Site icon Vistara News

Reliance Jio: ಐಐಟಿ ಬಾಂಬೆ, ಜಿಯೋದಿಂದ ‘ಭಾರತ್ ಜಿಪಿಟಿ’ ಅಭಿವೃದ್ಧಿ

IIT bombay and Reliance jio developing Bharat GPT

ಮುಂಬೈ: “ಭಾರತ್ ಜಿಪಿಟಿ” ಪ್ರೋಗ್ರಾಂ ಆರಂಭಿಸಬೇಕು ಎಂಬ ಉದ್ದೇಶದಿಂದ ಭಾರತದ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಆದ ರಿಲಯನ್ಸ್ ಜಿಯೋ (Reliance Jio) ಸಂಸ್ಥೆಯು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಬಾಂಬೆ (IIT Bombay) ಜತೆಗೆ ಕೆಲಸ ಮಾಡುತ್ತಿದೆ ಎಂದು ರಿಲಯನ್ಸ್ ಜಿಯೋ ಇನ್ಫೋಕಾಮ್ ಮುಖ್ಯಸ್ಥರಾದ ಆಕಾಶ್ ಅಂಬಾನಿ (Akash Ambani) ಬುಧವಾರ ಹೇಳಿದರು. ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಘಟಕವಾದ ಜಿಯೋ ಇನ್ಫೋಕಾಮ್ ನಿಂದ ಟೀವಿಗಾಗಿ ಆಪರೇಟಿವ್ ಸಿಸ್ಟಮ್ ತರುವುದಕ್ಕೆ “ಸಮಗ್ರವಾಗಿ ಚಿಂತಿಸಲಾಗುತ್ತಿದೆ” ಎಂದು ಹೇಳಿದ ಅವರು, ಕೆಲ ಸಮಯದಿಂದ ಇದಕ್ಕಾಗಿ ಕೆಲಸ ಮಾಡಲಾಗುತ್ತಿದೆ ಎಂದರು.

ಸಂಸ್ಥೆಯಿಂದ ನಡೆಸುವಂಥ ವಾರ್ಷಿಕ ತಂತ್ರಜ್ಞಾನ ಸಮಾರಂಭದಲ್ಲಿ ಅವರು ಮಾತನಾಡಿ, “ಅಭಿವೃದ್ಧಿಯ ಪರಿಸರ ವ್ಯವಸ್ಥೆ”ಯನ್ನು ರೂಪಿಸುವುದು ಕಂಪನಿಗೆ ಬಹಳ ಮುಖ್ಯ. “ಜಿಯೋ 2.0” ದೃಷ್ಟಿಯಲ್ಲಿ ಇಟ್ಟುಕೊಂಡು ಈಗಾಗಲೇ ಕೆಲಸ ನಡೆಯುತ್ತಾ ಇದೆ ಎಂದು ಅವರು ಹೇಳಿದರು.

“ನಾವು ಐಐಟಿ ಬಾಂಬೆಯೊಂದಿಗೆ ಭಾರತ್ ಜಿಪಿಟಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇವೆ,” ಎಂಬ ವಿಚಾರವನ್ನು ತಿಳಿಸಿದ ಅವರು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಜತೆಗಿನ ಪಾಲುದಾರಿಕೆ ಬಗ್ಗೆ ತಿಳಿಸುತ್ತಾ ಈ ವಿಷಯವನ್ನು ಹೇಳಿದರು. ಸದ್ಯಕ್ಕೆ ನಾವು ದೊಡ್ಡ ಭಾಷೆಗಳ ಮಾದರಿಗಳು ಮತ್ತು ಜನರೇಟಿವ್ ಎಐ (ಕೃತಕ ಬುದ್ಧಿಮತ್ತೆ) ಮೇಲೆ ಮೇಲ್ಮೈ ಕೆಲಸಗಳನ್ನು ಮಾಡಿದ್ದೇವೆ. ಮುಂದಿನ ದಶಕವನ್ನು ಈ ಅಪ್ಲಿಕೇಷನ್ ಮೂಲಕವೇ ವ್ಯಾಖ್ಯಾನಿಸಲಾಗುವುದು ಎಂದರು.

