ಉದ್ಯಮಿ ಎಂದರೆ ಕೈ ತುಂಬಾ ದುಡ್ಡು, ಬ್ಯಾಂಕ್ ಬ್ಯಾಲೆನ್ಸ್, ಐಷಾರಾಮಿ ಕಾರುಗಳು, ಬಂಗಲೆಗಳು, ಕಂಪನಿ, ಕೆಲಸಗಾರಿಗೆ ಆದೇಶಿಸುವುದು, ಪಾರ್ಟಿ, ( Business plan ) ಬಿಸಿನೆಸ್ ಮೀಟಿಂಗ್‌ಗಳಲ್ಲಿ ಸೂಟು-ಬೂಟು ಹಾಕ್ಕೊಂಡು ಮಿಂಚುವುದು ಇತ್ಯಾದಿ ಗ್ಲಾಮರ್ ಅಂಶಗಳು ಗಮನ ಸೆಳೆಯುತ್ತವೆ. ಆದರೆ ಬಿಸಿನೆಸ್ ಒಂದನ್ನು ನಡೆಸುವುದು ಸಂಕೀರ್ಣ ಪ್ರಕ್ರಿಯೆ. ಇದು ಹಲವು ಸವಾಲುಗಳನ್ನೂ ಒಳಗೊಂಡಿರುತ್ತದೆ.
ಒಂದು ಕಂಪನಿಯನ್ನು ಕಟ್ಟಲು ಬಯಸುವವರು ಹಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಕುಟುಂಬದ ಸದಸ್ಯರೊಡನೆ ಕಾಲ ಕಳೆಯಲು ಅವರಿಗೆ ಸಮಯ ಸಿಗದು. ತಮಗೆ ಬೇಕಾದ ಹವ್ಯಾಸವನ್ನೂ ಕಾರ್ಯಗತಗೊಳಿಸಲು ಬಿಡುವು ದೊರೆಯದು. ತೀವ್ರ ಒತ್ತಡವನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಹಿನ್ನಡೆ ಮತ್ತು ವೈಫಲ್ಯಗಳೂ ಅಪ್ಪಳಿಸಬಹುದು. ಆಗ ಮಾನಸಿಕ ಸ್ಥಿಮಿತ ಕಳೆದುಕೊಳ್ಳದಂತೆ ತನ್ನನ್ನು ತಾನೆ ನೋಡಿಕೊಳ್ಳಬೇಕಾಗುತ್ತದೆ.
ನೀವು ಏನೋ ಅಂದುಕೊಂಡು ಒಂದು ಬಿಸಿನೆಸ್ ಅನ್ನು ಹುಮ್ಮಸ್ಸಿನಿಂದ ಶುರು ಮಾಡಬಹುದು. ಆದರೆ ಅದು ನಿಮಗೆ ಹೊಂದಿಕೊಳ್ಳುವ ಬಿಸಿನೆಸ್ ಆಗದೆಯೂ ಇರಬಹುದು. ಆಗ ಉಂಟಾಗುವ ಒತ್ತಡವನ್ನು ಎದುರಿಸಲಾಗದೆ ಹಲವಾರು ಮಂದಿ ಅರ್ಧದಲ್ಲಿಯೇ ಉದ್ಯಮವನ್ನು ಕೈಬಿಡುತ್ತಾರೆ. ಭಾರಿ ನಷ್ಟಗಳಿಗೆ ಕಂಗಾಲಾಗುತ್ತಾರೆ. ಹತಾಶರಾಗುತ್ತಾರೆ. ಹಾಗಂತ ಉದ್ಯಮಿಯಾಗುವುದು ಒಳ್ಳೆಯದು. ಉದ್ಯಮ ಶುರು ಮಾಡಲು ಒಂದು ಬಿಸಿನೆಸ್ ಪ್ಲಾನ್ ಅಗತ್ಯ.
ಬಿಸಿನೆಸ್ ಪ್ಲಾನ್ ಮಾಡುವುದು ಹೇಗೆ?
