Site icon Vistara News

ವಿಸ್ತಾರ Money Guide | ನನ್ನ ಬಳಿ 100 ರೂ. ಇದ್ದರೂ, ಇದರಲ್ಲಿ ಹೂಡುವೆ… ಜೆರೋಧಾ ನಿಖಿಲ್‌ ಕಾಮತ್‌ ಸೂತ್ರ!

zerodha nilkhil kamat

ಬೆಂಗಳೂರು ಮೂಲದ ಆನ್‌ಲೈನ್‌ ಬ್ರೋಕರೇಜ್‌ ಕಂಪನಿ ಜೆರೋಧಾ ಷೇರು ಹೂಡಿಕೆದಾರರಿಗೆ ಚಿರಪರಿಚಿತ. ಇದರ ಸಂಸ್ಥಾಪಕರಾದ ನಿಖಿಲ್‌ ಕಾಮತ್‌ (Zerodha Nikhil) ಕೂಡ ಷೇರು ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿದ್ದಾರೆ. (ವಿಸ್ತಾರ Money Guide) ಇತ್ತೀಚಿನ ಸಂದರ್ಶನದಲ್ಲಿ ಅವರು ತಮ್ಮ ಹೂಡಿಕೆಯ ಆಯ್ಕೆಯನ್ನು ವಿವರಿಸಿದ್ದಾರೆ. ಬನ್ನಿ, ಅವರೇನು ಹೇಳ್ತಾರೆ ಅಂತ ನೋಡೋಣ.

ಅಮೆರಿಕದ ಷೇರು ವಿನಿಮಯ ಕೇಂದ್ರ ನಾಸ್‌ ಡಾಕ್‌ ಮತ್ತು ಭಾರತದಲ್ಲಿ ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮಾರ್ಕೆಟ್‌ ತಮ್ಮ ಅಚ್ಚುಮೆಚ್ಚಿನ ಹೂಡಿಕೆಯ ಆಯ್ಕೆಯಾಗಿದೆ ಎನ್ನುತ್ತಾರೆ ನಿಖಿಲ್‌ ಕಾಮತ್ (Zerodha Nikhil).‌

ನನ್ನ ಕೈಯಲ್ಲಿ 100 ರೂ. ಇದ್ದರೂ, ನಾಸ್‌ ಡಾಕ್‌ ಮತ್ತು ಭಾರತೀಯ ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುತ್ತೇನೆ ಎನ್ನುತ್ತಾರೆ ಅವರು.

ಅವರು ಇದನ್ನು ವಿವರಿಸುವುದು ಹೀಗೆ- ಜಗತ್ತಿನಲ್ಲಿಂದು ನಡೆಯುತ್ತಿರುವ ಸಾಕಷ್ಟು ಆವಿಷ್ಕಾರಗಳು ನಾಸ್‌ಡಾಕ್‌ನಲ್ಲಿ ನೋಂದಣಿಯಾಗಿರುವ ಕಂಪನಿಗಳಿಂದ ನಡೆಯುತ್ತಿವೆ. ಖಾಸಗಿ ಮಾರುಕಟ್ಟೆಗೆ ಹೋಲಿಸಿದರೆ ಪಬ್ಲಿಕ್‌ ಮಾರುಕಟ್ಟೆಯೇ ಅಗ್ಗ. ಹೀಗಾಗಿ ಪಬ್ಲಿಕ್‌ ಮಾರುಕಟ್ಟೆಯಲ್ಲಿನ ಹೂಡಿಕೆ ನನಗಿಷ್ಟ ಎನ್ನುತ್ತಾರೆ ಅವರು.

ದೀರ್ಘಕಾಲೀನ ದೃಷ್ಟಿ ಅಗತ್ಯ: ಷೇರು ಪೇಟೆಯಲ್ಲಿ ಹೂಡಿಕೆ ಮಾಡುವವರು ಒಂದು ಅಥವಾ ಎರಡು ವರ್ಷಗಳ ಸೀಮಿತ ಚೌಕಟ್ಟಿನಲ್ಲಿ ನೋಡಬಾರದು. ಅಲ್ಪಾವಧಿಯ ಹೂಡಿಕೆ ಲಾಭದಾಯಕವಲ್ಲ ಎನ್ನುವುದು ಕಾಮತರ ಮೊದಲನೆಯ ಸೂತ್ರ. 20-30 ವರ್ಷಗಳ ದೀರ್ಘಕಾಲೀನ ಹೂಡಿಕೆ ಪ್ಲಾನ್‌ ಉತ್ತಮ. ಇದರಿಂದ ಆದಾಯ ಗಳಿಸಬಹುದು ಎಂಬುದು ಅವರ ನೀತಿ.

ಎರಡನೆಯದಾಗಿ, ಹೂಡಿಕೆಯ 100% ಹಣವನ್ನೂ ಈಕ್ವಿಟಿ ಒಂದರಲ್ಲಿಯೇ ಹೂಡಿಕೆ ಮಾಡುವುದೂ ಸಮಂಜಸವಾಗದು. ಹೂಡಿಕೆ ವೈವಿಧ್ಯವಾಗಿರಲಿ. ಒಂದೇ ಷೇರಿನಲ್ಲಿ ಹೆಚ್ಚು ಹೂಡಿಕೆಯೂ ಸಲ್ಲದು. ಷೇರು-ಮ್ಯೂಚುವಲ್‌ ಫಂಡ್-ಚಿನ್ನ ಎಂದು ವೈವಿಧ್ಯಮಯ ಹೂಡಿಕೆ ಇರಲಿ ಎನ್ನುತ್ತಾರೆ ನಿಖಿಲ್‌ ಕಾಮತ್.‌

ಮೂರನೆಯದಾಗಿ, 12-15% ಆದಾಯ ನೀಡಬಲ್ಲ ಹೂಡಿಕೆ ಇರಲಿ ಎನ್ನುತ್ತಾರೆ ನಿಖಿಲ್‌ ಕಾಮತ್ (Zerodha Nikhil).‌ ನೀವು ಬ್ಯಾಂಕ್ ಎಫ್‌ಡಿಯಲ್ಲಿ 6-7% ಬಡ್ಡಿ ಪಡೆಯಬಹುದು. ಆದರೆ 12-15% ಪ್ರತಿಫಲ ಸಿಗುವಂತಿರಬೇಕು. ಆಗ ನಿಮ್ಮ ದುಡ್ಡು ಬೆಳೆಯುತ್ತದೆ. ಹೀಗಾಗಿ ಷೇರು, ಮ್ಯೂಚುವಲ್‌ ಫಂಡ್‌ ಮುಖ್ಯವಾಗುತ್ತದೆ ಎನ್ನುತ್ತಾರೆ ಅವರು.

Exit mobile version