ಉತ್ಪನ್ನಗಳ ಎಲ್ಲ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆಯು ಪರಿವರ್ತನೆಯನ್ನು ತರುತ್ತಿದೆ. “ನಾವು ಕೇವಲ ನಮ್ಮ ಸಂಸ್ಥೆಯೊಳಗಿನ ಇತರ ವರ್ಟಿಕಲ್ ಘಟಕ ಅಥವಾ ವಿಭಾಗಗಳಲ್ಲಿ ಮಾತ್ರ ಇದನ್ನು ಪರಿಚಯಿಸುವ ಉದ್ದೇಶ ಹೊಂದಿಲ್ಲ. ಆದರೆ ನಾವು ಯಾವುದೆಲ್ಲ ವಲಯದಲ್ಲಿ ಕೆಲಸ ಮಾಡುತ್ತಿದ್ದೇವೋ ಅಲ್ಲೆಲ್ಲ ಎಐ ಅಳವಡಿಸಲು ಶ್ರಮಿಸುತ್ತಾ ಇದ್ದೇವೆ,” ಎಂದು ಆಕಾಶ್ ಅಂಬಾನಿ ತಿಳಿಸಿದರು. ಮಾಧ್ಯಮ ರಂಗದಲ್ಲಿ, ವಾಣಿಜ್ಯ,ಸಂವಹನ ಮತ್ತು ಸಲಕರಣೆಗಳಲ್ಲಿ ಸಹ ನಮ್ಮ ಕಂಪನಿಯು ಉತ್ಪನ್ನಗಳು ಮತ್ತು ಸೇವೆಗಳನ್ನು ಆರಂಭಿಸುತ್ತದೆ ಎಂದು ಸೇರಿಸಿದರು.

“ನಾವು ಕಳೆದ ಕೆಲ ಸಮಯದಿಂದ ಟಿವಿಗಳಿಗಾಗಿ ನಮ್ಮ ಸ್ವಂತ ಒಎಸ್ (ಆಪರೇಟಿಂಗ್ ಸಿಸ್ಟಮ್)ಗಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಅದನ್ನು ಹೇಗೆ ಪ್ರಾರಂಭಿಸಬೇಕು ಎಂಬುದರ ಕುರಿತು ನಾವು ಸಮಗ್ರವಾಗಿ ಯೋಚಿಸುತ್ತಿದ್ದೇವೆ,” ಎಂದು ಆಕಾಶ್ ಅಂಬಾನಿ ಹೇಳಿದರು. 2024ನೇ ಇಸವಿ ಕುಟುಂಬಕ್ಕೆ ವಿಶೇಷವಾದ ವರ್ಷ ಎಂದು ಹೇಳಿದ ಅವರು, ಈ ವರ್ಷ ತಮ್ಮ ಸೋದರ ಮದುವೆ ಆಗುವುದಾಗಿ ತಿಳಿಸಿದರು.

5ಜಿ ಖಾಸಗಿ ನೆಟ್‌ವರ್ಕ್‌ಗಳನ್ನು ನೀಡಲು ಕಂಪನಿಯು ಉತ್ಸುಕವಾಗಿದೆ ಎಂದು ಅವರು ಹೇಳಿದರು, ಅಲ್ಲಿ ಅದರ ಗಾತ್ರವನ್ನು ಲೆಕ್ಕಿಸದೆ ಯಾವುದೇ ಉದ್ಯಮಕ್ಕೆ 5ಜಿ ಸ್ಟಾಕ್ ಅನ್ನು ನೀಡುತ್ತದೆ ಎಂದು ಅವರು ಹೇಳಿದರು. ಮುಂದಿನ ದಶಕದಲ್ಲಿ ಭಾರತವು “ಅತಿದೊಡ್ಡ ನಾವೀನ್ಯತೆ ಕೇಂದ್ರ” ಆಗಲಿದೆ ಎಂದು ಬಣ್ಣಿಸಿದ ಆಕಾಶ್ ಅಂಬಾನಿ, ದಶಕದ ಅಂತ್ಯದ ವೇಳೆಗೆ ದೇಶವು 6 ಟ್ರಿಲಿಯನ್ ಯುಎಸ್ ಡಿ ಆರ್ಥಿಕತೆ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೃತಕ ಬುದ್ಧಿಮತ್ತೆ “ಎಲ್ಲದರಲ್ಲೂ ಬಳಕೆ ಆಗಲಿದೆ” ಎಂದು ಹೇಳಿದ ಆಕಾಶ್, ತನ್ನ ಹಾಸಿಗೆಯ ತಾಪಮಾನವನ್ನು ಎಐ ಮೂಲಕ ಹೇಗೆ ನಿಯಂತ್ರಿಸುವುದು ಎಂಬುದನ್ನು ನಿನ್ನೆ ತನ್ನ ಭಾವ ತೋರಿಸಿದರು ಎಂಬುದನ್ನು ವಿವರಿಸಿದರು. “ನನ್ನ ಪಾಲಿಗೆ, ಹೌದು ಎಐ ಅಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್. ಆದರೆ ಎಐ ಅಂದರೆ ಆಲ್ ಇನ್ ಕ್ಲೂಡೆಡ್ (ಎಲ್ಲವನ್ನು ಒಳಗೊಂಡಿರುತ್ತದೆ),” ಎಂದು ಅವರು ಹೇಳಿದರು.