ನೀವು ನಿಮ್ಮ ಐಡಿಯಾವನ್ನು ಉದ್ಯಮವನ್ನಾಗಿಸಲು ಒಂದು ಬಿಸಿನೆಸ್ ಪ್ಲಾನ್ ಮಾಡಬೇಕಾಗುತ್ತದೆ. ಏಕೆಂದರೆ ಇದರಿಂದ ನಿಮ್ಮ ಉದ್ದೇಶಗಳು ಸ್ಪಷ್ಟವಾಗುತ್ತದೆ. ಕಾರ್ಯತಂತ್ರ ಗಟ್ಟಿಯಾಗುತ್ತದೆ. ಸಂಪನ್ಮೂಲಗಳು, ಮಾರುಕಟ್ಟೆಯಲ್ಲಿರುವ ಕಾಂಪಿಟೇಶನ್, ಹಣಕಾಸು ವ್ಯವಸ್ಥೆ ಮತ್ತು ಸಂಭವನೀಯ ಅಡಚಣೆಗಳನ್ನು ಗುರುತಿಸಲು ಬಿಸಿನೆಸ್ ಪ್ಲಾನ್ ಬೇಕು. ಅಗತ್ಯವಿರುವ ಫಂಡ್ ರೈಸ್ ಮಾಡಲು ಕೂಡ ಒಂದು ಒಳ್ಳೆಯ ಬಿಸಿನೆಸ್ ಪ್ಲಾನ್ ಮುಖ್ಯ.
ನೀವು ಬಿಸಿನೆಸ್ ಪ್ಲಾನ್ ಬರೆಯುವಾಗ, ಅದು ನಿಮ್ಮದೇ ಐಡಿಯಾ ಆಗಿರಲಿ. ಪ್ರಾಯೋಗಿಕವಾಗಿ ಜಾರಿಗೊಳಿಸಲು ಸಾಧ್ಯವಾಗುವಂತಿರಲಿ. ಅದು ಹೂಡಿಕೆದಾರರನ್ನು ಆಕರ್ಷಿಸುವಂತಿರಬೇಕು. ಸಂಕ್ಷಿಪ್ತ ಮತ್ತು ಸರಳವಾದ ಬಿಸಿನೆಸ್ ಪ್ಲಾನ್ ಹೂಡಿಕೆದಾರರನ್ನು ಆಕರ್ಷಿಸುತ್ತದೆ. ಅತ್ಯಂತ ಸಂಕೀರ್ಣ ಮತ್ತು ಗಹನವಾದ ಪ್ರಶ್ನೆಗಳಿಗೂ ಉತ್ತರ ನಿಮ್ಮಲ್ಲಿರಲಿ. ಬಿಸಿನೆಸ್ ಪ್ಲಾನ್‌ನಲ್ಲಿ ಮಿಶನ್ ಸ್ಟೇಟ್‌ಮೆಂಟ್ ಇರಬೇಕು. ಇದು ಸರಳ, ಸಂಕ್ಷಿಪ್ತ ಮತ್ತು ಮಹತ್ತ್ವಾಕಾಂಕ್ಷೆಯದ್ದಾಗಿರಬೇಕು. ಉದಾಹರಣೆಗೆ ಡಯಾಬಿಟಿಕ್ ಸ್ನೇಹಿ ಐಸ್ ಕ್ರೀಮ್, ಸಿರಿ ಧಾನ್ಯಗಳ ಐಸ್ ಕ್ರೀಂ, ವೀಳ್ಯದೆಲೆಯ ಚಹಾ ಇತ್ಯಾದಿಯಾಗಿ ಗಮನ ಸೆಳೆಯುವಂತಿರಲಿ.
ಇದನ್ನೂ ಓದಿ: Digital Payment: ಗಮನಿಸಿ; ಡಿಸೆಂಬರ್ 31ರಿಂದ ಈ ಯುಪಿಐ ಖಾತೆಗಳು ಬಂದ್!
