ಸ್ಯಾನ್ ಫ್ರಾನ್ಸಿಸ್ಕೊ: ಅಮೆರಿಕದ ಯುವ ತಂತ್ರಜ್ಞಾನಿ ಉದ್ಯಮಿ ಅಲೆಕ್ಸಾಂಡರ್ ವಾಂಗ್ ಗೆ ಈಗ ಕೇವಲ 25 ವರ್ಷ ವಯಸ್ಸು. ಆದರೆ ತನ್ನದೇ ಆದ “ಸ್ಕೇಲ್ ಎಐ” ಎಂಬ ಐಟಿ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಕಂಪನಿಯ ಮಾಲೀಕ. ಆತ 2016ರಲ್ಲಿ ಸ್ಥಾಪಿಸಿದ್ದ ಈ ಕಂಪನಿಯಲ್ಲಿ 600 ಮಂದಿ ಉದ್ಯೋಗಿಗಳಿದ್ದಾರೆ. ಹೂಡಿಕೆದಾರರು ಸುಮಾರು 603 ದಶಲಕ್ಷ ಡಾಲರ್ (ಅಂದಾಜು 4,650 ಕೋಟಿ ರೂ.) ಬಂಡವಾಳ ಹೂಡಿಕೆ ಮಾಡಿದ್ದಾರೆ. ಕಂಪನಿಯ ಶೇ.15ರಷ್ಟು ಷೇರುಗಳನ್ನು ಹೊಂದಿರುವ ಅಲೆಕ್ಸಾಂಡರ್ ಸ್ವಪ್ರಯತ್ನದಿಂದ ವಿಶ್ವದ ಕಿರಿಯ ಬಿಲಿಯನೇರ್ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಅಂದಹಾಗೆ ಸ್ಕೇಲ್ ಐ ಕಂಪನಿಯ ಮಾರುಕಟ್ಟೆ ಮೌಲ್ಯ 7.3 ಶತಕೋಟಿ ಡಾಲರ್ ಗೆ (ಅಂದಾಜು 56,200 ಕೋಟಿ ರೂ.) ವೃದ್ಧಿಸಿದೆ! ಆತನ ಕಂಪನಿ ಸದ್ಯ ರಷ್ಯಾದ ಬಾಂಬ್ ದಾಳಿಗೆ ಉಕ್ರೇನ್ ಮೇಲೆ ಆಗಿರುವ ಹಾನಿಯನ್ನು ಕೃತಕ ಬುದ್ಧಿಮತ್ತೆಯ ಮೂಲಕ ಅಳೆಯುವ ಯೋಜನೆಯನ್ನೂ ಹಮ್ಮಿಕೊಂಡಿದೆ. ಅಮೆರಿಕದ ವಾಯುಪಡೆಗೆ ಮತ್ತು ಸೇನೆಗೆ ತಂತ್ರಜ್ಞಾನದ ನೆರವು ನೀಡುವ 110 ದಶಲಕ್ಷ ಡಾಲರ್ ಮೌಲ್ಯದ ಕೆಲಸಗಳನ್ನು ಗುತ್ತಿಗೆಗೆ ಪಡೆದುಕೊಂಡಿದೆ.
ಸ್ಕೇಲ್ ಐನ ಕೃತಕ ಬುದ್ಧಿಮತ್ತೆ ಟೆಕ್ನಾಲಜಿಯು ಮನುಷ್ಯರಿಗಿಂತ ಬೇಗನೆ ಉಪಗ್ರಹದಿಂದ ಪಡೆದ ಚಿತ್ರಗಳ ವಿಶ್ಲೇಷಣೆ ಮಾಡಬಲ್ಲುದು. ಆದ್ದರಿಂದ ಕೇವಲ ಸೇನೆಗೆ ಮಾತ್ರವಲ್ಲದೆ ಇತರ ಕ್ಷೇತ್ರಗಳಿಗೂ ಈ ಕಂಪನಿಯ ಸೇವೆ ಅಗತ್ಯವಾಗುತ್ತಿದೆ ಎಂದು ಫೋರ್ಬ್ಸ್ ವರದಿ ತಿಳಿಸಿದೆ. ಈಗಾಗಲೇ ಫ್ಲೆಕ್ಸ್‌ಪೋರ್ಟ್ ಮತ್ತು ಜನರಲ್ ಮೋಟಾರ್ಸ್ ಸೇವೆ ಪಡೆದಿದೆ.
ಚಿಕ್ಕಂದಿನಲ್ಲೇ ಅಲೆಕ್ಸಾಂಡರ್ ವಾಂಗ್‌ಗೆ ಗಣಿತ ಎಂದರೆ ಬಾಳೆ ಹಣ್ಣು ಸುಲಿದು ತಿಂದಷ್ಟು ಸಲೀಸಾಗಿತ್ತು. ರಾಷ್ಟ್ರೀಯ ಗಣಿತ ಸ್ಪರ್ಧೆ, ಸಾಫ್ಟ್‌ವೇರ್ ಕೋಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತಿದ್ದ. ಶಾಲೆಯಲ್ಲಿ ಕೋಡಿಂಗ್ ಅನ್ನೇ ಆಯ್ಕೆ ಮಾಡಿಕೊಂಡಿದ್ದ. ಐಟಿ ತಂತ್ರಜ್ಞಾನದಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದ ಅಲೆಕ್ಸಾಂಡರ್ ವಾಂಗ್, ತನ್ನ 19ನೇ ವಯಸ್ಸಿನಲ್ಲಿ ಮಸ್ಯಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಶಿಕ್ಷಣವನ್ನು ಮೊಟಕುಗೊಳಿಸಿ, ಸಾಫ್ಟ್‌ಚೇರ್ ಕಂಪನಿ ಸ್ಕೇಲ್ ಎಐ ಕಟ್ಟಲು ತೊಡಗಿಸಿ, ಅದರಲ್ಲಿ ಭಾರಿ ಯಶಸ್ಸನ್ನೂ ಗಳಿಸಿದ. ಇಂದು ಸುಮಾರು 300 ಕಂಪನಿಗಳಿಗೆ ಸಾಫ್ಟ್‌ವೇರ್ ನೆರವನ್ನು ಸ್ಕೇಲ್ ಎಐ ನೀಡುತ್ತಿದೆ.