ತಾನು ಅನುಸರಿಸುತ್ತಿರುವುದು ಭಾರತಕ್ಕೆ ಒಳ್ಳೆಯದು ಎಂಬ ನಂಬಿಕೆಯೊಂದಿಗೆ ಜಿಯೋ ಕಂಪನಿಯು ಕೆಲಸ ಮಾಡುತ್ತದೆ ಮತ್ತು ಹಣವನ್ನು ದೇಶಕ್ಕೆ ಸಲ್ಲಿಸಿದ ಸೇವೆಯ “ಉಪಉತ್ಪನ್ನ” (ಬೈ ಪ್ರಾಡಕ್ಟ್) ಎಂದರು. ಜಿಯೋವನ್ನು ವಿಶ್ವದ ಅತಿದೊಡ್ಡ ಸ್ಟಾರ್ಟ್‌ಅಪ್ ಎಂದು ಕರೆದ ಆಕಾಶ್ ಅಂಬಾನಿ, ಯುವ ಉದ್ಯಮಿಗಳು ವಿಫಲರಾಗುತ್ತೇವೆ ಎಂದು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಅಂಬಾನಿ ಅವರು ಉದ್ಯಮಿಗಳಿಗೆ ಸಾಮಾಜಿಕ ಒಳಿತಿಗಾಗಿ ಕೆಲಸ ಮಾಡಲು ಮನವಿ ಮಾಡಿದರು. ಅದಲ್ಲೂ ವಿಶೇಷವಾಗಿ ಯಾರು ಗ್ರಾಹಕ ವಿಭಾಗದಲ್ಲಿ ತೊಡಗಿಕೊಂಡಿರುತ್ತಾರೋ ಅಂಥವರಿಗೆ ಮನವಿ ಮಾಡಿದರು. ಮತ್ತು ಪ್ರತಿಯೊಬ್ಬರೂ ತಾವು ಮಾಡುವ ಕೆಲಸದ ಬಗ್ಗೆ ಅದಮ್ಯವಾದ ಉತ್ಸಾಹವನ್ನು ಹೊಂದಿರಬೇಕೆಂದು ಕೇಳಿಕೊಂಡರು.

ತಂತ್ರಜ್ಞಾನವು ಜನಸಂಖ್ಯೆ ಮತ್ತು ಜಾತಿ ಸೇರಿದಂತೆ ಎಲ್ಲ ಎಲ್ಲೆಗಳನ್ನು ಮೀರಿದೆ ಮತ್ತು ಜಿಯೋ ಯಾವಾಗಲೂ ಭವಿಷ್ಯದ ತಂತ್ರಜ್ಞಾನದ ಮೇಲೆ ಕಣ್ಣಿಡುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Jio Airfiber: ಕರ್ನಾಟಕದ 54 ಪಟ್ಟಣಗಳಲ್ಲಿ ರಿಲಯನ್ಸ್ ಜಿಯೋ ಏರ್ ಫೈಬರ್ ಸೇವೆ

Exit mobile version