Site icon Vistara News

Pee-Gate | ವಿಮಾನಗಳಲ್ಲಿ ಪ್ರಯಾಣಿಕರ ದುರ್ವರ್ತನೆ ತಡೆಯುವುದು ಹೇಗೆ?

airline

ಕೆ. ಗಿರಿಪ್ರಕಾಶ್‌, ಬೆಂಗಳೂರು

ಕೆ. ಗಿರಿಪ್ರಕಾಶ್

ಕಳೆದ ತಿಂಗಳು ವಿಮಾನದಲ್ಲಿ ಪ್ರಯಾಣಿಕರು ಅಹಿತಕರವಾಗಿ ನಡೆದುಕೊಂಡಿರುವ ನಾಲ್ಕು ಘಟನೆಗಳು ನಡೆದಿವೆ. ಪ್ರತಿಯೊಂದೂ ಒಂದಕ್ಕಿಂತ ಮತ್ತೊಂದು ಗಂಭೀರ ಪ್ರಕರಣಗಳಾಗಿವೆ. ಅದರಲ್ಲಿ ಕೊನೆಯ ಎರಡು ಪ್ರಕರಣಗಳಿಗೆ ವಿಶೇಷ ಗಮನ ಹರಿಸಬೇಕು. ಮುಖ್ಯವಾಗಿ ಏರ್‌ ಇಂಡಿಯಾದ (Air India) ಅಂತಾರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣಿಕನೊಬ್ಬ ಮತ್ತೊಬ್ಬ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸುವುದು (Pee-Gate) ಎಂದರೆ ಅತ್ಯಂತ ಆಘಾತಕಾರಿ.

ಹೀಗಿದ್ದರೂ, ಏರ್‌ ಇಂಡಿಯಾದ ಕ್ಯಾಬಿನ್‌ ಸಿಬ್ಬಂದಿ, ತಪ್ಪಿತಸ್ಥ ಪ್ರಯಾಣಿಕನನ್ನು ಜೈಲಿನ ಕಂಬಿ ಎಣಿಸುವಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಳ್ಳುವುದರ ಬದಲಿಗೆ, ಇಬ್ಬರು ಪ್ರಯಾಣಿಕರ ವೈಮನಸ್ಯ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸುವ ಪಾತ್ರ ವಹಿಸಿದೆ ಎಂದು ವರದಿಯಾಗಿದೆ. ಕಳವಳಕಾರಿ ಸಂಗತಿ ಏನೆಂದರೆ ಇಂಥ ಘಟನೆ ನಡೆದಿದ್ದರೂ, ಏರ್‌ಲೈನ್‌ ಸಿಇಒಗೆ ಕೂಡಲೇ ಈ ಸಂಗತಿ ತಲುಪಿರಲಿಲ್ಲ ಎಂಬುದು. ಒಂದು ವೇಳೆ ತಿಳಿದಿದ್ದರೂ, ತಕ್ಷಣ ಸಿಬ್ಬಂದಿ ವಿರುದ್ಧ ಕ್ರಮವನ್ನು ಕೈಗೊಂಡಿರಲಿಲ್ಲ. ( ನಾಲ್ವರು ಸಿಬ್ಬಂದಿಗೆ ಮತ್ತು ಒಬ್ಬ ಪೈಲಟ್‌ಗೆ ಶೋಕಾಸ್‌ ನೋಟಿಸ್‌ ಮೂಲಕ ಎಚ್ಚರಿಸಲಾಗಿದೆ)