ಫೋರ್ಬ್ಸ್ ನಿಯತಕಾಲಿಕೆ ಸ್ವಪ್ರಯತ್ನದಿಂದ ಬಿಲಿಯನೇರ್‌ಗಳಾದವರ ಪಟ್ಟಿಯನ್ನು ಪ್ರಕಟಿಸುತ್ತದೆ. ಇತ್ತೀಚಿನ ಪಟ್ಟಿಯಲ್ಲಿ 25 ವರ್ಷ ವಯಸ್ಸಿನ ಅಲೆಕ್ಸಾಂಡರ್ ವಾಂಗ್ ಅತಿ ಕಿರಿಯ ಮತ್ತು ಕಾಲೇಜ್ ಡ್ರಾಪ್ ಔಟ್. ವಾಂಗ್ ಅವರ ಪೋಷಕರು ಭೌತ ಶಾಸ್ತ್ರದ ವಿಜ್ಞಾನಿಗಳು. ಸೇನೆಯ ಯಂತ್ರೋಪಕರಣ ವಿಭಾಗಕ್ಕೆ ಸೇವೆ ಸಲ್ಲಿಸಿದವರು.
” ಬಿಸಿನೆಸ್ ಡೇಟಾಗಳು (ದತ್ತಾಂಶ) ದಶಕಗಳಿಂದ ನಮ್ಮಲ್ಲಿವೆ. ಆದರೆ ಕೃತಕ ಬುದ್ಧಿಮತ್ತೆ (ಎಐ) ನಿಮಗೆ ಚಾರ್ಟ್ ಗಳಲ್ಲಿ ತೋರಿಸುವುದಕ್ಕಿಂತಲೂ ಒಂದು ಹೆಜ್ಜೆ ಮುಂದಿವೆ. ಇದು ಒಂದು ಉತ್ತರವನ್ನು ಕೊಡುತ್ತದೆʼʼ ಎನ್ನುತ್ತಾನೆ ಅಲೆಕ್ಸಾಂಡರ್ ವಾಂಗ್.
ಕಾರ್ಪೊರೇಟ್ ವಲಯದಲ್ಲಿ ಡೇಟಾ ಗಳಿಗೆ (ದತ್ತಾಂಶ) ತುಂಬ ಬೇಡಿಕೆ ಇದೆ. ಅದು ಮಾತ್ರ ಸಾಲದು, ಅದರ ಜತೆಗೆ ಕೃತಕ ಬುದ್ಧಿಮತ್ತೆಯೂ ಬೇಕು ಎಂಬುದನ್ನು ಎಳೆಯ ವಯಸ್ಸಿನಲ್ಲೇ ಅರಿತುಕೊಂಡಿದ್ದ ವಾಂಗ್. ನಾನಾ ಕ್ಷೇತ್ರಗಳಲ್ಲಿ ಕಂಪನಿಗಳು ಆರ್ಡರ್‌ಗಳು, ವರ್ಗಾವಣೆಗಳ ವಿವರಗಳು, ವೆಬ್ ಸೈಟ್ ಟ್ರಾಫಿಕ್, ಇನ್ವೆಂಟರಿ ಮಟ್ಟ, ಸಾಗಣೆಯ ದರ ಇತ್ಯಾದಿ ಮಾಹಿತಿಗಳನ್ನು ಕಲೆ ಹಾಕುತ್ತವೆ. ಆದರೆ ಅವುಗಳಿಂದ ಏನು ಮಾಡುವುದು ಎಂಬುದು ಮುಖ್ಯ,. ಕ್ಲೌಡ್-ಕಂಪ್ಯೂಟಿಂಗ್ ಪರಿಣಾಮ ಕಚ್ಚಾ ಡೇಟಾಗಳನ್ನು ವ್ಯಾಪಕವಾಗಿ ಸಂಗ್ರಹಿಸಬಹುದು. ಆದರೆ ಸ್ಕೇಲ್ ಎಐ ಕಂಪನಿ ಈ ದತ್ತಾಂಶಗಳನ್ನು ಆಟೊಮ್ಯಾಟಿಕ್ ಆಗಿ ವಿಶ್ಲೇಷಿಸುತ್ತದೆ ಎನ್ನುತ್ತಾರೆ ವಾಂಗ್. ಹೀಗಾಗಿಯೇ ಅವರ ಕಂಪನಿ ತನ್ನ ಛಾಪನ್ನು ಮೂಡಿಸಿದೆ. ವಾಂಗ್ ಬಿಲಿಯನೇರ್ ಆಗಿದ್ದಾರೆ.