ಬೆಂಗಳೂರು: ಮೊದಲೇ ಪ್ಯಾಕ್ ಮಾಡಿದ ಆಹಾರ ಧಾನ್ಯ, ಹಾಲು, ಮೊಸರು, ಮಜ್ಜಿಗೆ, ಲಸ್ಸಿಯ ಮೇಲೆ ಜಿಎಸ್‌ಟಿ ಮಂಡಳಿ ಈ ಹಿಂದೆ ಇದ್ದ ವಿನಾಯಿತಿಯನ್ನು ರದ್ದುಪಡಿಸಿ ಜುಲೈ ೧೮ರಿಂದ ೫% ಜಿಎಸ್‌ಟಿ ವಿಧಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಎಂಎಫ್, ಜಿಎಸ್‌ಟಿ ಏರಿಕೆಯ ನೆಪದಲ್ಲಿ ಮಜ್ಜಿಗೆಯ ದರವನ್ನು ೧೪% ಏರಿಸಿದೆ. ಲೆಕ್ಕ ತಿಳಿಯದ ಜನರನ್ನು ಕೆಎಂಎಫ್ ಸುಲಭವಾಗಿ ಬೆಪ್ಪುಗೊಳಿಸಿದೆ ಎಂದು ಆರ್ಥಿಕ ತಜ್ಞರು ಖಂಡಿಸಿದ್ದಾರೆ.
ಆಗಿದ್ದೇನು? ಚಂಡೀಗಢದಲ್ಲಿ ಇತ್ತೀಚೆಗೆ ನಡೆದ ಜಿಎಸ್‌ಟಿ ಮಂಡಳಿಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರಕಾರ ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುವ ಹಾಲು, ಮೊಸರು, ಮಜ್ಜಿಗೆ, ಲಸ್ಸಿಗೆ ಈ ಹಿಂದಿನ ವಿನಾಯಿತಿ ರದ್ದಾಗಿದೆ. ಹಾಗೂ ೫% ತೆರಿಗೆ ಜುಲೈ ೧೮ರಿಂದ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನಂದಿನಿ ಬ್ರ್ಯಾಂಡ್‌ನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಕೆಎಂಎಫ್, ಹಾಲನ್ನು ಹೊರತುಪಡಿಸಿ, ಮೊಸರು, ಮಜ್ಜಿಗೆ, ಲಸ್ಸಿಯ ಮೇಲಿನ ದರವನ್ನು ಹೆಚ್ಚಿಸಿತ್ತು. ಆದರೆ ಜನಾಕ್ರೋಶಕ್ಕೆ ಮಣಿದು ಬಳಿಕ ದರವನ್ನು ಕಡಿತಗೊಳಿಸಿತ್ತು. ಇಷ್ಟಾದರೂ, ೫% ಜಿಎಸ್‌ಟಿಗಿಂತಲೂ ಹೆಚ್ಚಿನ ದರವನ್ನು ಮುಂದುವರಿಸಿರುವುದಕ್ಕೆ ಆರ್ಥಿಕ ತಜ್ಞರು ತೀವ್ರವಾಗಿ ವಿರೋಧಿಸಿದ್ದಾರೆ.
ಜಿಎಸ್‌ಟಿ ಏರಿಕೆಗಿಂತ ಹೆಚ್ಚಿನ ದರ ಅಕ್ಷಮ್ಯ: ರಂಗಸ್ವಾಮಿ ಮೂಕನಹಳ್ಳಿ
” ವಾಸ್ತವವಾಗಿ ೫% ಜಿಎಸ್‌ಟಿ ಹೆಚ್ಚಳವಾಗಿದೆ. ಆದರೆ ನಂದಿನಿ ಮೊಸರಿನ ಬೆಲೆಯಲ್ಲಿ ೯.೦೯% ಹೆಚ್ಚಳವಾಗಿದೆ. ಮಜ್ಜಿಗೆಯ ಮೇಲೆ ೭ ರೂ. ಇದ್ದ ದರವನ್ನು ೮ ರೂ.ಗೆ ಏರಿಸಿದರು. ಅಂದರೆ ೧೪ ಪರ್ಸೆಂಟ್ ಹೆಚ್ಚಿಸಿದರು. ಜಿಎಸ್‌ಟಿ ಇನ್‌ಪುಟ್ ಕ್ರೆಡಿಟ್ ತೆಗೆದುಕೊಂಡ ಬಳಿಕ, ಬೆಲೆ ಏರಿಸಿದರೂ, ಕೇವಲ ೧ ಅಥವಾ ಎರಡು ಪರ್ಸೆಂಟ್‌ನಷ್ಟು ಮಾತ್ರ ವೃದ್ಧಿಸಬಹುದು. ಆದರೆ ಈಗ ಉಂಟಾಗಿರುವ ಬೆಲೆ ಏರಿಕೆ ಅಕ್ಷಮ್ಯʼʼ ಎಂದು ಆರ್ಥಿಕ ತಜ್ಞರಾದ ರಂಗಸ್ವಾಮಿ ಮೂಕನಹಳ್ಳಿ ಹೇಳಿದ್ದಾರೆ.
