Site icon Vistara News

Small Business : ಹೊಸ ಸಣ್ಣ ಬಿಸಿನೆಸ್‌ ಆರಂಭಿಸುವುದು ಹೇಗೆ?

business

ಸ್ವಂತ ಬಿಸಿನೆಸ್‌ ಆರಂಭಿಸುವುದು ಅನೇಕ ಮಂದಿಯ ಕನಸಾಗಿರುತ್ತದೆ. ( Small Business ) ಹೀಗಿದ್ದರೂ, ಅದನ್ನು ಆರಂಭಿಸುವುದು ಹೇಗೆ ಎಂಬ ಪ್ರಶ್ನೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಮೊದಲನೆಯದಾಗಿ ನೀವು ಯಾಕೆ ಸಣ್ಣ ಬಿಸಿನೆಸ್‌ ಆರಂಭಿಸಬೇಕು? ಎನ್ನುವ ಆಲೋಚನೆ ಅಗತ್ಯ. ಇದರಿಂದಾಗಿ ನೀವು ಹಣಕಾಸು ಸ್ವಾತಂತ್ರ್ಯ ಗಳಿಸಬಹುದು. ನಿಮ್ಮ ಪ್ಯಾಷನ್‌ ಅಥವಾ ಅಭಿರುಚಿಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ದುಡಿದು ಹಣ ಮತ್ತು ನೆಮ್ಮದಿಯನ್ನು ಗಳಿಸಬಹುದು. ಜನರ ನಾನಾ ಸಮಸ್ಯೆಗಳಿಗೆ ಹೊಸ ಉತ್ಪನ್ನ ಅಥವಾ ಸೇವೆಗಳನ್ನು ಪರಿಚಯಿಸುವ ಮೂಲಕ ಪರಿಹಾರ ನೀಡಬಹುದು. ನಿಮ್ಮ ಮನೆಯಿಂದಲೇ ಅಥವಾ ಅಂಗಳದಿಂದಲೇ ಸಣ್ಣ ಬಿಸಿನೆಸ್‌ ಶುರು ಮಾಡಬಹುದು. ನಿಮ್ಮ ಬಿಸಿನೆಸ್‌ಗೆ ನೀವೇ ಮಾಲೀಕರಾಗಬಹುದು. ಸರ್ಕಾರ ಎಂಎಸ್‌ಎಂಇ ವಲಯಕ್ಕೆ ನೀಡುವ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು. ನಿಮ್ಮ ಸಮಯವನ್ನು ನೀವೇ ನಿರ್ವಹಿಸಬಹುದು. ಪ್ರೊಫೆಷನಲ್‌ ಲೈಫ್‌ ಮತ್ತು ಪರ್ಸನಲ್‌ ಲೈಫ್‌ ನಡುವೆ ಬ್ಯಾಲೆನ್ಸ್‌ ಮಾಡಿಕೊಳ್ಳಬಹುದು.

ಹಾಗಾದರೆ ಸಣ್ಣ ಬಿಸಿನೆಸ್‌ ಮಾಡಬೇಕಿದ್ದರೆ ಏನೆಲ್ಲ ಬೇಕು? ಎಲ್ಲಕ್ಕಿಂತ ಮೊದಲು ಬಿಸಿನೆಸ್‌ ಐಡಿಯಾ ಬೇಕು. ನಿಮ್ಮ ಅಭಿರುಚಿ, ಆಸಕ್ತಿಯ ಬಿಸಿನೆಸ್‌ ಆಯ್ಕೆ ಮಾಡಿಕೊಳ್ಳಿ. ಬಳಿಕ ನಿಮ್ಮ ಕಸ್ಟಮರ್‌ ಬೇಸ್‌, ಮಾರ್ಕೆಟ್‌ ಸ್ಟ್ರಾಟಜಿ, ಬಿಸಿನೆಸ್‌ ಪ್ಲಾನ್‌, ಬಂಡವಾಳದ ಬಗ್ಗೆ ನಿರ್ಧರಿಸಿ.

