ಆದಾಯ ತೆರಿಗೆ ಎಂದರೇನು? ನಾವೇಕೆ ಅದನ್ನು ಕೊಡಬೇಕು? ನಾವು ಆದಾಯ ತೆರಿಗೆ ( Income Tax ) ಕೊಡುತ್ತಿದ್ದೇವೆಯೇ? ಈ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡೋಣ. ನಮ್ಮ ಆದಾಯಕ್ಕೆ ಪ್ರತಿಯಾಗಿ ನಾವು ಕೊಡುವ ತೆರಿಗೆಯೇ ಆದಾಯ ತೆರಿಗೆ. ಆದ್ದರಿಂದ ಆದಾಯ ಮತ್ತು ತೆರಿಗೆ ಬಗ್ಗೆ ನಮಗೆ ತಿಳಿದಿರಬೇಕು. ತೆರಿಗೆ ಎಂದರೆ ಅರ್ಹ ಆದಾಯಕ್ಕೆ ಪ್ರತಿಯಾಗಿ ಶಾಸನಬದ್ಧವಾಗಿ ಸರ್ಕಾರಕ್ಕೆ ಸಲ್ಲಿಸುವ ಹಣ. ಆದಾಯದಲ್ಲಿ ನಿಗದಿತ ಪರ್ಸೆಂಟ್ ನಷ್ಟು ಹಣವನ್ನು ಸರ್ಕಾರಕ್ಕೆ ಸಲ್ಲಿಸುವಂಥದ್ದು. ಇದನ್ನು ಆದಾಯ ತೆರಿಗೆ ಎನ್ನುತ್ತಾರೆ.
ದೇಶದಲ್ಲಿ ಉತ್ಪಾದನೆಯಾಗುವ ಸರಕುಗಳ ಮೌಲ್ಯದಲ್ಲಿ ಒಂದು ಭಾಗವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಅದನ್ನು ಅಬಕಾರಿ ಸುಂಕ ಎನ್ನುತ್ತಾರೆ. ದೇಶಕ್ಕೆ ಹೊರಗಿನಿಂದ ಬರುವ ಉತ್ಪನ್ನಗಳ ಮೇಲೆ ವಿಧಿಸುವ ಸುಂಕವನ್ನು ಕಸ್ಟಮ್ಸ್ (ಸೀಮಾ ಸುಂಕ) ಎನ್ನುತ್ತಾರೆ. ಮಾರಾಟವಾಗುವ ವಸ್ತುವಿನ ಮೌಲ್ಯವನ್ನು ಆಧರಿಸಿ ನೀಡುವ ವ್ಯಾಟ್ ತೆರಿಗೆ ಕೆಲವು ಉತ್ಪನ್ನಗಳಿಗೆ ಇದೆ. ಸೇವೆಗಳ ಮೌಲ್ಯವನ್ನು ಆಧರಿಸಿ ವಿಧಿಸುವ ಟ್ಯಾಕ್ಸ್ ಸೇವಾ ತೆರಿಗೆ. ಬಹುತೇಕ ಪರೋಕ್ಷ ತೆರಿಗೆಗಳು ಈಗ ಜಿಎಸ್‌ಟಿಗೆ (ಸರಕು ಮತ್ತು ಸೇವಾ ತೆರಿಗೆ) ಬದಲಾಗಿದೆ. ನಾವು ನೇರವಾಗಿ ಹಾಗೂ ಪರೋಕ್ಷವಾಗಿ ಸರ್ಕಾರಕ್ಕೆ ತೆರಿಗೆಯನ್ನು ನೀಡುತ್ತೇವೆ.
ನಮ್ಮ ಆದಾಯದಲ್ಲಿ ಒಂದು ಪಾಲನ್ನು ನೀಡುವ ತೆರಿಗೆಯೇ ವೈಯಕ್ತಿಕ ಆದಾಯ ತೆರಿಗೆ. ಆದಾಯಕ್ಕೆ ವಿಶಾಲವಾದ ಅರ್ಥವಿದೆ. ಹಣದ ರೂಪದಲ್ಲಿ ನಾವು ಆದಾಯ ಗಳಿಸಬಹುದು. ಆದರೆ ಎಲ್ಲವೂ ಆದಾಯವಾಗಿರುವುದಿಲ್ಲ. ಉದಾಹರಣೆಗೆ ಬ್ಯಾಂಕಿನಿಂದ ಪಡೆದ ಸಾಲವು ಆದಾಯವಲ್ಲ. ಹಾಗಂತ ಯಾವುದೇ ದುಡಿಮೆ ಇಲ್ಲದೆ ಗಳಿಸುವ ಆದಾಯಗಳಿಗೂ (ಉದಾಹರಣೆಗೆ ಲಕ್ಕಿ ಡ್ರಾ, ಲಾಟರಿ) ತೆರಿಗೆ ಇರುತ್ತದೆ. ನೀವು ಬ್ಯಾಂಕಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟರೆ ಅದಕ್ಕೆ ಬರುವ ಬಡ್ಡಿಗೂ ತೆರಿಗೆ ಕಟ್ಟಬೇಕಾಗುತ್ತದೆ.