ಘಟನೆಗೆ ಸಂಬಂಧಿಸಿ ಏರ್‌ ಇಂಡಿಯಾದ ಸಿಇಒ ಖುದ್ದಾಗಿ 70 ವರ್ಷ ಹಿರಿಯ ಮಹಿಳಾ ಪ್ರಯಾಣಿಕರ ಬಳಿ ಕ್ಷಮೆ ಯಾಚಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ, ಏರ್‌ ಇಂಡಿಯಾದ ಹೊಸ ಮ್ಯಾನೇಜ್‌ಮೆಂಟ್‌ ವ್ಯವಸ್ಥೆ ಹೆಚ್ಚು ಪ್ರಯಾಣಿಕಸ್ನೇಹಿಯಾಗಿದ್ದು, ಸಮಗ್ರತೆಯಿಂದ ಕೂಡಿದೆ. ಉದ್ಯೋಗಿಗಳಿಗೆ ರೂಲ್‌ ಬುಕ್‌ನ ಪ್ರತಿಗಳನ್ನು ವಿತರಿಸಲಾಗಿದ್ದು, ಪಾಲಿಸಲು ಸೂಚಿಸಲಾಗಿದೆ. ಈ ಘಟನೆ ಸಂಭವಿಸಿ ಬಹಳ ದಿನಗಳಾದ ಬಳಿಕ ಟಾಟಾ ಸನ್ಸ್‌ ಅಧ್ಯಕ್ಷ ನಟರಾಜನ್‌ ಚಂದ್ರಶೇಖರನ್‌ ಮತ್ತು ಏರ್‌ ಇಂಡಿಯಾ ಸಿಇಒ ಕ್ಯಾಂಬೆಲ್‌ ವಿಲ್ಸನ್‌ ಕ್ಷಮೆಯಾಚಿಸಿದ್ದಾರೆ.

ಡಿಜಿಸಿಎ ಎಚ್ಚರಿಕೆ

ವೈಮಾನಿಕ ವಲಯದ ನಿಯಂತ್ರಕ ಡಿಜಿಸಿಎ, ತಪ್ಪಿತಸ್ಥ ಪ್ರಯಾಣಿಕನನ್ನು 30 ದಿನಗಳ ಕಾಲ ವಿಮಾನ ಪ್ರಯಾಣದಿಂದ ನಿಷೇಧಿಸಿದೆ. ಬಳಿಕ ದಿಲ್ಲಿ ಪೊಲೀಸರು ಆತನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರು. ಕೊನೆಗೂ ಜನವರಿ 7ರಂದು ಬೆಂಗಳೂರಿನಲ್ಲಿ ಬಂಧಿಸಿ ದಿಲ್ಲಿಗೆ ಕರೆದೊಯ್ಯಲಾಯಿತು. ಹೀಗಿದ್ದರೂ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಪ್ರಯಾಣಿಕ ಶಂಕರ್‌ ಮಿಶ್ರಾನನ್ನು ಉಪಾಧ್ಯಕ್ಷ ಹುದ್ದೆ ಮತ್ತು ಉದ್ಯೋಗದಿಂದ ಅಮೆರಿಕ ಮೂಲದ ವೆಲ್ಸ್‌ ಫಾರ್ಗೊ ವಜಾಗೊಳಿಸಿತು. ಏರ್‌ ಇಂಡಿಯಾದ ಅಂತಾರಾಷ್ಟ್ರೀಯ ವಿಮಾನದಲ್ಲಿ ಈ ಹಿಂದೆಯೂ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರ ಬಟ್ಟೆಯ ಮೇಲೆ ಮೂತ್ರ ವಿಸರ್ಜಿಸಿದ್ದ. ಆತನನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಏಜೆಂಟರು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಆತ ಲಿಖಿತವಾಗಿ ಕ್ಷಮೆಯಾಚಿಸಿದ ಬಳಿಕ ಬಿಡುಗಡೆ ಮಾಡಲಾಗಿತ್ತು.