ಬಿಸಿನೆಸ್‌ಗೆ ಬೇಕಾಗುವ ಫಂಡ್‌ ಗಳಿಸುವುದು ಕೂಡ ನಿರ್ಣಾಯಕ. ಅಗತ್ಯವಿರುವ ಹಣದ ಅಂದಾಜು ಮೊತ್ತವನ್ನು ನಿರ್ಧರಿಸಿದ ಬಳಿಕ, ಅದನ್ನು ಹೇಗೆ ಹೊಂದಿಸಿಕೊಳ್ಳಬಹುದು ಎಂದೂ ಆಲೋಚಿಸಿ. ಅಗತ್ಯ ಫಂಡ್‌ನ ಕೊರತೆ ಇದ್ದರೆ ಯಾವ ಮೂಲದಿಂದ ಸಂಗ್ರಹಿಸಬಹುದು ಎಂಬುದನ್ನೂ ಪ್ಲಾನ್‌ ಮಾಡಬೇಕು. ಕ್ರೌಡ್‌ ಫಂಡಿಂಗ್‌, ಏಂಜೆಲ್‌ ಇನ್ವೆಸ್ಟರ್‌ ಇತ್ಯಾದಿ ಮೂಲಗಳ ಬಗ್ಗೆ ಪರಿಶೀಲಿಸಬೇಕು. ನಿಮ್ಮ ಬಿಸಿನೆಸ್‌ ಅಥವಾ ಬ್ರಾಂಡ್‌ಗೆ ಒಂದು ಹೆಸರನ್ನು ಆಯ್ಕೆ ಮಾಡಿಕೊಳ್ಳಿ. ಇದು ಸುಲಭವಾಗಿ ಹೇಳಲು ಸಾಧ್ಯವಾಗುವಂತೆ ಇದ್ದರೆ ಉತ್ತಮ. ಆದರೆ ಬೇರೆ ಯಾರಾದರೂ ಆ ಹೆಸರನ್ನು ನೋಂದಣಿ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ.

ನೀವು ಆನ್‌ಲೈನ್‌ ಮೂಲಕ ಬಿಸಿನೆಸ್‌ ಆರಂಭಿಸುವುದಿದ್ದರೆ ಸ್ಥಳ ಯಾವುದು ಎಂಬುದು ಅಷ್ಟಾಗಿ ಮಹತ್ವ ಪಡೆಯುವುದಿಲ್ಲ. ಆದರೆ ಆಫ್‌ಲೈನ್‌ ಬಿಸಿನೆಸ್‌ ಅಂದರೆ ಸ್ಥಳ ಯಾವುದು ಎನ್ನೋದು ಅತ್ಯಂತ ಮುಖ್ಯವಾಗುತ್ತದೆ. ನೀವು ಹೆಚ್ಚು ಜನ ಸಂಚಾರ ಇರದ ಸ್ಥಳಗಳಲ್ಲಿ ಒಂದು ಟೀ ಅಂಗಡಿಯನ್ನು ಕಡಿಮೆ ಬಾಡಿಗೆಗೆ ಜಾಗ ಪಡೆದು ಮಾಡಬಹುದು. ಆದರೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವುದು ಕಷ್ಟವಾಗಬಹುದು. ಆದರೆ ಬಾಡಿಗೆ ಹೆಚ್ಚಾದರೂ, ಜನ ಸಂಚಾರ ಹೆಚ್ಚು ಇರುವ ಸ್ಥಳದಲ್ಲಿ ಅಂಗಡಿ ತೆರೆದರೆ ಆರಂಭದಿಂದಲೇ ಸುಲಭವಾಗಿ ಹೆಚ್ಚಿನ ವ್ಯವಹಾರ ಮಾಡಬಹುದು. ಹಾಗಂತ ಹಳ್ಳಿ ಕಡೆಗಳಲ್ಲೂ, ಜನ ಸಂಚಾರ ಕಡಿಮೆ ಇರುವ ಪಟ್ಟಣಗಳಲ್ಲೂ ಟೀ ಅಂಗಡಿ ತೆರೆಬಾರದು ಎಂದೇನಿಲ್ಲ. ಆಗ ಹೆಚ್ಚಿನ ಕ್ರಿಯಾಶೀಲತೆಯಿಂದ ಹಾಗೂ ಹೊಸತನದಿಂದ ಗ್ರಾಹಕರನ್ನು ಸೆಳೆಯಬಹುದು. ಇದಕ್ಕೊಂದು ಉದಾಹರಣೆ ಕಲ್ಲಡ್ಕ ಟೀ ಅಥವಾ ಕೇಟಿ. ದಕ್ಷಿಣ ಕನ್ನಡದ ಕಲ್ಲಡ್ಕ ಪಟ್ಟಣದಲ್ಲಿ ಕೇಟಿ ಬಹಳ ಪ್ರಸಿದ್ಧ ಚಹಾ. ಚಹದ ಡಿಕಾಕ್ಷನ್‌ ಅನ್ನು ನಾಜೂಕಿನಿಂದ ಹಾಲಿಗೆ ಬೆರೆಸಿ ನೋಡಲು ಎರಡು ಬಣ್ಣಗಳಿಂದ ಆಕರ್ಷಿಸುತ್ತದೆ ಕೇಟಿ. ರುಚಿಯೂ ಚೆನ್ನಾಗಿರುವುದರಿಂದ ಅದು ಜನಪ್ರಿಯ ಬ್ರಾಂಡ್‌ ಆಗಿ ಬೆಳೆದಿದೆ. ಅಂಥ ಕ್ರಿಯೇಟಿವಿಟಿ ಬೇಕು.