ಇದನ್ನೂ ಓದಿ:Health Care Summit: ಜಾಗತಿಕ ಮಾರುಕಟ್ಟೆಗೆ ಬೃಹತ್ ಮಟ್ಟದಲ್ಲಿ ನಂದಿನಿ ಬ್ರಾಂಡ್ ವಿಸ್ತರಣೆ ಎಂದ ಕೆಎಂಎಫ್ ಎಂಡಿ
ಸಾಲ, ಕೃಷಿ ಆದಾಯ ಹಾಗೂ ಕೆಲವು ಸಂದರ್ಭಗಳಲ್ಲಿ ಗಿಫ್ಟ್ ಹೊರತುಪಡಿಸಿ ಉಳಿದ ಎಲ್ಲ ರೂಪಗಳಲ್ಲಿ ನಿಮಗೆ ಬರುವ ಹಣ ಅಥವಾ ಆದಾಯಕ್ಕೆ ತೆರಿಗೆ ಅನ್ವಯವಾಗುತ್ತದೆ. ನೀವು ಕಾನೂನುಬದ್ಧವಾಗಿ ಹಣ ಗಳಿಸಿದ್ದೀರೋ, ಅಕ್ರಮವೋ ಎನ್ನುವುದು ವಿಷಯವಾಗುವುದಿಲ್ಲ. ನಿಮಗೆ ಬರುವ ಆದಾಯಕ್ಕೆ ತೆರಿಗೆ ಇರುತ್ತದೆ. ನೀವು ಯಾವುದೋ ಸೈಟ್ ಖರೀದಿಸಿದ್ದೀರಿ ಎಂದು ಭಾವಿಸಿ. ಅದಕ್ಕೆ ಕಟ್ಟುವ ಪ್ರಾಪರ್ಟಿ ತೆರಿಗೆಯು ಸೈಟಿನ ಮಾಲೀಕತ್ವಕ್ಕೆ ಗ್ಯಾರಂಟಿ ಆಗಿರುವುದಿಲ್ಲ.
ಜನ ತೆರಿಗೆ ನೀಡಲು ಹಿಂಜರಿಯುವುದಿಲ್ಲ, ಆದರೆ ಕಟ್ಟಿದ ತೆರಿಗೆ ಸರಿಯಾಗಿ ಉಪಯೋಗವಾಗದಿದ್ದರೆ, ದುರ್ಬಳಕೆಯಾಗುವುದಿದ್ದರೆ ಅವರಿಗೆ ನೋವಾಗುತ್ತದೆ. ಆದ್ದರಿಂದಲೇ ತೆರಿಗೆ ಕಟ್ಟಲು ಹಿಂದೇಟು ಹಾಕುತ್ತಾರೆ. ಒಂದು ವೇಳೆ ಕಟ್ಟಿದ ತೆರಿಗೆ ಹಣ ಸರಿಯಾಗಿ ಬಳಕೆಯಾಗುವುದಿದ್ದರೆ ಜನ ಸಂತೋಷದಿಂದಲೇ ತೆರಿಗೆ ಪಾವತಿಸಬಲ್ಲರು.
ನಾವು ನೀಡುವ ತೆರಿಗೆ ಹಣವನ್ನು ಬಳಸಿ ಸರ್ಕಾರಗಳು ನಾನಾ ಉದ್ದೇಶಗಳಿಗೆ ಬಳಕೆ ಮಾಡುತ್ತವೆ. ಪ್ರತಿ ವರ್ಷ ಬಜೆಟ್‌ನಲ್ಲಿ ತೆರಿಗೆ ಹಣ ಬಳಕೆಯ ಲೆಕ್ಕಾಚಾರಗಳನ್ನು ಸರ್ಕಾರಗಳು ನೀಡುತ್ತವೆ. ನಿಮಗೆ ತೆರಿಗೆಯ ಸಂಕೀರ್ಣ ಲೆಕ್ಕಾಚಾರಗಳ ಬಗ್ಗೆ ಅರಿವು ಇರದಿದ್ದರೂ, ತೆರಿಗೆ ಹಣದಲ್ಲಿ ಸಿಗುವ ರಸ್ತೆ, ಬೀದಿ ದೀಪ, ಪಾರ್ಕ್, ಮೂಲಸೌಕರ್ಯಗಳು ಎಲ್ಲರಿಗೂ ದೊರೆಯುತ್ತವೆ.