್ಟಿದ ಹಣ ವಾಪಸ್‌ ಬರುತ್ತದೆಯೇ ಎಂದು ನೀವು ಪ್ರಶ್ನಿಸಬಹುದು ಅಲ್ಲವೇ?
ಹೌದು. ನೀವು ಹೂಡಿದ ಹಣ ಅಥವಾ ಪ್ರೀಮಿಯಂ ಅನ್ನು ಸೇರಿಸಿ ಹಿಂತಿರುಗಿಸುವ ಪಿಂಚಣಿ ಯೋಜನೆಗಳೂ ಇವೆ. ಹೂಡಿದ ಹಣ ಕೊಡದಿರುವ ಯೋಜನೆಗಳೂ ಇವೆ. ಇವೆರಡರ ವ್ಯತ್ಯಾಸ ಏನೆಂದರೆ, ಪ್ರೀಮಿಯಂ ಅನ್ನು ಹಿಂತಿರುಗಿಸುವ ಪ್ಲಾನ್‌ಗಳಲ್ಲಿ ಬಡ್ಡಿ ಆದಾಯ ಕಡಿಮೆ. ಹಿಂತಿರುಗಿಸದ ಪ್ಲಾನ್‌ಗಳಲ್ಲಿ ಪಿಂಚಣಿ ಮೊತ್ತ ಹೆಚ್ಚು ಇರುತ್ತದೆ.

ತೆರಿಗೆ ಅನ್ವಯವಾಗುತ್ತದೆಯೇ?
ಪಿಂಚಣಿ ಯೋಜನೆಗಳಲ್ಲಿ ಲಭಿಸುವ ಆದಾಯಕ್ಕೆ ಆದಾಯ ತೆರಿಗೆ ನಿಯಮಗಳು ಅನ್ವಯವಾಗುತ್ತದೆ. ಹೀಗಿದ್ದರೂ ಇಳಿ ವಯಸ್ಸಿನಲ್ಲಿ ಪ್ರತಿ ತಿಂಗಳು ನಿಶ್ಚಿತ ಆದಾಯ ಇರುವುದು ಮುಖ್ಯ. ಈ ನಿಟ್ಟಿನಲ್ಲಿ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎನ್ನುತ್ತಾರೆ ಹೂಡಿಕೆ ತಜ್ಞರಾದ ದತ್ತಾತ್ರೇಯ.

ಮಾಸಿಕ 9,250 ರೂ. ಪಿಂಚಣಿಗೆ ಪಿಎಂವಿವಿವೈ ಸೂಕ್ತ
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ವಯವಂದನ ಯೋಜನೆ (PMVVY) ಅಡಿಯಲ್ಲಿ ನಿಮ್ಮ ಹೂಡಿಕೆಗೆ ಅನುಗುಣವಾಗಿ ಮಾಸಿಕ ಕನಿಷ್ಠ 1,000 ರೂ.ಗಳಿಂದ ಗರಿಷ್ಠ 9,250 ರೂ. ಪಿಂಚಣಿಯನ್ನು ಪಡೆಯಬಹುದು.
ಸರಕಾರದ ಯೋಜನೆಯಾದ್ದರಿಂದ ಭದ್ರತೆ ಬಗ್ಗೆಯೂ ನಿಶ್ಚಿಂತೆಯಿಂದ ಇರಬಹುದು.
60 ವರ್ಷ ಮೇಲ್ಪಟ್ಟ ಹಿರಿಯರಿಗೆ ಆರ್ಥಿಕ ಭದ್ರತೆ ನೀಡುವ ಯೋಜನೆ ಇದು. ಎಲ್‌ ಐಸಿಯ ಮೂಲಕ ಇದು ಜಾರಿಯಾಗಿದೆ. ಈ ಯೋಜನೆಯಲ್ಲಿ ಕನಿಷ್ಠ 1,50,000 ರೂ. ಹೂಡಿಕೆ ಮಾಡಿದರೆ 10 ವರ್ಷಗಳ ಕಾಲ ಮಾಸಿಕ 1,000 ರೂ. ಪಿಂಚಣಿ ಪಡೆಯಬಹುದು. ಗರಿಷ್ಠ 15 ಲಕ್ಷ ರೂ. ಹೂಡಿದರೆ ಮಾಸಿಕ 9,250 ರೂ. ಪಿಂಚಣಿ ಗಳಿಸಬಹುದು. ಈ ಯೋಜನೆಯಲ್ಲಿ ಹೂಡಿಕೆಯ ಮೊತ್ತವನ್ನೂ ಮರಳಿ ಪಡೆಯಬಹುದು. ಎಲ್‌ಐಸಿ ವೆಬ್‌ ಸೈಟ್‌ ಅಥವಾ ಎಲ್‌ಐಸಿ ಕಚೇರಿಗೆ ತೆರಳಿ ಹೂಡಿಕೆ ಮಾಡಬಹುದು.

Exit mobile version