Site icon Vistara News

GOOD NEWS: ಆಮದು ಸುಂಕ ರದ್ದು, ಸೋಯಾಬೀನ್‌, ಸೂರ್ಯಕಾಂತಿ ಎಣ್ಣೆ ದರದಲ್ಲಿ ಶೀಘ್ರ ಇಳಿಕೆ ನಿರೀಕ್ಷೆ

palm oil

ಬೆಲೆ ಇಳಿಕೆಗೆ ಕೇಂದ್ರ ಸರಕಾರದ ಕ್ರಮಗಳು

ನವದೆಹಲಿ: ದೇಶದಲ್ಲಿ ಆಹಾರ ವಸ್ತುಗಳ ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಸರಕಾರ ಮಂಗಳವಾರ ವಾರ್ಷಿಕ 20 ಲಕ್ಷ ಟನ್‌ ಕಚ್ಚಾ ಸೋಯಾಬೀನ್‌ ತೈಲ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ರದ್ದುಪಡಿಸಿದೆ. ಈ ಆಮದು ಸುಂಕ ವಿನಾಯಿತಿ 2022-23 ಮತ್ತು 2023-24 ಕ್ಕೆ ಅನ್ವಯವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಇದರಿಂದಾಗಿ ಶೀಘ್ರದಲ್ಲೇ ಕಚ್ಚಾ ಸೋಯಾಬೀನ್‌ ತೈಲ ಮತ್ತು ಸೂರ್ಯಕಾಂತಿಎಣ್ಣೆಯ ದರದಲ್ಲಿ ಇಳಿಕೆಯಾಗುವ ನಿರೀಕ್ಷೆ ಉಂಟಾಗಿದೆ. ಗ್ರಾಹಕರಿಗೆ ನಿರಾಳವಾಗಲಿದೆ.

ಕಳೆದ ವಾರ ಸರಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಉಕ್ಕು ಮತ್ತು ಪ್ಲಾಸ್ಟಿಕ್‌ ತಯಾರಿಕೆಗೆ ಸಂಬಂಧಿಸಿದ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ರದ್ದುಪಡಿಸಿತ್ತು. ಮಾತ್ರವಲ್ಲದೆ ಕಬ್ಬಿಣದ ಅದಿರು ರಫ್ತಿಗೆ ಸುಂಕವನ್ನು ಏರಿಸಲಾಗಿತ್ತು. ಇವೆಲ್ಲವೂ ದರಗಳನ್ನು ಹತೋಟಿಯಲ್ಲಿಡಲು ಸಹಕಾರಿಯಾಗಲಿದೆ.

ಇಂಧನಗಳಿಂದ ತರಕಾರಿ ಮತ್ತು ಅಡುಗೆ ಎಣ್ಣೆಯ ತನಕ ಪ್ರತಿಯೊಂದು ವಸ್ತುವಿನ ದರ ಹೆಚ್ಚಳದ ಪರಿಣಾಮ ಕಳೆದ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ ಶೇ.15.08ಕ್ಕೆ ಮತ್ತು ರಿಟೇಲ್‌ ಹಣದುಬ್ಬರ ಶೇ.7.79ಕ್ಕೆ ಏರಿಕೆಯಾಗಿತ್ತು.

ಸಕ್ಕರೆ ರಫ್ತಿಗೆ ಜೂನ್‌ 1ರಿಂದ ಮಿತಿ
ಮಹತ್ವದ ಬೆಳವಣಿಗೆಯಲ್ಲಿ ಸರಕಾರ ಸಕ್ಕರೆಯ ರಫ್ತಿಗೆ ಜೂನ್‌ 1 ರಿಂದ ಅನ್ವಯವಾಗುವಂತೆ ಮಿತಿಯನ್ನು ವಿಧಿಸಿದೆ. ಅಕ್ಟೋಬರ್‌ 31 ರ ತನಕ ಇದು ಜಾರಿಯಲ್ಲಿ ಇರಲಿದೆ. ದೇಶಿ ಮಾರುಕಟ್ಟೆಯಲ್ಲಿ ಸಕ್ಕರೆಯ ದರವನ್ನು ನಿಯಂತ್ರಣದಲ್ಲಿ ಇರಿಸಲು ಇದರಿಂದ ಸಾಧ್ಯವಾಗಲಿದೆ. ವಿದೇಶಾಂಗ ವ್ಯಾಪಾರ ನಿರ್ದೇಶನಾಲಯವು (ಡಿಜಿಎಫ್‌ಟಿ) ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಕಳೆದ 6 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಕ್ಕರೆ ರಫ್ತಿಗೆ ಮಿತಿ ವಿಧಿಸಲಾಗುತ್ತಿದೆ. ಅದರ ಪ್ರಕಾರ, ಸರಕಾರ 100 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಅನುಮತಿ ನೀಡಲಿದೆ. ಈ ನಿರ್ಬಂಧಗಳು ಯುರೋಪ್‌ ಮತ್ತು ಅಮೆರಿಕಕ್ಕೆ ವಿಶೇಷ ಕೋಟಾ ಅಡಿಯಲ್ಲಿ ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ. ಭಾರತ ಸಕ್ಕರೆಯ ಅತ್ಯಂತ ದೊಡ್ಡ ಉತ್ಪಾದಕ ಹಾಗೂ ಎರಡನೇ ಅತಿ ದೊಡ್ಡ ರಫ್ತುದಾರ ರಾಷ್ಟ್ರವಾಗಿದೆ. ರಷ್ಯಾ ಮತ್ತು ಉಕ್ರೇನ್‌ ಸಮರದ ಬಳಿಕ ಜಗತ್ತಿನ ಹಲವು ಭಾಗಗಳಲ್ಲಿ ಆಹಾರ ವಸ್ತುಗಳ ದರ ಏರುತ್ತಿದ್ದು, ನಾನಾ ರಾಷ್ಟ್ರಗಳು ರಫ್ತು ಮಿತಿ ಮತ್ತು ನಿರ್ಬಂಧಗಳನ್ನು ವಿಧಿಸುತ್ತಿವೆ.

