ನವ ದೆಹಲಿ: ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ( International Monetary Fund ) ಭಾರತದ ಜಿಡಿಪಿ ಮುನ್ನೋಟವನ್ನು 2023-24 ಸಾಲಿಗೆ 6.1%ರಿಂದ 5.9%ಕ್ಕೆ ಕಡಿತಗೊಳಿಸಿದೆ. ಹೀಗಿದ್ದರೂ, ವಿಶ್ವದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತ ಸೇರಿದೆ ಎಂದು ಐಎಂಎಫ್‌ನ ಇತ್ತೀಚಿನ ವರದಿ (IMF report) ತಿಳಿಸಿದೆ.
ಜಾಗತಿಕ ಆರ್ಥಿಕತೆ (Global economy) ಮಂದಗತಿಯಲ್ಲಿ ಇರುವುದರಿಂದ, ರಷ್ಯಾ-ಉಕ್ರೇನ್ ಸಂಘರ್ಷದ ಅನಿಶ್ಚಿತತೆ ಮತ್ತು ಕೋವಿಡ್ ಬಿಕ್ಕಟ್ಟಿನ ಪರಿಣಾಮಗಳಿಂದಾಗಿ ಜಿಡಿಪಿ ಮುನ್ನೋಟವನ್ನು ಕಡಿತಗೊಳಿಸಿರುವುದಾಗಿ ಐಎಂಎಫ್‌ನ ಏಷ್ಯಾ &ಪೆಸಿಫಿಕ್ ವಲಯದ ಡೆಪ್ಯುಟಿ ಡೈರೆಕ್ಟರ್ ಆನ್ನೆ ಮೇರಿ ತಿಳಿಸಿದ್ದಾರೆ.
ಪ್ರಸಕ್ತ ಸಾಲಿಗೆ ಭಾರತದ ಹಣದುಬ್ಬರ 4.9%ಕ್ಕೆ ಇಳಿಕೆಯಾಗಬಹುದು. 2024-25ರಲ್ಲಿ 4.4%ಕ್ಕೆ ತಗ್ಗಬಹುದು ಎಂದು ಅಂದಾಜಿಸಿದೆ. ಭಾರತದಲ್ಲಿ ಖರ್ಚು ವೆಚ್ಚಗಳು ಇಳಿಮುಖವಾಗಿದೆ. ಹೂಡಿಕೆಯ ಪ್ರಮಾಣ ಹೆಚ್ಚುತ್ತಿದೆ. ಇದು ಬೆಳವಣಿಗೆಗೆ ಕಾರಣವಾಗಬಹುದು. ಭಾರತ ಮತ್ತು ಚೀನಾ ತಂತ್ರಜ್ಞಾನ ಆವಿಷ್ಕಾರಗಳ ತಾಣವಾಗುತ್ತಿದೆ. ಮೂಲಸೌಕರ್ಯಗಳಿಗೆ ಮಾಡಲಾಗುತ್ತಿರುವ ಹೂಡಿಕೆ ಮಧ್ಯಂತರ ಮತ್ತು ದೀರ್ಘಕಾಲೀನ ಅವಧಿಯಲ್ಲಿ ಸಕಾರಾತ್ಮಕ ಪ್ರಭಾವ ಬೀರಲಿದೆ ಎಂದು ಐಎಂಎಫ್ ತಿಳಿಸಿದೆ. 2023-24ರಲ್ಲಿ ಚೀನಾದಲ್ಲೂ ಖಾಸಗಿ ಹೂಡಿಕೆಗಳು ಹೆಚ್ಚಲಿದ್ದು ಆರ್ಥಿಕ ಚಟುವಟಿಕೆಗಳು ಗಣನೀಯ ಸುಧಾರಿಸಲಿವೆ. ಹೀಗಿದ್ದರೂ ಏಷ್ಯಾದ ದೇಶಗಳಿಗೆ ಹಣದುಬ್ಬರ ನಿಯಂತ್ರಣ ಸವಾಲಾಗಿ ಪರಿಣಮಿಸಲಿದೆ ಎಂದು ತಿಳಿಸಿದೆ.
ಭಾರತದ ಆರ್ಥಿಕತೆ ಪ್ರಬಲವಾಗಿ ಬೆಳೆಯುತ್ತಿದೆ. (bright spot) ಜಾಗತಿಕ ಅಭಿವೃದ್ಧಿಯ ಚಾಲಕ ಶಕ್ತಿಯಾಗಲಿದೆ. ಅದು ದೇಶಗಳನ್ನು ಒಗ್ಗೂಡಿಸುವ ವಿಶಿಷ್ಟ ಸ್ಥಾನದಲ್ಲಿದೆ. ಜಾಗತಿಕ ಆರ್ಥಿಕತೆ ಅನಿಶ್ಚಿತತೆಯಲ್ಲಿ ಇರುವ ಸಂದರ್ಭದಲ್ಲಿ ಭಾರತದ ಸ್ಥಾನ ವಿಶಿಷ್ಟವಾಗಿದೆ. ಜಿ20 ಗ್ರೂಪ್‌ನ ಅಧ್ಯಕ್ಷ ಸ್ಥಾನವನ್ನೂ ವಹಿಸಿಕೊಂಡಿದೆ.