ನವ ದೆಹಲಿ: ಐಟಿ ದಿಗ್ಗಜ ಐಬಿಎಂ ತನ್ನ ಉದ್ಯೋಗಿಗಳಿಗೆ ಮೂನ್‌ಲೈಟಿಂಗ್ (Moonlighting) ವಿರುದ್ಧ ಎಚ್ಚರಿಕೆ ನೀಡಿದೆ.
ಇದರಿಂದ ಗ್ರಾಹಕರ ಆಸ್ತಿ ಹಾಗೂ ನಿರ್ಣಾಯಕ ಡೇಟಾಗಳ ಸುರಕ್ಷತೆಗೆ ಧಕ್ಕೆಯಾಗುವ ಅಪಾಯ ಇದೆ ಎಂದು ಐಬಿಎಂ ಕಳವಳ ವ್ಯಕ್ತಪಡಿಸಿದೆ. ಐಬಿಎಂನ ಉದ್ಯೋಗಿ ಕಚೇರಿಯ ಹೊರತಾದ ಸಮಯದಲ್ಲಿ ತಮ್ಮದೇ ಆದ ಕೆಲಸಗಳನ್ನು ಮಾಡುವಾಗ, ಅವರ ಚಟುವಟಿಕೆಗಳು ಕಂಪನಿಯ ಹಿತಾಸಕ್ತಿಗೆ ಧಕ್ಕೆಯಾಗುವಂತಿರಕೂಡದು ಎಂದು ಐಬಿಎಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್ ತಿಳಿಸಿದ್ದಾರೆ.
ಐಟಿ ಕ್ಷೇತ್ರದಲ್ಲಿ ಮೂನ್‌ಲೈಟಿಂಗ್ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ವೇಳೆಯಲ್ಲಿ ಐಬಿಎಂ ಈ ಸ್ಪಷ್ಟನೆಯನ್ನು ನೀಡಿದೆ. ಭಾರತದಲ್ಲಿ ಟೆಕ್ಕಿಗಳು ತಮ್ಮ ನಿಯಮಿತ ಉದ್ಯೋಗದ ಜತೆಗೆ ಇತರ ಉದ್ಯೋಗವನ್ನೂ ಮಾಡುತ್ತಿರುವುದರ ಬಗ್ಗೆ ಕಾರ್ಪೊರೇಟ್ ವಲಯದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಕೆಲವು ಕಂಪನಿಗಳು ಈ ಟ್ರೆಂಡ್ ಅನ್ನು ಅಂಗೀಕರಿಸಿದ್ದರೆ, ಮತ್ತೆ ಹಲವು ಕಂಪನಿಗಳು ವಿರೋಧಿಸಿವೆ.
ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವುದು ಕಂಪನಿಯ ಆದ್ಯತೆಯಾಗಿದೆ. ಡೇಟಾ ಸಿಸ್ಟಮ್‌ನ ಸುರಕ್ಷತೆ ಕೂಡ ಅಷ್ಟೇ ಮುಖ್ಯವಾಗಿದೆ. ಮೂನ್‌ಲೈಟಿಂಗ್‌ನಿಂದ ಇದಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಐಬಿಎಂ ತನ್ನ ಉದ್ಯೋಗಿಗಳಿಗೆ ತಿಳಿಸಿದೆ. ಐಬಿಎಂ ಭಾರತದಲ್ಲಿ 140,000 ಉದ್ಯೋಗಿಗಳನ್ನು ಒಳಗೊಂಡಿದೆ.