ಆಹಾರ ಹಣದುಬ್ಬರ ಕಳೆದ 6 ತಿಂಗಳಿನಲ್ಲಿ ಶೇ.1.87ರಿಂದ ಶೇ.8.38ಕ್ಕೆ ಏರಿಕೆಯಾಗಿದೆ. ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಶೇ.4.91ರಿಂದ ಶೇ.7.79ಕ್ಕೆ ವೃದ್ಧಿಸಿದೆ. ತಿಂಗಳಿನಿಂದ ತಿಂಗಳಿಗೆ ಸಗಟು ಹಣದುಬ್ಬರ ಸೂಚ್ಯಂಕ ಏರುತ್ತಿದೆ.


ಪೆಟ್ರೋಲ್‌ನಿಂದ ಮಾತ್ರ ಬೆಲೆ ಏರಿಕೆ ಅಲ್ಲ
ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯೊಂದರಿಂದಲೇ ಹಣದುಬ್ಬರ ಏರಿಕೆಯಾಗುವುದಿಲ್ಲ ಎಂದು ಆರ್‌ಬಿಐನ ಮಾಜಿ ಗವರ್ನರ್‌ ಮತ್ತು ಆರ್ಥಿಕ ತಜ್ಞರಾದ ಸಿ. ರಂಗರಾಜನ್‌ ತಿಳಿಸಿದ್ದಾರೆ.
ತಿರುಚ್ಚಿಯಲ್ಲಿ ವಿಚಾರಸಂಕಿರಣವೊಂದರಲ್ಲಿ ಮಾತನಾಡಿದ ಅವರು, ನಗದು ಲಭ್ಯತೆಯನ್ನು ನಿಯಂತ್ರಿಸದೆ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದರು. ವ್ಯವಸ್ಥೆಗೆ ನಗದು ಪೂರೈಕೆಯನ್ನು ಮಾಡಿದಾಗ ಹಣದುಬ್ಬರ ಉಂಟಾಗುತ್ತದೆ. 2020ರ ಏಪ್ರಿಲ್‌ನಲ್ಲಿ ದೇಶದ ಜಿಡಿಪಿ 145.2 ಲಕ್ಷ ಕೋಟಿ ರೂ. ಇತ್ತು. 2022ರ ಏಪ್ರಿಲ್‌ ವೇಳೆಗೆ 147.7 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ ಎಂದು ರಂಗರಾಜನ್‌ ವಿವರಿಸಿದರು.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದು ಬಹಳ ಮುಖ್ಯ. ಕಡಿಮೆ ಆದಾಯದ ಜನತೆಗೆ ಇದರಿಂದ ಉಪಯೋಗವಾಗುತ್ತದೆ. ಕೋವಿಡ್‌ ಎರಡನೆ ಅಲೆ ತಗ್ಗಿದ ಬಖಳಿಕ ಭಾರತದ ಆರ್ಥಿಕತೆ ಚೇತರಿಸುತ್ತಿದೆ. ಇದು ಮತ್ತಷ್ಟು ಸುಧಾರಿಸುವ ನಿರೀಕ್ಷೆ ಇದೆ ಎಂದರು.

ಇದನ್ನೂ ಓದಿ: ಬೆಲೆ ಏರಿಕೆ ನಿಯಂತ್ರಿಸಲು ಗೋಧಿಯ ಬಳಿಕ ಸಕ್ಕರೆ ರಫ್ತಿಗೆ ಮಿತಿ ವಿಧಿಸಲು ಕೇಂದ್ರ ಸರಕಾರ ಚಿಂತನೆ

Exit mobile version