ಈ ನಡುವೆ ಏರ್‌ ಇಂಡಿಯಾ ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಘಟನೆ ಬಗ್ಗೆ ವರದಿಯನ್ನು ಕೋರಿದೆ. ಮಾತ್ರವಲ್ಲದೆ ಎಲ್ಲ ಏರ್‌ಲೈನ್‌ಗಳಿಗೂ ನೀಡಿರುವ ಸೂಚನೆಯಲ್ಲಿ, ಸಮಸ್ಯೆ ಸೃಷ್ಟಿಸುವ ಪ್ರಯಾಣಿಕರನ್ನು ನಿರ್ಬಂಧಿಸಲು ವಿಮಾನದ ಕ್ಯಾಬಿನ್ ಸಿಬ್ಬಂದಿ ಕ್ರಮ ವಹಿಸಬೇಕು. ತಪ್ಪಿದರೆ‌ ಅವರನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಸಿದೆ.

ಜಾಗತಿಕ ಸಮಸ್ಯೆ

ವಿಮಾನದ ಪ್ರಯಾಣದ ವೇಳೆ ಅಹಿತಕರ ಘಟನೆಗಳು ಹೊಸತಲ್ಲ. ವಿಶ್ವಾದ್ಯಂತ ಇಂಥ ಪ್ರಕರಣಗಳು ವರದಿಯಾಗುತ್ತಿವೆ. ಫೆಡರಲ್‌ ಏವಿಯೇಶನ್‌ ಅಡ್ಮಿನಿಸ್ಟ್ರೇಶನ್ (FAA) ಇಂಥ ಪ್ರಕರಣಗಳ ಬಗ್ಗೆ ಜೀರೊ ಟಾಲರೆನ್ಸ್‌ ನೀತಿಯನ್ನು ಹೊಂದಿದ್ದು ಸಹಿಸುವುದಿಲ್ಲ. ಹೀಗಿದ್ದರೂ ಪ್ರಯಾಣಿಕರು ಹಿಂಸಾತ್ಮಕವಾಗಿ ವರ್ತಿಸಿದ ಘಟನೆಗಳು ನಡೆದಿವೆ. ಕೆಲವು ಏರ್‌ಲೈನ್‌ ಸಿಬ್ಬಂದಿ ಇಂಥ ಘಟನೆಗಳ ಪರಿಣಾಮ ಕೆಲಸ ಕಳೆದುಕೊಂಡಿರಬಹುದು. ಆದರೆ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ತಮ್ಮ ಇಂಥ ಕುಕೃತ್ಯಗಳಿಗಾಗಿ ಕಂಬಿ ಎಣಿಸುವಂತಾಗಬೇಕು.

ಕೆಲವು ಸಂದರ್ಭಗಳಲ್ಲಿ ಹೊಸತನ್ನು ಎದುರಿಸುವ ಸಾಮರ್ಥ್ಯ ಇಲ್ಲದಿರುವ ಪ್ರಯಾಣಿಕರಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಾಗ ಹಿಂಸಾತ್ಮಕ ಪ್ರವೃತ್ತಿಗಳು ಕಂಡುಬರಬಹುದು ಎನ್ನುತ್ತಾರೆ ಮಾನಸಿಕ ತಜ್ಞರು. ಕೆಲ ಸಂದರ್ಭಗಳಲ್ಲಿ ಹೊಡೆದಾಟ, ಬಡಿದಾಟಕ್ಕೆ ಸಂಬಂಧಿಸಿ ಬಂಧನ ಕೂಡ ನಡೆದಿದೆ.

ಮನಃಶಾಸ್ತ್ರಜ್ಞೆ ಸ್ನೇಹಾ ಭಟ್‌ ಪ್ರಕಾರ, ಕೋವಿಡ್‌ 19 ಬಿಕ್ಕಟ್ಟಿನ ಮೊದಲಿನ ಅವಧಿಗೆ ಹೋಲಿಸಿದರೆ ಈಗ ಜನರಲ್ಲಿ ಶಾರೀರಿಕ ಚಟುವಟಿಕೆಗಳು ಕಡಿಮೆಯಾಗಿದೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಕೂಡ ಪ್ರತಿಕೂಲ ಪ್ರಭಾವ ಬೀರುತ್ತಿದೆ. ಇಂಥ ಹಿಂಸಾತ್ಮಕ ಘಟನೆಗಳಲ್ಲಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಅಗತ್ಯ ಹಾಗೂ ಎಲ್ಲ ಪ್ರಯಾಣಿಕರಿಗೆ ಸ್ಪಷ್ಟ ಸಂದೇಶ ರವಾನೆಯಾಗಬೇಕು ಎನ್ನುತ್ತಾರೆ ಅವರು.