ನಿಮ್ಮ ವ್ಯಾಪಾರವನ್ನು ಅಥವಾ ಸಣ್ಣ ಉದ್ದಿಮೆಯನ್ನು ರಿಜಿಸ್ಟರ್‌ ಮಾಡಿಕೊಳ್ಳುವುದು ಮುಖ್ಯ. ಏಕೆಂದರೆ ಆಗ ಅದು ಔಪಚಾರಿಕ ಮತ್ತು ಕ್ರಮಬದ್ಧ ಬಿಸಿನೆಸ್‌ ಎನ್ನಿಸುತ್ತದೆ. ಹಾಗೂ ಸರ್ಕಾರಗಳ ನಾನಾ ಯೋಜನೆಗಳ ಪ್ರಯೋಜನ ಪಡೆಯಲು, ಬ್ಯಾಂಕ್‌ ಸಾಲ ಗಳಿಸಲು ಅನುಕೂಲವಾಗುತ್ತದೆ. ನೀವು ಕಿರಾಣಾ ಅಂಗಡಿ ಆರಂಭಿಸುವುದಿದ್ದರೆ ಶಾಪ್‌ ಆಂಡ್‌ ಎಸ್ಟಾಬ್ಲಿಷ್‌ಮೆಂಟ್‌ ಲೈಸೆನ್ಸ್‌, ಟ್ರೇಡ್‌ ಲೈಸೆನ್ಸ್‌, ಲೀಸ್‌ ಅಗ್ರಿಮೆಂಟ್‌, ಎಫ್‌ಎಸ್‌ಎಸ್‌ಎಐ ಲೈಸೆನ್ಸ್ ಪಡೆಯುವುದು ಮುಖ್ಯ. ನಿಮ್ಮ ವಾರ್ಷಿಕ ವಹಿವಾಟು 20 ಲಕ್ಷ ರೂ.ಗಿಂತ ಹೆಚ್ಚು ಇದ್ದರೆ 15 ಅಂಕಿಗಳ ಜಿಎಸ್‌ಟಿ ಐಡೆಂಟಿಫಿಕೇಶನ್‌ ನಂಬರ್‌ ಸಂಪಾದಿಸುವುದು ಕಡ್ಡಾಯ. ‌

ನಿಮ್ಮ ಉದ್ದಿಮೆಯನ್ನು ಹೆಚ್ಚು ವ್ಯವಸ್ಥಿತಗೊಳಿಸಲು ವೆಬ್‌ ಸೈಟ್‌ ಹೊಂದಬಹುದು. ಜತೆಗೆ ಮಾರುಕಟ್ಟೆ ಕಾರ್ಯತಂತ್ರಗಳ ಬಗ್ಗೆಯೂ ಆಲೋಚಿಸಿ. ನಿಮ್ಮ ಗ್ರಾಹಕರ ನೆಲೆಯ ಬಗ್ಗೆ ಅಧ್ಯಯನ ನಡೆಸಿ. ಮಾರುಕಟ್ಟೆ ಟ್ರೆಂಡ್‌ ಬಗ್ಗೆ ಸಂಶೋಧನೆ ನಡೆಸಿ. ಉತ್ತಮ ಫೈನಾನ್ಸ್‌ ಪ್ಲಾನ್‌ ಅನ್ನು ಮಾಡಿಕೊಳ್ಳಿ. ಬಿಸಿನೆಸ್‌ ಬೆಳೆಯುತ್ತಿದ್ದಂತೆ ಒಂದು ಒಳ್ಳೆಯ ಕೆಲಸಗಾರರ ಟೀಮ್‌ ಕಟ್ಟಿಕೊಳ್ಳುವುದು ಕೂಡ ಮುಖ್ಯ.

