ದುಡ್ಡು ಬಿತ್ತಿ ದುಡ್ಡು ಬೆಳೆಯಿರಿ…ಇದು (Money Plus) ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್ ಎಡಿಟರ್ ಶರತ್ ಎಂ.ಎಸ್ ಅವರು ಮ್ಯೂಚುವಲ್ ಫಂಡ್ ಬಗ್ಗೆ ಬರೆದಿರುವ ಮೊದಲ ಪುಸ್ತಕ. ಹಾಗೂ ಹಣಕಾಸು ವಿಚಾರಕ್ಕೆ ಸಂಬಂಧಿಸಿ ಎರಡನೇ ಪುಸ್ತಕವಾಗಿದೆ.
ಕನ್ನಡದಲ್ಲಿ ಮ್ಯೂಚುವಲ್ ಫಂಡ್ ಬಗ್ಗೆ ತಿಳಿದುಕೊಳ್ಳಲು ಮೌಲಿಕವಾದ ಕೃತಿಗಳ ಕೊರತೆ ಇದೆ. ಹೀಗಾಗಿ ಮ್ಯೂಚುವಲ್ ಫಂಡ್ ಸಲುವಾಗಿ ಸಮಗ್ರವಾಗಿ ಕನ್ನಡಿಗರೇ, ಕನ್ನಡಿಗರಿಗಾಗಿ ಬರೆದಿರುವ ಪುಸ್ತಕ ಇದಾಗಿದೆ. ಇವತ್ತು ಮ್ಯೂಚುವಲ್ ಫಂಡ್ ಹಾಗೂ ಷೇರುಗಳ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂಬಷ್ಟರಮಟ್ಟಿಗೆ ಅನಿವಾರ್ಯವಾಗಿದೆ. ಏಕೆಂದರೆ ಸಾಂಪ್ರದಾಯಿಕ ಹೂಡಿಕೆಯ ಸಾಧನಗಳು ಈಗ ಹೂಡಿಕೆದಾರರಿಗೆ ಹಣದುಬ್ಬರದ ಎದುರು ನಿರೀಕ್ಷಿತ ಫಲ ನೀಡುತ್ತಿಲ್ಲ. ಇವತ್ತು ಬ್ಯಾಂಕಿನಲ್ಲಿ ಎಫ್‌ಡಿಯಲ್ಲಿ 7% ಬಡ್ಡಿ ಸಿಗುವುದಿದ್ದರೆ ಹಣದುಬ್ಬರದ ಪರಿಣಾಮ ವಾಸ್ತವವಾಗಿ ಏನೂ ಪ್ರತಿಫಲ ಸಿಗುವುದಿಲ್ಲ. ಆದರೆ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು 12-13% ಲಾಭಾಂಶ ನೀಡಿರುವ ಐತಿಹಾಸಿಕ ನಿದರ್ಶನಗಳು ಇವೆ.
ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಷೇರು ಮಾರುಕಟ್ಟೆಯನ್ನು ಪ್ರವೇಶಿಸಬಹುದು. ಬೆಲೆ ಏರಿಕೆಯನ್ನು ಮೀರಿ ನಮ್ಮ ಹಣ ಬೆಳೆಯುವಂತೆ ಮಾಡಬಹುದು. ಮಾತ್ರವಲ್ಲದೆ ಮ್ಯೂಚುವಲ್ ಫಂಡ್‌ಗಳಲ್ಲಿ ದುಡ್ಡು ಸೇಫಾ? ಹೇಗೆ ಹೂಡಿಕೆ ಮಾಡಬೇಕು ಇತ್ಯಾದಿ ಅಂಶಗಳನ್ನು 38 ಅಧ್ಯಾಯಗಳಲ್ಲಿ ಪುಸ್ತಕವನ್ನು ರಚಿಸಲಾಗಿದೆ.
ಈ ಪುಸ್ತಕದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಬಹುದಾದ ಉದಾಹರಣೆಗಳನ್ನು ವಿವರಿಸಲಾಗಿದೆ. ಮ್ಯೂಚುವಲ್ ಫಂಡ್‌ಗಳಲ್ಲಿ ರಿಸ್ಕ್ ಇದೆಯೇ? ಇದ್ದರೆ ಎಷ್ಟಿದೆ? ಇದರಲ್ಲಿ ಏನು ಮಾಡಬೇಕು-ಏನು ಮಾಡಬಾರದು ಎಂಬುದನ್ನು ವಿವರಿಸಲಾಗಿದೆ.