ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣವು ಸೌರ ಶಕ್ತಿಯನ್ನು ವ್ಯಾಪಕವಾಗಿ ಬಳಸುತ್ತಿದ್ದು, ತನ್ನ ಆವರಣದಲ್ಲಿ 8 ಮೆಗಾವ್ಯಾಟ್ ಸೌರ ವಿದ್ಯುತ್ ಘಟಕವನ್ನು ಅಳವಡಿಸಿದೆ. (Hubballi Airport) ಹೀಗಾಗಿ ರಾಜ್ಯದ ಮೊದಲ ಗ್ರೀನ್ ಏರ್‌ಪೋರ್ಟ್ ಎನ್ನಿಸಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಉತ್ಪಾದನೆಯಗುವ ಸೌರ ಶಕ್ತಿ ಮೂಲದ ವಿದ್ಯುತ್, ಆರು ಏರ್‌ಪೋರ್ಟ್‌ಗಳ ಬಳಕೆಗೆ ಸಾಕಾಗುತ್ತದೆ. 2030ರ ವೇಳೆಗೆ 50 ಪರ್ಸೆಂಟ್ ಇಂಧನವನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಪಡೆಯಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಆಕಾಂಕ್ಷೆಗೆ ಇದು ಪೂರಕವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಟ್ವೀಟ್ ಮಾಡಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಲು 43 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. 38 ಎಕರೆ ಪ್ರದೇಶದಲ್ಲಿ ಇದನ್ನು ವ್ಯವಸ್ಥೆಗೊಳಿಸಲಾಗಿದೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಹುಬ್ಬಳ್ಳಿ ಏರ್ ಪೋರ್ಟ್ ಜತೆಗೆ ಬೆಳಗಾವಿ, ಮೈಸೂರು, ಬಳ್ಳಾರಿ ರಾಡಾರ್ ಸ್ಟೇಷನ್‌ಗೆ ಕೂಡ ಪೂರೈಸಲಾಗುವುದು.