ಬೆಂಗಳೂರು: ಎಚ್‌ಎಸ್‌ಬಿಸಿ ಇಂಡಿಯಾ ಬ್ಯಾಂಕ್‌ನ (HSBC INDIA) ಬ್ರಾಂಡ್ ರಾಯಭಾರಿಯಾಗಿ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ನೇಮಕವಾಗಿದ್ದಾರೆ. ಎಚ್‌ಎಸ್‌ಬಿಸಿ ಇಂಡಿಯಾ ಸಂಸ್ಥೆಯು ಕೊಹ್ಲಿ ಜತೆಗೆ ಈ ಬಗ್ಗೆ ಒಪ್ಪಂದ ಮಾಡಿಕೊಂಡಿದೆ.
ವಿರಾಟ್ ಕೊಹ್ಲಿ ಅವರು ಕ್ರೀಡೆಯಲ್ಲಿ ಉತ್ಕೃಷ್ಟತೆ, ವಿಶ್ವಾಸಾರ್ಹತೆ ಮತ್ತು ನಂಬಿಕೆಗೆ ಹೆಸರುವಾಸಿಯಾಗಿದ್ದಾರೆ. ಎಚ್‌ಎಸ್‌ಬಿಸಿ ಇಂಡಿಯಾ ಕೂಡ ಈ ಎಲ್ಲ ಗುಣಗಳನ್ನು ಹೊಂದಿದೆ. ಆದ್ದರಿಂದ ಅವುಗಳನ್ನು ಬಿಂಬಿಸಲು ಕೊಹ್ಲಿ ಅವರು ಸಮರ್ಥ ರಾಯಭಾರಿಯಾಗಿದ್ದಾರೆ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಸಿಇಒ ಹಿತೇಂದ್ರ ದವೆ ಅವರು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದ ಹಣಕಾಸು ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ಎಚ್‌ಎಸ್‌ಬಿಸಿ ಜತೆಗೆ ಸಹಭಾಗಿತ್ವ ಮಾಡಿಕೊಳ್ಳುವುದಕ್ಕೆ ಸಂತಸವಾಗುತ್ತಿದೆ. ಎಚ್‌ಎಸ್‌ಬಿಸಿ ಸಂಸ್ಥೆಯು ಭಾರತದಲ್ಲಿ ಹಣಕಾಸು ಶಿಸ್ತು ಮತ್ತು ಬದ್ಧತೆಯನ್ನು ಒಳಗೊಂಡಿರುವ ಸಂಸ್ಥೆಯಾಗಿದೆ ಎಂದರು.
ಎಚ್‌ಎಸ್‌ಬಿಸಿ ಇಂಡಿಯಾದ ಪರ್ಸನಲ್ ಬ್ಯಾಂಕಿಂಗ್ ವಿಭಾಗದ ಸಂದೀಪ್ ಬಾತ್ರಾ ಅವರು ಮಾತನಾಡಿ, ಕ್ರಿಕೆಟ್ ಇಡಿ ದೇಶವನ್ನು ಒಗ್ಗೂಡಿಸುತ್ತದೆ. ಭಾವನಾತ್ಮಕವಾಗಿಯೂ ಜಗತ್ತಿನಾದ್ಯಂತ ಭಾರತೀಯರನ್ನು ಒಂದುಗೂಡಿಸುತ್ತದೆ. ವಿರಾಟ್ ಕೊಹ್ಲಿ ಜತೆಗೆ ನಮ್ಮ ಸಹಭಾಗಿತ್ವ ಕೂಡ ಶಿಸ್ತು ಮತ್ತು ಬದ್ಧತೆಯನ್ನು ಬಿಂಬಿಸಿದೆ ಎಂದರು.
ಎಚ್‌ಎಸ್‌ಬಿಸಿ ವಿದೇಶಿ ಮೂಲದ ಬ್ಯಾಂಕ್ ಆಗಿದ್ದು, 1983ರಿಂದ ಭಾರತದಲ್ಲೂ ಕಾರ್ಯನಿರ್ವಹಿಸುತ್ತಿದೆ. 2018 ಜೂನ್ ವೇಳೆಗೆ 36,000 ಉದ್ಯೋಗಿಗಳನ್ನು ಒಳಗೊಂಡಿತ್ತು.