ಇದನ್ನೂ ಓದಿ : Suburban Rail: ಬೆಂಗಳೂರು ಉಪನಗರ ರೈಲು; ಜರ್ಮನಿಯ ಬ್ಯಾಂಕ್‌ ಜತೆ ಕೆ-ರೈಡ್‌ ಒಪ್ಪಂದ

ಯಾವತ್ತೂ ಸಣ್ಣ ಬಂಡವಾಳದಲ್ಲಿ ಹೂಡಿಕೆ ಮಾಡುವುದರಿಂದ ಸಂಭವನೀಯ ಹಣಕಾಸು ನಷ್ಟದ ರಿಸ್ಕ್‌ ಕಡಿಮೆಮಾಗುತ್ತದೆ. ಮಾರುಕಟ್ಟೆಯ ಲಯವನ್ನು ಕಂಡು ಹಿಡಿದ ಬಳಿಕ ಹೆಚ್ಚು ಹೂಡಿಕೆ ಮಾಡುವುದು ಉತ್ತಮ. ಕೊನೆಯದಾಗಿ ಹೊಸ ಐಡಿಯಾಗಳನ್ನು ಗ್ರಾಹಕರಿಗೆ ಪರಿಚಯಿಸಿ. ಉದಾಹರಣೆಗೆ ಬಾಳೆ ಹಣ್ಣನ್ನು ಹಾಗೆಯೇ ಮಾರಾಟ ಮಾಡುವುದರ ಜತೆಗೆ ಒಣಗಿಸಿ ಡ್ರೈ ಫ್ರುಟ್‌ ಆಗಿ ಮಾರಾಟ ಮಾಡಿದರೆ, ಬಾಳೆ ಹಣ್ಣು ಕೊಳೆತು ನಷ್ಟವಾಗುವುದನ್ನೂ ತಪ್ಪಿಸಬಹುದು. ಬೆಂಗಳೂರಿನಲ್ಲಿ ರಾಮೇಶ್ವರಂ ಎಂಬ ಹೆಸರಿನ ಹೋಟೆಲ್‌ ಅಲ್ಪಾವಧಿಯಲ್ಲಿಯೇ ಜನಪ್ರಿಯವಾಗಿದೆ. ಅಲ್ಲಿಯೂ ಇಡ್ಲಿ-ಸಾಂಬಾರ್‌, ಚಟ್ನಿ, ಪೂರಿ ಸಾಗು, ಪೊಂಗಲ್‌ ಕೊಡುತ್ತಾರೆ. ಆದರೂ ರಾಮೇಶ್ವರಂ ಕೆಫೆ ಪ್ರತಿ ತಿಂಗಳು ಕೋಟ್ಯಂತರ ರೂ. ವಹಿವಾಟಯ ನಡೆಸುತ್ತಿದೆ. ಅಲ್ಲಿ ಜನ ಜಾತ್ರೆಗೆ ಬಂದಂತೆ ಕಿಕ್ಕಿರಿಯುತ್ತಾರೆ. ಏಕೆಂದರೆ ಸಾಂಪ್ರದಾಯಿಕ ತಿಂಡಿಗಳಿಗೆ ರಾಮೇಶ್ವರಂ ಕೆಫೆಯಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಹೊಸ ಟಚ್‌ ನೀಡಿದೆ. ಕೆಫೆಯ ಹೆಸರೂ ಆಕರ್ಷಿಸುತ್ತದೆ. ಗ್ರಾಹಕರಿಗೆ ಭಿನ್ನ ಅನುಭವವನ್ನು ನೀಡುವಲ್ಲಿ ರಾಮೇಶ್ವರಂ ಕೆಫೆ ಯಶಸ್ವಿಯಾಗಿದೆ. ಇಂಥ ಸೃಜನಶೀಲ ಐಡಿಯಾಗಳು ವ್ಯಾಪಾರವನ್ನು ಹೆಚ್ಚಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

Exit mobile version