ಪೋಷಕರ ಆದಾಯದಲ್ಲಿ ಮಕ್ಕಳ ಭವಿಷ್ಯದ ಅಗತ್ಯಗಳಿಗೆ ದೊಡ್ಡ ಪಾಲು ಹೋಗುತ್ತದೆ. ( Money Guide) ಉನ್ನತ ಶಿಕ್ಷಣದ ಜತೆಗೆ ಮಕ್ಕಳ ವಿವಾಹಕ್ಕೂ ಖರ್ಚು ವೆಚ್ಚವಾಗುತ್ತದೆ. ಹೀಗಾಗಿ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಣಕಾಸು ಪ್ಲಾನ್ ಮಾಡೋದು ಹೇಗೆ? ವಿಸ್ತಾರ ಮನಿಪ್ಲಸ್‌ನಲ್ಲಿ ಈ ಬಗ್ಗೆ ನಾಲೆಡ್ಜ್ ಬೆಲ್ ಸಿಇಒ ವಿನೋದ್ ತಂತ್ರಿ ಅವರು ವಿವರಿಸಿದ್ದಾರೆ.
ಮಕ್ಕಳ ಭವಿಷ್ಯದ ಅಗತ್ಯತೆಗಳು ಹಲವು ಆಯಾಮಗಳನ್ನು ಒಳಗೊಂಡಿವೆ. ಆದ್ದರಿಂದ ಆದ್ಯತೆಯನ್ನು ಮಾಡಿಕೊಳ್ಳುವುದು ಮುಖ್ಯ. ಮಕ್ಕಳಿಗೆ ಬೈಕ್ ಕೊಡಿಸುವುದು ಮುಖ್ಯವೇ, ಅವರ ಶಿಕ್ಷಣ ಮುಖ್ಯವೇ ಎಂದು ಯೋಚಿಸಬೇಕು. ಇವತ್ತಿನ ದಿನಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ದೊಡ್ಡ ಮೊತ್ತ ಹೋಗುತ್ತದೆ. ಆದ್ದರಿಂದ ಮೊದಲು ಆದ್ಯತೆ ಕೊಡಬೇಕು. ಬಳಿಕ ಹಣಕಾಸು ಪ್ಲಾನ್ ಮಾಡಬೇಕು. ಇವತ್ತು ಮಕ್ಕಳು ಹುಟ್ಟುವುದಕ್ಕಿಂತ ಮೊದಲೇ ಹಣಕಾಸು ಯೋಜನೆ ಮಾಡುವ ಪರಿಸ್ಥಿತಿ ಇದೆ. ಆದ್ದರಿಂದ ಆದಷ್ಟು ಬೇಗ ಪ್ಲಾನಿಂಗ್ ಮಾಡುವುದು ಉತ್ತಮ.
ಮ್ಯೂಚುವಲ್ ಫಂಡ್‌ಗಳಲ್ಲಿ ಚಿಲ್ಡ್ರೆನ್ಸ್ ಪ್ಲಾನ್ ಇದೆ. ವಿಮೆಯಲ್ಲೂ ಚಿಲ್ಡ್ರೆನ್ಸ್ ಪ್ಲಾನ್ ಇದೆ. ಸುಕನ್ಯಾ ಸಮೃದ್ಧಿ ಯೋಜನೆ ಇದೆ. ಆದರೆ ಚಿಲ್ಡ್ರೆನ್ಸ್ ಪ್ಲಾನ್ ಎಂಬ ಹೆಸರಿದ್ದ ತಕ್ಷಣ ವಿಮೆ ಉತ್ಪನ್ನದಲ್ಲಿ ಹೂಡಿಕೆ ಮಾಡಬೇಕೆಂದಿಲ್ಲ. ಪೋಷಕರಿಗೆ ಟರ್ಮ್ ವಿಮೆ ಸೂಕ್ತ. ಮಕ್ಕಳಿಗೆ ಇತರ ಆಯ್ಕೆಯನ್ನು ಪರಿಗಣಿಸಬಹುದು.
ಮಕ್ಕಳ ಭವಿಷ್ಯಕ್ಕಾಗಿ ದೀರ್ಘಕಾಲೀನ ಹೂಡಿಕೆ ಮಾಡುವುದರಿಂದ ಸಾಕಷ್ಟು ಟೈಮ್ ಸಿಗುತ್ತದೆ. ಈಕ್ವಿಟಿ ಮ್ಯೂಚುವಲ್ ಫಂಡ್ ಈ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎನ್ನುತ್ತಾರೆ ವಿನೋದ್ ತಂತ್ರಿ. ಪೋಷಕರಿಗೆ ಟರ್ಮ್ ಪ್ಲಾನ್ ಪಾಕೆಟ್ ಫ್ರೆಂಡ್ಲಿಯಾಗಿರುತ್ತದೆ. ವರ್ಷಕ್ಕೆ 30-40 ಸಾವಿರ ವೆಚ್ಚದಲ್ಲಿ ಒಂದು ಕೋಟಿ ರೂ. ಟರ್ಮ್ ಇನ್ಷೂರೆನ್ಸ್ ಸಿಗುತ್ತದೆ. ಆರೋಗ್ಯ ವಿಮೆಯನ್ನೂ ಹೊಂದಿರಬೇಕು. ಏಕೆಂದರೆ ಮಕ್ಕಳ ಭವಿಷ್ಯಕ್ಕೆ ನೀವು ಇಡುವ ಹಣದ ರಕ್ಷಣೆಗೆ ಹೆಲ್ತ್ ಇನ್ಷೂರೆನ್ಸ್ ಅಗತ್ಯ. ಇಲ್ಲದಿದ್ದರೆ ಯಾರಿಗಾದರೂ ಅನಾರೋಗ್ಯವಾದಾಗ ಮಕ್ಕಳ ಭವಿಷ್ಯಕ್ಕೆ ಇಟ್ಟಿದ್ದ ಹಣವನ್ನು ತೆಗೆಯುವ ಸಾಧ್ಯತೆ ಇರುತ್ತದೆ.
ಮಕ್ಕಳ ಫೈನಾನ್ಸ್ ಪ್ಲಾನ್ ಸಲುವಾಗಿ ಸೈಟಿನಲ್ಲಿ ಹೂಡಿಕೆ ಉತ್ತಮವೇ? ಸಾಂಪ್ರದಾಯಿಕವಾಗಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಸಹಜ. ಮೊದಲು ಹೆಚ್ಚು ಆಯ್ಕೆ ಇಲ್ಲದಿದ್ದರಿಂದ ರಿಯಾಲ್ಟಿಯಲ್ಲಿ ಜನ ಹೂಡಿಕೆ ಮಾಡುತ್ತಿದ್ದರು. ಆದರೆ ಈಗ ಹಲವಾರು ಆಯ್ಕೆಗಳು ಇರುವುದರಿಂದ ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿರ್ಧರಿಸುವುದು ಉತ್ತಮ.