ಬೆಂಗಳೂರು: ಸರ್ಕಾರ ಐಟಿ ರಿಟರ್ನ್ ಮಾಡದ ತೆರಿಗೆದಾರರಿಗೆ 1 ಲಕ್ಷ ನೋಟಿಸ್‌ಗಳನ್ನು ಜಾರಿಗೊಳಿಸಿದೆ ಎಂದು (Income tax notice) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. (non-filing of returns) ಸರಿಯಾದ ಆದಾಯ ನಮೂದಿಸದವರಿಗೂ ನೋಟಿಸ್ ರವಾನಿಸಲಾಗಿದೆ.
50 ಲಕ್ಷ ರೂ. ಆಸುಪಾಸಿನ ತನಕ ಆದಾಯ ಪತ್ತೆಯಾಗಿರುವ ಪ್ರಕರಣಗಳಲ್ಲಿ ನೋಟಿಸ್ ರವಾನಿಸಲಾಗಿದೆ. ಪ್ರಸಕ್ತ ಸಾಲಿನ ಅಂತ್ಯಕ್ಕೆ ಪ್ರಕರಣಗಳು ಇತ್ಯರ್ಥ ಆಗುವ ನಿರೀಕ್ಷೆ ಇದೆ. ಇದುವರೆಗೆ 80 ಲಕ್ಷ ರೂ. ರಿಫಂಡ್ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸಿಬಿಡಿಟಿಯ 164ನೇ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 2022-23ರಲ್ಲಿ ಇದುವರೆಗೆ 4 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಅದರಲ್ಲಿ ಅರ್ಧಕ್ಕೂ ಹೆಚ್ಚು ಐಟಿಆರ್‌ಗಳನ್ನು ಸಂಸ್ಕರಿಸಲಾಗಿದೆ. 4-6 ವರ್ಷ ಹಳೆಯ ರಿಟರ್ನ್‌ಗಳಿಗೆ ಸಂಬಂಧಿಸಿ ನೋಟಿಸ್ ರವಾನಿಸಲಾಗಿದೆ. ಈ ಎಲ್ಲ ನೋಟಿಸ್‌ಗಳನ್ನು ಸಮಗ್ರ ಪರಿಶೀಲನೆಯ ಬಳಿಕವಷ್ಟೇ ಕಳಿಸಲಾಗಿದೆ. ಹಾಗೂ ಇದೆಲ್ಲವೂ ಕ್ಲಿಯರ್ ಆಗುವ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.
ಆದಾಯ ತೆರಿಗೆ ಕಾಯಿದೆಯ ಪ್ರಕಾರ 6 ವರ್ಷಗಳ ಹಿಂದಿನ ತೆರಿಗೆ ಅಸೆಸ್‌ಮೆಂಟ್ ಅನ್ನು ಮತ್ತೊಮ್ಮೆ ಪರಿಶೀಲನೆ ಮಾಡಬಹುದು. ಈ ಹಿಂದೆ ತೆರಿಗೆದಾರರು 10 ವರ್ಷಗಳ ತನಕದ ಟ್ಯಾಕ್ಸ್ ರೆಕಾರ್ಡ್‌ಗಳನ್ನು ಇಟ್ಟುಕೊಳ್ಳಬೇಕಾಗಿರುತ್ತಿತ್ತು. ಆದರೆ ಈಗ 6 ವರ್ಷಕ್ಕಿಳಿಸಲಾಗಿದೆ. 4-5-6 ವರ್ಷ ಹಳೆಯ ಕೇಸ್‌ಗಳನ್ನು ನಿರ್ದಿಷ್ಟ ಸಂದರ್ಭ ಮಾತ್ರ ಮತ್ತೆ ತೆರೆಯಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕಳೆದ 4 ವರ್ಷಗಳಲ್ಲಿ ಐಟಿಆರ್ ಸಲ್ಲಿಸುವವರ ಸಂಖ್ಯೆಯಲ್ಲೂ 14% ಏರಿಕೆಯಾಗಿದೆ. ಆದಾಯ ತೆರಿಗೆ ಇಲಾಖೆ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಬಹಳಷ್ಟು ಕೆಲಸಗಳು ಬಾಕಿಯಾಗಿದೆ ಎಂದು ಸಿಬಿಡಿಟಿ ಮುಖ್ಯಸ್ಥ ನಿತಿನ್ ಗುಪ್ತ ತಿಳಿಸಿದ್ದಾರೆ.
ಇದನ್ನೂ ಓದಿ: ITR Filing : ಐಟಿ ರಿಟರ್ನ್‌ನಲ್ಲಿ ಎಷ್ಟು ವಿಧಗಳಿವೆ? ಯಾರು ಯಾವುದನ್ನು ಬಳಸಬೇಕು?
ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನ ಜುಲೈ 31 ಆಗಿದೆ. ಇದನ್ನು ಮುಂದೂಡುವ ಸಾಧ್ಯತೆ ಇಲ್ಲ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ಸಲ ಹೆಚ್ಚು ಐಟಿ ರಿಟರ್ನ್ ಸಲ್ಲಿಕೆಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.