ದರ ಕಡಿತದ ಬಳಿಕವೂ ೭% ಹೆಚ್ಚಳ: ಮಜ್ಜಿಗೆಯ ದರವನ್ನು ಜಿಸ್‌ಟಿ ನೆಪದಲ್ಲಿ ೭ ರೂ.ಗಳಿಂದ ೮ ರೂ.ಗೆ ಏರಿಸಿದ ಬಳಿಕ ಜನಾಕ್ರೋಶದ ಪರಿಣಾಮ ೭.೫೦ ರೂ.ಗೆ ಇಳಿಸಿದರು. ಆದರೆ ಈಗಲೂ ೫೦ ಪೈಸೆ ಏರಿಕೆ ಎಂದರೆ ೭% ಹೆಚ್ಚಳ ಆದಂತಾಯಿತು. ಜಿಎಸ್‌ಟಿ ಹಾಕಿರುವುದೇ ೫%. ಹಾಗಾದರೆ ಮತ್ತೆ ಎರಡು ಪರ್ಸೆಂಟ್ ಹೆಚ್ಚುವರಿ ತೆಗೆದುಕೊಳ್ಳುವುದು ಅನ್ಯಾಯವಲ್ಲವೇ ಎಂದು ರಂಗಸ್ವಾಮಿ ಮೂಕನ ಹಳ್ಳಿ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ನಾವು ಎಲ್ಲಿಯವರೆಗೆ ಯೋಚಿಸುವುದಿಲ್ಲ, ಅಲ್ಲಿಯವರೆಗೆ ಇಂಥ ಸುಲಿಗೆ ತಪ್ಪುವುದಿಲ್ಲ ಎನ್ನುತ್ತಾರೆ ಅವರು.
ಧಾನ್ಯಗಳಲ್ಲೂ ಅತಾರ್ಕಿಕ ದರ ಹೆಚ್ಚಳ ಸಂಭವ: ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಸ್ಥೆ ಇರುವುದರಿಂದ ಜಿಎಸ್‌ಟಿ ದರದ ಶೇಕಡಾವಾರು ಏರಿಕೆಯಷ್ಟೇ ದರವನ್ನು ಮಾರಾಟಗಾರರು ಕೂಡ ಏರಿಸಬೇಕಾದ ಅಗತ್ಯ ಇರುವುದಿಲ್ಲ. ಒಂದು ವೇಳೆ ಏರಿಸಿದರೆ ಅದು ಲಾಭಕೋರತನವಾಗುತ್ತದೆ. ಮೊಸರು, ಮಜ್ಜಿಗೆ ಮಾತ್ರವಲ್ಲದೆ, ಅಕ್ಕಿ, ಗೋಧಿ, ರಾಗಿ ಮೊದಲಾದ ಪ್ರಿ-ಪ್ಯಾಕೇಜ್ಡ್ ಆಹಾರ ವಸ್ತುಗಳಿಗೂ ೫% ಜಿಎಸ್‌ಟಿ ಅನ್ವಯವಾಗಿರುವುದರಿಂದ, ಅವುಗಳ ದರ ಏರಿಕೆಯ ವೇಳೆಯೂ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಲೆಕ್ಕಿಸದೆ ೫% ಅಥವಾ ಹೆಚ್ಚು ದರ ವಸೂಲು ಮಾಡುವ ಸಾಧ್ಯತೆ ಮಾರುಕಟ್ಟೆಯಲ್ಲಿ ಇದೆ ಎನ್ನುತ್ತಾರೆ ವಾಣಿಜ್ಯ ತೆರಿಗೆ ತಜ್ಞರು.