ಕ್ಯಾಬಿನ್‌ ಸಿಬ್ಬಂದಿಗೆ ಅಗ್ನಿ ಪರೀಕ್ಷೆ

ವಿಮಾನದಲ್ಲಿ ಅಹಿತಕರ ಘಟನೆಗಳು ಹೊಸತಲ್ಲ. ಇಂಥ ಪ್ರಕರಣಗಳು ಹೆಚ್ಚಾದರೆ ವಿಮಾನದ ಸಿಬ್ಬಂದಿಗೆ ನಿರ್ವಹಿಸುವುದು ಸವಾಲಿನ ಕೆಲಸವಾಗಬಹುದು. ಪ್ರಯಾಣಿಕರಿಂದ ಅನಿರೀಕ್ಷಿತ ಮತ್ತು ಗಂಭೀರ ಆಕ್ಷೇಪಾರ್ಹ ನಡವಳಿಕೆ ಕಂಡು ಬಂದ ಸಂದರ್ಭದಲ್ಲಿ ಅವುಗಳನ್ನು ನಿರ್ವಹಿಸುವುದು ಸುಲಭವೂ ಅಲ್ಲ. ಸಿಬ್ಬಂದಿಯೂ ಒತ್ತಡಕ್ಕೆ ಸಿಲುಕಬಹುದು. ಅವರು ಆತುರದ ನಿರ್ಧಾರವನ್ನೂ ಕೈಗೊಳ್ಳಬಹುದು. ಪ್ರಕರಣದ ಸಂತ್ರಸ್ತರೂ ಘಟನೆಯನ್ನು ದೊಡ್ಡದು ಮಾಡಬಾರದು ಎಂಬ ನಿರೀಕ್ಷೆಯಲ್ಲಿ ಕ್ಯಾಬಿನ್‌ ಸಿಬ್ಬಂದಿ ಇರಬಹುದು. ಆಗ ಏರ್‌ ಇಂಡಿಯಾದಲ್ಲಿ ಆದಂಥ ಪ್ರಕರಣಗಳು ಸಂಭವಿಸುತ್ತವೆ.

ಹೀಗಾಗಿ ಏರ್‌ಲೈನ್‌ಗಳು, ಸರ್ಕಾರ, ಭದ್ರತಾ ಇಲಾಖೆ ಇಂಥ ಪ್ರಸಂಗಗಳನ್ನು ನಿರ್ವಹಿಸುವ ಬಗ್ಗೆ ಜಂಟಿ ಸಮಾಲೋಚನೆ ನಡೆಸಬೇಕು. ಇಂಟರ್‌ನ್ಯಾಶನಲ್‌ ಏರ್‌ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಶನ್‌ (IATA) ವಿಮಾನದೊಳಗೆ ಅಹಿತಕರ ಘಟನೆಗಳ ಸಂದರ್ಭ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಮಾರ್ಗದರ್ಶಿಯನ್ನು ಹೊಂದಿದೆ. ಪ್ರತಿಯೊಂದು ವಿಮಾನದಲ್ಲೂ ದುರ್ವರ್ತನೆ ತೋರಿದರೆ ಯಾವೆಲ್ಲ ಪರಿಣಾಮ ಎದುರಿಸಬೇಕಾದೀತು ಎಂಬುದನ್ನು ಪ್ರಯಾಣಿಕರಿಗೆ ತಿಳಿಸಬೇಕು. ಆಗ ಪ್ರಯಾಣಿಕರ ಸುರಕ್ಷತೆಗೆ ಸಹಕಾರಿಯಾಗುತ್ತದೆ.

Exit mobile version