ಬಿಸಿನೆಸ್ ಪ್ಲಾನ್‌ನಲ್ಲಿ ಎಕ್ಸಿಕ್ಯುಟಿವ್ ಸಮ್ಮರಿ ಇರಲಿ. ಈ ಸಾರಾಂಶದಲ್ಲಿ ನಿಮ್ಮ ಬಿಸಿನೆಸ್ ಬಗ್ಗೆ ಕೆಲವು ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ಬರೆಯಿರಿ. ಸಮ್ಮರಿಯನ್ನು ಹೂಡಿಕೆದಾರರು ಮೊದಲು ಓದುತ್ತಾರೆ. ಅದು ಇಷ್ಟವಾದರೆ ಮುಂದುವರಿಯುತ್ತಾರೆ. ಅದುವೇ ಇಷ್ಟವಾಗದಿದ್ದರೆ ಮುಂದೆ ಓದುವುದು ಕಷ್ಟ. ಅಥವಾ ಕೆಲಸದ ಒತ್ತಡದಲ್ಲಿ ಸಮ್ಮರಿ ಬಿಟ್ಟು ಬೇರೆ ಓದಲು ಅವರಿಗೆ ಸಾಧ್ಯವಾಗದೆಯೂ ಇರಬಹುದು. ಆದ್ದರಿಂದ ಸಮ್ಮರಿಯನ್ನು ಒಂದು ಪುಟದೊಳಗೆ ಮುಕ್ತಾಯಗೊಳಿಸಿ.
ಪ್ರಾಡಕ್ಟ್/ ಸರ್ವೀಸ್ ವಿವರ: ನಿಮ್ಮ ಉತ್ಪನ್ನ ಅಥವಾ ಸೇವೆಯ ಬಗ್ಗೆ ಬರೆಯಿರಿ. ಮಾರುಕಟ್ಟೆ ಮತ್ತು ಪೈಪೋಟಿಯ ವಿಶ್ಲೇಷಣೆ: ನಿಮ್ಮ ಉತ್ಪನ್ನ ಮತ್ತು ಸೇವೆಗಳಿಗೆ ಹೇಗೆ ಮಾರುಕಟ್ಟೆ ಕಂಡುಕೊಳ್ಳುತ್ತೀರಿ. ನಿಮಗೆ ಪೈಪೋಟಿ ನೀಡಬ್ಲಲವರು ಯಾರು? ನಿಮ್ಮ ಡಿಸ್ಟ್ರಿಬ್ಯೂಷನ್ ನೆಟ್ ವರ್ಕ್ ಏನು? ಕಂಪನಿಯ ಸ್ವರೂಪ ಹೇಗಿರುತ್ತದೆ? ಕಚ್ಚಾ ಸಾಮಾಗ್ರಿಯನ್ನು ಎಲ್ಲಿಂದ ಹೊಂದಿಸುತ್ತೀರಿ. ಇತ್ಯಾದಿ ವಿವರಗಳು ಇರಲಿ.
ಹಣಕಾಸು ಮತ್ತು ಇತರ ಸಂಪನ್ಮೂಲ: ಉದ್ದಿಮೆ ಸ್ಥಾಪನೆಗೆ ಬೇಕಾದ ಸಂಪನ್ಮೂಲ ಮತ್ತು ಹಣಕಾಸು ವ್ಯವಸ್ಥೆಯನ್ನು ಬಿಸಿನೆಸ್ ಪ್ಲಾನ್‌ನಲ್ಲಿ ವಿವರಿಸಿ. ಆದಾಯ, ಮಾರುಕಟ್ಟೆ ಪಾಲು, ಲಾಭದ ಬಗ್ಗೆಯೂ ತಿಳಿಸಿರಿ. ನೀವು ಭಾರಿ ಲಾಭವನ್ನು ನಿರೀಕ್ಷಿಸುತ್ತಿದ್ದೀರಾ? ತ್ವರಿತ ಬೆಳವಣಿಗೆ ಅಥವಾ ಎರಡರ ಮಿಶ್ರಣವನ್ನು ಬಯಸುತ್ತೀರಾ? ಪ್ರಾಯೋಗಿಕವಾಗಿ ವಿವರಿಸಿ.