ಮುಂಬಯಿ: ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ (ICICI Bank) 2022-23 ಸಾಲಿನ ಅಂತಿಮ ಡಿವಿಡೆಂಡ್ ಅನ್ನು ಸೋಮವಾರ ಘೋಷಿಸಿದೆ. ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ ಬ್ಯಾಂಕ್ 9,852 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಆಡಳಿತ ಮಂಡಳಿಯು 2 ರೂ. ಮುಖಬೆಲೆಯ ಷೇರಿಗೆ 400% ಅಂತಿಮ ಡಿವಿಡೆಂಡ್ (dividend) ಘೋಷಿಸಿದೆ. ಅಂದರೆ ಪ್ರತಿ ಷೇರಿಗೆ 8 ರೂ. ಸಿಗಲಿದೆ.
ಐಸಿಐಸಿಐ ಬ್ಯಾಂಕ್ ಕಳೆದ 2021-22ರಲ್ಲಿ ಪ್ರತಿ ಷೇರಿಗೆ 5 ರೂ. ಡಿವಿಡೆಂಡ್ ಅನ್ನು ನೀಡಿತ್ತು. ಐಸಿಐಸಿಐ ಬ್ಯಾಂಕ್ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳ ಬಡ್ಡಿ ದರದಲ್ಲಿ 0.25%ರಿಂದ 0.50% ತನಕ ಏರಿಸಿದೆ. ಬ್ಯಾಂಕ್ ಈಗ 7 ದಿನಗಳಿಂದ 10 ವರ್ಷ ತನಕದ ನಿಶ್ಚಿತ ಅವಧಿಯ ಠೇವಣಿಗಳಿಗೆ ವಾರ್ಷಿಕ 3.5%ರಿಂದ 7.10% ತನಕ ಸಾಮಾನ್ಯ ನಾಗರಿಕರಿಗೆ ಬಡ್ಡಿ ನೀಡುತ್ತದೆ.
ವೆಬ್‌ಸೈಟ್ ಪ್ರಕಾರ ಹಿರಿಯ ನಾಗರಿಕರಿಗೆ ಬ್ಯಾಂಕ್ 0.5% ಹೆಚ್ಚು ಬಡ್ಡಿ ನೀಡುತ್ತದೆ. ಆರ್‌ಬಿಐ ಇತ್ತೀಚೆಗೆ ರೆಪೊ ದರವನ್ನು ಏರಿಸಿದ ಬಳಿಕ ಬ್ಯಾಂಕ್‌ಗಳು ಎಫ್‌ಡಿ ಬಡ್ಡಿಯನ್ನು ಪರಿಷ್ಕರಿಸಿವೆ. ಫೆಬ್ರವರಿ 8ರಂದು ರೆಪೊ ದರವನ್ನು 6.25%ರಿಂದ 6.50%ಕ್ಕೆ ಏರಿಸಲಾಗಿತ್ತು. 2022ರ ಮೇಯಿಂದ 2.50% ಏರಿಸಲಾಗಿದೆ. ಐಸಿಐಸಿಐ ಬ್ಯಾಂಕ್‌ನಲ್ಲಿ ಸಾಮಾನ್ಯ ನಾಗರಿಕರಿಗೆ 15-18 ತಿಂಗಳಿನಿಂದ 2 ವರ್ಷ ತನಕದ ಠೇವಣಿಗೆ 7.10% ಬಡ್ಡಿ ನೀಡಲಾಗುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ವ್ಯವಸ್ಥಿತ ಮಹತ್ವದ ಬ್ಯಾಂಕ್‌ಗಳ ಪಟ್ಟಿಯನ್ನು (Domestic Systemically Important Banks-D-SIBs) ಬಿಡುಗಡೆಗೊಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಿತ ಮಹತ್ವದ ಬ್ಯಾಂಕ್‌ಗಳು ಎಂದು ಆರ್‌ಬಿಐ ತಿಳಿಸಿದೆ. ಆರ್‌ಬಿಐ 2014ರ ಜುಲೈನಿಂದ ಈ ಕುರಿತ ಚೌಕಟ್ಟನ್ನು ಬಿಡುಗಡೆಗೊಳಿಸಿದೆ.
ಏನಿದರ ಮಹತ್ವ? ದೇಶೀಯವಾಗಿ ವ್ಯವಸ್ಥಿತ ಮತ್ತು ಮಹತ್ವದ ಬ್ಯಾಂಕ್‌ಗಳು ಅತಿ ದೊಡ್ಡ ಹಣಕಾಸು ಸಂಸ್ಥೆಗಳಾಗಿದ್ದು, ಅವುಗಳು ಪತನವಾಗಲು ಬಿಡಲಾಗುವುದಿಲ್ಲ. ಏಕೆಂದರೆ ಯಾವುದೇ ಮಹತ್ವದ ಬ್ಯಾಂಕ್ ಪತನವಾದರೆ, ಆರ್ಥಿಕ ವ್ಯವಸ್ಥೆಗೆ ಹಾನಿ ಸಂಭವಿಸುತ್ತದೆ. ಜನ ಭೀತರಾಗುತ್ತಾರೆ.